ಪ್ರಶಸ್ತಿ ಸ್ವೀಕರಿಸಿದ ಸಿಇಒ ರಿಷಿ ಆನಂದ
ವಿಜಯಪುರ, ಫೆ.05 : 2023-24ನೇ ಸಾಲಿನಲ್ಲಿ ಮಹಾತ್ಮಗಾಂಧಿ ನರೇಗಾ ಯೋಜನೆಯನ್ನು ಜಿಲ್ಲೆಯಲ್ಲಿ ಅತ್ಯಂತ ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಿರುವುದಕ್ಕೆ, ನರೇಗಾ ಪ್ರಶಸ್ತಿಗೆ ಜಿಲ್ಲೆಯು ಜಿಲ್ಲಾ, ತಾಲ್ಲೂಕು ಹಾಗೂ ಗ್ರಾಮ ಪಂಚಾಯತಿ ಪುರಸ್ಕಾರಕ್ಕೆ ಆಯ್ಕೆಯಾಗಿದೆ.
ಮಹಾತ್ಮ ಗಾಂಧಿ ನರೇಗಾ ಯೋಜನೆಯಡಿ ಬೆಳಗಾವಿ ವಿಭಾಗದ ಅತ್ಯುತ್ತಮ ಒಗ್ಗೂಡಿಸುವಿಕೆ ಜಿಲ್ಲಾ ಪುರಸ್ಕಾರ-ರೇಷ್ಮೆ ಇಲಾಖೆ ವಿಜಯಪುರ, ಅತ್ಯುತ್ತಮ ತಾಲ್ಲೂಕು ಪಂಚಾಯತಿ ಪುರಸ್ಕಾರ- ನಿಡಗುಂದಿ ತಾಲ್ಲೂಕು, ಅತ್ಯುತ್ತಮ ಗ್ರಾಮ ಪಂಚಾಯತಿ ಪುರಸ್ಕಾರ- ರೂಗಿ ಗ್ರಾಮ ಪಂಚಾಯತಿ ಇಂಡಿ ತಾಲ್ಲೂಕು. ಫೆ.05ರಂದು ಬೆಂಗಳೂರಿನ ವಸಂತನಗರದಲ್ಲಿರುವ ಡಾ. ಬಿ.ಆರ್ ಅಂಬೇಡ್ಕರ್ ಮೆಮೋರಿಯಲ್ ಟ್ರಸ್ಟ್ ಅಂಬೇಡ್ಕರ್ ಭವನದಲ್ಲಿ ನಡೆದ ನರೇಗಾ ಹಬ್ಬ-2025ರ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಹಾಗೂ ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ ಸಚಿವರಾದ ಪ್ರಿಯಾಂಕ ಖರ್ಗೆ ಅವರು ಜಿಲ್ಲಾಪಂಚಾಯತಿಯ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ರಿಷಿ ಆನಂದ ಅರಿಗೆ ಪ್ರಶಸ್ತಿ ಪ್ರದಾನ ಮಾಡಿದರು.
ಜಿಲ್ಲಾ ರೇಷ್ಮೆ ಇಲಾಖೆಯ ಉಪ ನಿರ್ದೇಶಕ ಸಿದ್ದರಾಜು ಎಸ್. , ನಿಡಗುಂದಿ ತಾಲೂಕಿನ ತಾಲೂಕು ಪಂಚಾಯತಿಯ ಕಾರ್ಯನಿರ್ವಾಹಕ ಅಧಿಕಾರಿ ವೆಂಕಟೇಶ ವಂದಾಲ, ಇಂಡಿ ತಾಲೂಕಿನ ತಾಲೂಕು ಪಂಚಾಯತಿಯ ಸಹಾಯಕ ನಿರ್ದೇಶಕರು(ಗ್ರಾ.ಉ) ಸಂಜಯ ಖಡಗೇಕರ, ಇಂಡಿ ತಾಲೂಕಿನ ರೂಗಿ ಗ್ರಾಮ ಪಂಚಾಯತಿಯ ಅಧ್ಯಕ್ಷರಾದ ಸೋಮವ್ವ ಯಶವಂತ ಹೊಸಮನಿ, ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳಾದ ಬಸವರಾಜ ಬಬಲಾದ, ತಾಲೂಕ ಪಂಚಾಯತಿ ಗ್ರಾಮ ಪಂಚಾಯತಿ ಹಾಗೂ ರೇಷ್ಮೆ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿ ಕಾರ್ಯಕ್ರಮದಲ್ಲಿ ಇದ್ದರು.
