ಕೋಲ್ಕತಾ, ಅ 17: ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ -ಬಿಸಿಸಿಐ ಅಧ್ಯಕ್ಷರಾಗಿ ಟೀಂ ಇಂಡಿಯಾ ಮಾಜಿ ನಾಯಕ ಸೌರವ್ ಗಂಗೂಲಿ ಹೊಣೆಗಾರಿಕೆ ವಹಿಸಿಕೊಳ್ಳಲಿರುವ ಹಿನ್ನೆಲೆಯಲ್ಲಿ ಅವರು ರಾಜಕೀಯ ಸೇರಲಿದ್ದಾರೆ ಎಂಬ ದಟ್ಟ ವಂದಂತಿಗಳು ಹರಡಿವೆ.
ಬಿಸಿಸಿಐ ಅಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದ ಕೆಲವೇ ಗಂಟೆಗಳ ಮೊದಲು, ಸೌರವ್ ಗಂಗೂಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರೂ ಆಗಿರುವ ಕೇಂದ್ರ ಗೃಹ ಸಚಿವ ಅಮಿತ್ ಷಾ ಅವರನ್ನು ಭೇಟಿಯಾಗಿದ್ದರು. ರಾಜಕೀಯ ಪ್ರವೇಶಿಸುವ ಭಾಗವಾಗಿ ಅಮಿತ್ ಷಾ ರೊಂದಿಗೆ ಗಂಗೂಲಿ ಭೇಟಿ ಮಾಡಿದ್ದಾರೆ ಎಂಬ ಮಾತುಗಳು ಹರಿದಾಡಿದ್ದವು.
ಬಿಸಿಸಿಐ ಅಧ್ಯಕ್ಷ ಸ್ಥಾನಕ್ಕೆ ಸೌರವ್ ಗಂಗೂಲಿ ಅವರ ಅವಿರೋಧ ಆಯ್ಕೆಯ ಹಿಂದೆ ಅಮಿತ್ ಶಾ ಅವರ ಕೈವಾಡ ಇರುವ ಬಗ್ಗೆ ಗಂಭೀರ ಚರ್ಚೆ ಆರಂಭಗೊಂಡಿತ್ತು.
ಈ ಹಿನ್ನೆಲೆಯಲ್ಲಿ, ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಸೌರವ್ ಗಂಗೂಲಿ ಪರವಾಗಿ ಅಚಲವಾಗಿ ನಿಂತಿದ್ದಾರೆ. ಸೌರವ್ ಗಂಗೂಲಿ ಬಂಗಾಳ ಮುದ್ದಿನ ಮಗ ಎಂದು ಬಣ್ಣಿಸಿರುವ ಅವರು, ಗಂಗೂಲಿ ಜತೆ ದೂರವಾಣಿಯಲ್ಲಿ ಆಗಾಗ್ಗೆ ಮಾತನಾಡುವುದಾಗಿಯೂ ಹೇಳಿಕೊಂಡಿದ್ದಾರೆ. ಮದರ್ ತೆರೇಸಾ, ಅಮತ್ರ್ಯ ಸೇನ್ ಹಾಗೂ ಅಭಿಜಿತ್ ಬ್ಯಾನರ್ಜಿ ನೊಬೆಲ್ ಪುರಸ್ಕಾರ ಪಡೆದು ಬಂಗಾಳ ಜನರನ್ನು ಹೆಮ್ಮೆಪಡುವಂತೆ ಮಾಡಿದರು. ಗಂಗೂಲಿ ಈಗ ಅವರ ಸಾಲಿಗೆ ಸೇರಿದ್ದಾರೆ ಎಂದು ದೀದಿ ಸಂತಸ ವ್ಯಕ್ತಪಡಿಸಿದ್ದಾರೆ.
ತಮ್ಮ ರಾಜಕೀಯ ಸೇರ್ಪಡೆ ಕುರಿತು ಹಬ್ಬಿರುವ ಊಹಾಪೋಹಗಳಿಗೆ ಪ್ರತಿಕ್ರಿಯಿಸಿರುವ ಸೌರಬ್ ಗಂಗೂಲಿ, ರಾಜಕೀಯ ಪ್ರವೇಶಿಸುವುದಾಗಿ ಹಬ್ಬಿರುವ ವದಂತಿಗಳನ್ನು ಸ್ಪಷ್ಟವಾಗಿ ನಿರಾಕರಿಸಿದ್ದಾರೆ. ತಾವು ಬಿಸಿಸಿಐ ಅಧ್ಯಕ್ಷರಾಗಿ ಆಯ್ಕೆಯಾಗಲು ಯಾರ ಕೈವಾಡವೂ ಇಲ್ಲ ಎಂದು ಕಡ್ಡಿಮುರಿದಂತೆ ಹೇಳಿ, ನಾಮಪತ್ರ ಸಲ್ಲಿಸುವ ಮೊದಲು ಅಮಿತ್ ಶಾ ಭೇಟಿಯಾಗಿದ್ದು ಸತ್ಯ. ಆದರೆ, ನಮ್ಮ ನಡುವೆ ಬಿಸಿಸಿಐ ಅಧ್ಯಕ್ಷ ಸ್ಥಾನದ ಬಗ್ಗೆ ಯಾವುದೇ ಪ್ರಸ್ತಾಪವಾಗಲಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.