ದೆಹಲಿ ವಿಧಾನಸಭಾ ಸ್ಥಾನಗಳಿಗೆ ಮತದಾನ

Polling for Delhi Assembly seats

ನವದೆಹಲಿ 05: ದೆಹಲಿಯ 70 ವಿಧಾನಸಭಾ ಸ್ಥಾನಗಳಿಗೆ ಬುಧವಾರ(ಫೆ5)ಮತದಾನ ನಡೆಯುತ್ತಿದೆ, ಬೆಳಗ್ಗೆ 11 ಗಂಟೆಯ ವರೆಗೆ 19.9 % ಮತದಾನ ನಡೆದಿದ್ದು ಮತದಾರರು ಉತ್ಸಾಹದಿಂದಲೇ ಹಕ್ಕು ಚಲಾಯಿಸುತ್ತಿದ್ದಾರೆ..

ಗಣ್ಯಾತೀಗಣ್ಯರಿಂದ ಮತದಾನ

ರಾಷ್ಟ್ರಪತಿ  ದ್ರೌಪದಿ ಮುರ್ಮು ಅವರು  ರಾಷ್ಟ್ರಪತಿ ಭವನದ ಸಂಕೀರ್ಣದಲ್ಲಿರುವ ಡಾ. ರಾಜೇಂದ್ರ ಪ್ರಸಾದ್ ಕೇಂದ್ರೀಯ ವಿದ್ಯಾಲಯದಲ್ಲಿನ ಮತದಾನ ಕೇಂದ್ರದಲ್ಲಿ ಮತ ಚಲಾಯಿಸಿದರು.

ಉಪರಾಷ್ಟ್ರಪತಿ ಜಗದೀಪ್ ಧನಖರ್ ಹಕ್ಕು ಚಲಾಯಿಸಿ ಮಾತನಾಡಿ, “ಮತದಾನವು ಪ್ರಜಾಪ್ರಭುತ್ವದ ಆಮ್ಲಜನಕ ಮತ್ತು ಪ್ರಜಾಪ್ರಭುತ್ವದ ಮೂಲವಾಗಿದೆ. ಇದು ಎಲ್ಲಾ ಹಕ್ಕುಗಳಿಗೆ ಮೂಲಭೂತವಾಗಿದೆ ಮತ್ತು ಇದಕ್ಕಿಂತ ದೊಡ್ಡ ಹಕ್ಕು ಇನ್ನೊಂದಿಲ್ಲ” ಎಂದರು.

ಮಾಜಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ತುಘಲಕ್ ಕ್ರೆಸೆಂಟ್‌ನಲ್ಲಿರುವ ವಿವಿಐಪಿ ಮತಗಟ್ಟೆಯಲ್ಲಿ ಮತ ಚಲಾಯಿಸಿದರು.

ದೆಹಲಿ ವಿಧಾನಸಭೆಗೆ ನಡೆಯುತ್ತಿರುವ ಚುನಾವಣೆಯಲ್ಲಿ ಮತದಾನ ಮಾಡಲು ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರು ತಮ್ಮ ಕುಟುಂಬದ ಸದಸ್ಯರೊಂದಿಗೆ ಆಗಮಿಸಿದ್ದರು. ಪೋಷಕರರು ಕುಳಿತಿದ್ದ ಗಾಲಿ ಕುರ್ಚಿಯನ್ನು ಕೇಜ್ರಿವಾಲ್ ತಳ್ಳಿಕೊಂಡು ಆಗಮಿಸಿ, ಮತ ಚಲಾಯಿಸಿದರು.

ದೆಹಲಿಯಲ್ಲಿ ಬೆಳಗ್ಗೆ 7 ಗಂಟೆಯಿಂದ ಮತದಾನ ಶುರುವಾಗಿದ್ದು, ಸಂಜೆ 6:30 ಗಂಟೆವರೆಗೂ ನಡೆಯಲಿದೆ. 1.56 ಕೋಟಿ ಮತದಾರರು ಮತ ಚಲಾವಣೆ ಮಾಡಲಿದ್ದಾರೆ. ಒಟ್ಟು 699 ಅಭ್ಯರ್ಥಿಗಳು ಕಣದಲ್ಲಿದ್ದು ಅದೃಷ್ಟ ಪರೀಕ್ಷೆಗಿಳಿದಿದ್ದಾರೆ. ಫೆಬ್ರವರಿ 8ಕ್ಕೆ ಫಲಿತಾಂಶ ಹೊರಬೀಳಲಿದೆ.