ಅತ್ಯುತ್ತಮ ಒಗ್ಗೂಡಿಸುವಿಕೆ ಜಿಲ್ಲಾ ಪುರಸ್ಕಾರ-ರೇಷ್ಮೆ ಇಲಾಖೆ: 2023-24ನೇ ಸಾಲಿನಲ್ಲಿ ಶೇ.100 ರಷ್ಟು ಮಾನವ ದಿನಗಳ ಗುರಿ ಸಾಧನೆ ಮಾಡಲಾಗಿದೆ. ಹೊಸ ಹಿಪ್ಪುನೇರಳೆ ತೋಟ, ಹಿಪ್ಪುನೇರಳೆ ನರ್ಸರಿ ಅಭಿವೃದ್ಧಿ, ಹಿಪ್ಪುನೇರಳೆ ಗಿಡಗಳನ್ನು ನೆಡುವ ಕಾಮಗಾರಿಗಳಲ್ಲಿ 156 ವೈಯಕ್ತಿಕ ಫಲಾನುಭವಿಗಳಿಗೆ ನರೇಗಾ ಯೋಜನೆಯಡಿ ಸಹಾಯಧನ ಒದಗಿಸಲಾಗಿದೆ ಹಾಗೂ ವೈಯಕ್ತಿಕ ಫಲಾನುಭವಿಗಳಿಗೆ ಸಕಾಲದಲ್ಲಿ ಕೂಲಿ ಪಾವತಿ ಮಾಡಲಾಗಿದೆ.
ಅತ್ಯುತ್ತಮ ತಾಲ್ಲೂಕು ಪಂಚಾಯತಿ ಪುರಸ್ಕಾರ- ನಿಡಗುಂದಿ ತಾಲ್ಲೂಕು: 2023-24ನೇ ಸಾಲಿನಲ್ಲಿ ಒಟ್ಟು 7608 ಕೂಲಿಕಾರ್ಮಿಕರಿಗೆ ಉದ್ಯೋಗ ಒದಗಿಸಿ ಶೇ.100ಕ್ಕೂ ಹೆಚ್ಚು ಮಾನವ ದಿನಗಳ ಗುರಿ ಸಾಧಿಸಲಾಗಿದೆ. ಮಹಿಳೆಯರ ಭಾಗವಹಿಸುವಿಕೆ ಮತ್ತು ವಿಶೇಷ ಚೇತನರ ಭಾಗವಹಿಸುವಿಕೆಯನ್ನು ಹೆಚ್ಚಿಸಲು ವಿವಿಧ ಜಾಗೃತಿ ಕಾರ್ಯಕ್ರಮ ಹಮ್ಮಿಕೊಂಡು ಶೇ.53.94 ರಷ್ಟು ಮಹಿಳಾ ಕೂಲಿಕಾರ್ಮಿಕರಿಗೆ ಉದ್ಯೋಗ ಒದಗಿಲಾಗಿದೆ. ಒಟ್ಟು 105 ವಿಶೇಷ ಚೇತನರಿಗೆ ಕೆಲಸ ಒದಗಿಸಿ ಸಕಾಲದಲ್ಲಿ ಅವರಿಗೆ ಉದ್ಯೋಗಕ್ಕೆ ಪ್ರತಿ ವೇತನ ಪಾವತಿ, ಶೇ.100 ರಷ್ಟು ಆಧಾರ ಜೋಡಣೆ, ಒಂಬುಡ್ಸ್ ಮನ್ ಮತ್ತು ಸಾಮಾಜಿಕ ಲೆಕ್ಕಪರಿಶೋಧನಾ ಪ್ರಕರಣಗಳ ಸಕಾಲದಲ್ಲಿ ವಸೂಲಾತಿ ಮತ್ತು ವಿಲೇವಾರಿಗೆ ಕ್ರಮವಹಿಸಲಾಗಿದೆ
ಪ್ರಮುಖವಾಗಿ ಜಲ ಸಂರಕ್ಷಣೆ ಮತ್ತು ನೈಸರ್ಗಿಕ ಸಂಪನ್ಮೂಲಗಳ ನಿರ್ವಹಣಾ ಕಾಮಗಾರಿಗಳಾದ ನೆಡುತೋಪು ನಿರ್ಮಾಣ, ಕೆರೆ, ನಾಲಾ, ಚೆಕ್ ಡ್ಯಾಮ್ ಹೂಳೆತ್ತುವುದು, ಬೋರ್ ವೆಲ್ ಮರುಪೂರಣ ಘಟಕಗಳು, ಕೃಷಿಹೊಂಡ, ಬದು ನಿರ್ಮಾಣ ಕಾಮಗಾರಿಗಳನ್ನು ಅನುಷ್ಠಾನ ಮಾಡಲಾಗಿದೆ. ಅಷ್ಟೇ ಅಲ್ಲದೇ ಶಾಲಾ ಅಭಿವೃದ್ಧಿ ಕಾಮಗಾರಿಗಳಾದ ಶಾಲಾ ಶೌಚಾಲಯ, ಅಡುಗೆ ಕೋಣೆ, ಕಾಂಪೌಂಡ್, ವಾಲಿಬಾಲ್,ಖೋಖೋ,ಕಬಡ್ಡಿರನ್ನಿಂಗ್ ಅಂಕಣಗಳ ನಿರ್ಮಾಣ, ಮಳೆ ನೀರು ಕೊಯ್ಲು ಘಟಕ, ಅಂಗನವಾಡಿ ಕಟ್ಟಡ ಕಾಮಗಾರಿಗಳನ್ನು ಅತ್ಯಂತ ಯಶಸ್ವಿಯಾಗಿ ಅನುಷ್ಠಾನಗೊಳಿಸಲಾಗಿದೆ.
