ಬೆಳಗಾವಿ 05: ತಿರುಪತಿ ತಿರುಮಲ ದೇವಸ್ಥಾನಂ(ಟಿಟಿಡಿ) ಮಾದರಿಯಲ್ಲೇ ಸವದತ್ತಿ ತಾಲ್ಲೂಕಿನ ಯಲ್ಲಮ್ಮನಗುಡ್ಡದ ಸಮಗ್ರ ಅಭಿವೃದ್ಧಿಗೆ ಯೋಜನೆ ರೂಪಿಸಲಾಗುವುದು’ ಎಂದು ಪ್ರವಾಸೋದ್ಯಮ ಸಚಿವ ಎಚ್.ಕೆ.ಪಾಟೀಲ ಹೇಳಿದರು.
ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು ‘ಈ ಬಾರಿ ಭರತ ಹುಣ್ಣಿಮೆ ವೇಳೆ ಸವದತ್ತಿ ಯಲ್ಲಮ್ಮನ ಗುಡ್ಡದಲ್ಲಿ ಜಿಲ್ಲಾಡಳಿತ ಜನಸಂದಣಿ ನಿರ್ವಹಣೆ, ಪಾರ್ಕಿಂಗ್, ಶೌಚಾಲಯ, ಎಲ್.ಇ.ಡಿ. ಸ್ಕ್ರೀನ್ ಅಳವಡಿಕೆ ಸೇರಿ ಕಾಮಗಾರಿ ಆರಂಭ ಮಾಡಲಾಗಿದೆ. ದಾಸೋಹ ಭವನ ಮತ್ತು ಮೇವು ದಾಸೋಹ ಭವನ ನಿರ್ಮಾಣಕ್ಕೆ ಒಂದು ತಿಂಗಳಿನಲ್ಲಿ ಶಂಕುಸ್ಥಾಪನೆ ಮಾಡಲು ಪ್ರಯತ್ನಿಸಲಾಗುತ್ತಿದೆ ಎಂದರು.
ಸವದತ್ತಿ ಅಭಿವೃದ್ಧಿ ಮಂಡಳಿ ಪ್ರಗತಿ ಪರಿಶೀಲನೆ ನಡೆಸಿ, ಸಣ್ಣಪುಟ್ಟ ಕಾನೂನಾತ್ಮಕ ಸಮಸ್ಯೆಗಳನ್ನು ಜಿಲ್ಲಾಡಳಿತ ಬಗೆಹರಿಸಿದೆ. ಫೆ. 12 ರಂದು ಭರತ ಹುಣ್ಣಿಮೆಗೆ ಸಕಲ ವ್ಯವಸ್ಥೆ ಮಾಡಲಾಗಿದೆ. ಕೇಂದ್ರದಿಂದ ನೂರು ಕೋಟಿ ಮಂಜೂರಾಗಿದ್ದು,ಇದು ಮಾತ್ರವಲ್ಲದೇ 20 ಕೋಟಿ ಪ್ರಸಾದ ಯೋಜನೆಯಡಿ ಮಂಜೂರಾಗಿದೆ. ಇದಲ್ಲದೇ ರಾಜ್ಯ ಸರ್ಕಾರದಿಂದ ಕೂಡ ಸಾಕಷ್ಟು ಅನುದಾನ ನೀಡಲಾಗುತ್ತಿದೆ ಎಂದು ತಿಳಿಸಿದರು.
ಇದೇವೇಳೆ, ಪ್ರವಾಸೋದ್ಯಮ ಇಲಾಖೆ ಬೆಳಗಾವಿ ಜಿಲ್ಲೆಯ ಪ್ರವಾಸಿತಾಣಗಳ ಕುರಿತು ಹೊರತಂದಿರುವ ಮಾಹಿತಿ ಪುಸ್ತಕವನ್ನು ಸಚಿವರು ಬಿಡುಗಡೆಗೊಳಿಸಿದರು.
ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಭೀಮಾಶಂಕರ ಗುಳೇದ, ರೇಣುಕಾ ಯಲ್ಲಮ್ಮ ಕ್ಷೇತ್ರದ ಅಭಿವೃದ್ಧಿ ಮಂಡಳಿ ಆಯುಕ್ತೆ ಗೀತಾ ಕೌಲಗಿ, ಪ್ರವಾಸೋದ್ಯಮ ಇಲಾಖೆ ಜಂಟಿನಿರ್ದೇಶಕಿ ಸೌಮ್ಯಾ ಬಾಪಟ್ ಇತರರಿದ್ದರು.