ಅತ್ಯುತ್ತಮ ಗ್ರಾಮ ಪಂಚಾಯತಿ ಪುರಸ್ಕಾರ- ಇಂಡಿ ತಾಲೂಕಿನ ರೂಗಿ ಗ್ರಾಮ ಪಂಚಾಯತಿ :
2023-24ನೇ ಸಾಲಿನಲ್ಲಿ ಒಟ್ಟು 1485 ಕೂಲಿಕಾರ್ಮಿಕರಿಗೆ ಉದ್ಯೋಗ ಒದಗಿಸಿ ಶೇ.110 ರಷ್ಟು ಮಾನವ ದಿನಗಳ ಗುರಿ ಸಾಧನೆ ಮಾಡಲಾಗಿದೆ. ಮಹಿಳೆಯರ ಭಾಗವಹಿಸುವಿಕೆಯನ್ನು ಹೆಚ್ಚಿಸಲು ವಿವಿಧ ಐಇಸಿ ಚಟುವಟಿಕೆಗಳನ್ನು ಹಮ್ಮಿಕೊಂಡು ಶೇ.53 ರಷ್ಟು ಮಹಿಳಾ ಕೂಲಿಕಾರ್ಮಿಕರಿಗೆ ಉದ್ಯೋಗ ಒದಗಿಸಿದೆ ಸಕಾಲದಲ್ಲಿ ವೇತನ ಪಾವತಿ, ಶೇ.100 ರಷ್ಟು ಆಧಾರ ಜೋಡಣೆ, ಒಂಬುಡ್ಸ್ ಮನ್ ಮತ್ತು ಸಾಮಾಜಿಕ ಲೆಕ್ಕಪರಿಶೋಧನಾ ಪ್ರಕರಣಗಳ ಸಕಾಲದಲ್ಲಿ ವಸೂಲಾತಿ ಮತ್ತು ವಿಲೇವಾರಿ ಮಾಡಲಾಗಿದೆ.
ಗ್ರಾಮೀಣ ಸಂತೆ ಕಟ್ಟೆ, ಗ್ರಾಮ ಪಂಚಾಯತಿ ಕಟ್ಟಡ, ನಾಲಾ,ಚೆಕ್ ಡ್ಯಾಮ್ ಗಳ ಹೂಳೆತ್ತುವುದು, ಬೋರ್ ವೆಲ್ ಮರುಪೂರಣ ಘಟಕಗಳು, ಕೃಷಿಹೊಂಡ, ಬದು ನಿರ್ಮಾಣ, ರಸ್ತೆ ಕಾಮಗಾರಿಗಳು, ದನದ ಕೊಟ್ಟಿಗೆ, ಎರೆಹುಳು ಗೊಬ್ಬರ ಘಟಕ, ಶಾಲಾ ಪೌಷ್ಠಿಕ ಕೈತೋಟ, ಶಾಲಾ ಶೌಚಾಲಯ, ಶಾಲಾ ಆಟದ ಮೈದಾನ ಅಭಿವೃದ್ಧಿ, ಮಳೆ ನೀರು ಕೊಯ್ಲು ಘಟಕ ಕಾಮಗಾರಿಗಳನ್ನು ಅನುಷ್ಠಾನ ಪರಿಗಣಿಸಿ ಜಿಲ್ಲೆಯು ಈ ಮೂರು ವಿಭಾಗದಲ್ಲಿ ಪ್ರಶಸ್ತಿಗೆ ಭಾಜನವಾಗಿರುವುದಕ್ಕೆ ಯಶಸ್ವಿ ಅನುಷ್ಟಾನಕ್ಕೆ ಸಹಕರಿಸಿ ಶ್ರಮಿಸಿದ ಎಲ್ಲ ಅಧಿಕಾರಿ,ಸಿಬ್ಬಂದಿಗೆ ಜಿಲ್ಲಾಪಂಚಾಯತಿಯ ಸಿಇಒ ಅವರು ಅಭಿನಂದನೆ ಸಲ್ಲಿಸಿದ್ದಾರೆ ಎಂದು ಜಿಪಂ ಪ್ರಕಟಣೆ ತಿಳಿಸಿದೆ.