ವಿಜಯಪುರ, ಡಿ. 10: ನೀತಿ ಪಾಠಗಳು ಭಾರತದಲ್ಲಿ ಪ್ರಾಚೀನ ಕಾಲದಿಂದಲೂ ಮಕ್ಕಳಲ್ಲಿ ಬಾಲ್ಯಾವಸ್ಥೆಯಿಂದಲೇ ಮಾನವ ಹಕ್ಕುಗಳ ಬಗ್ಗೆ ಜಾಗೃತಿ ಮೂಡಿಸುತ್ತಿವೆ ಎಂದು ಅಂಜುಮನ್ ಕಾನೂನು ಮಹಾವಿದ್ಯಾಲಯದ ಪ್ರಾಚಾರ್ಯ ಡಾ. ಸಂತೋಷ ಎಸ್. ನಾಗಠಾಣ ಹೇಳಿದ್ದಾರೆ.
ನಗರದ ಬಿ.ಎಲ್.ಡಿ.ಇ ಡೀಮ್ಡ್ ವಿಶ್ವವಿದ್ಯಾಲಯದ ಕಾನೂನು ಮಹಾವಿದ್ಯಾಲಯದಲ್ಲಿ ಇಂದು ಮಂಗಳವಾರ ನಡೆದ ಅಂತರಾಷ್ಟ್ರೀಯ ಮಾನವ ಹಕ್ಕುಗಳ ದಿನಾ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಮಾನವ ಹಕ್ಕುಗಳ ಉಗಮ, ಆಡಳಿತದಲ್ಲಿ ಅವುಗಳ ಅಳವಡಿಕೆಯ ಕುರಿತು ಮಾತನಾಡಿದ ಅವರು, ಭಾರತ ಪ್ರಾಚೀನ ಕಾಲದಿಂದಲೂ ಮಾನವ ಹಕ್ಕುಗಳ ಮಹತ್ವವನ್ನು ಸಾರುತ್ತಿದೆ. ಈ ನಿಟ್ಟಿನಲ್ಲಿ ಭಾರತದ ನೀತಿ ಪಾಠಗಳು ಮಾನವ ಹಕ್ಕುಗಳ ಪ್ರತಿಪಾದನೆಯಲ್ಲಿ ವಿಶ್ವಕ್ಕೆ ಸದಾ ಮಾರ್ಗದರ್ಶಿಯಾಗಿವೆ ಎಂದು ಅವರು ಹೇಳಿದರು.ಬಿ.ಎಲ್.ಡಿ.ಇ ಡೀಮ್ಡ್ ವಿವಿ ಪ್ರಾಚಾರ್ಯ ಡಾ. ರಘುವೀರ ಜಿ. ಕುಲಕರ್ಣಿ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಜಗತ್ತಿನ ನಾನಾ ದೇಶಗಳಲ್ಲಿ ಮಾನವ ಹಕ್ಕುಗಳ ಉಲ್ಲಂಘನೆ ಹೆಚ್ಚಾಗುತ್ತಿದೆ. ಈ ನಿಟ್ಟಿನಲ್ಲಿ ಜಾಗೃತಿ ಮೂಡಿಸಿ ಮನುಸಂಕುಲದ ಒಳಿತಿಗಾಗಿ ಎಲ್ಲರೂ ಶ್ರಮಿಸಬೇಕಾಗಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಕಾನೂನು ಮಹಾವಿದ್ಯಾಲಯದ ಬೋಧಕ ಮತ್ತು ಬೋಧಕರ ಹೊರತಾದ ಸಿಬ್ಬಂದಿ ಉಪಸ್ಥಿತರಿದ್ದರು.ಸಹಾಯಕ ಪ್ರಾಧ್ಯಾಪಕಿ ಲಾವಣ್ಯ ಕುಲಕರ್ಣಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಹಾಯಕ ಪ್ರಾಧ್ಯಾಪಕ ಶೇಷಾದ್ರಿ ಕೆ. ವಂದಿಸಿದರು. ವಿದ್ಯಾರ್ಥಿನಿ ಪ್ರಗತಿ ನಿರೂಪಿಸಿದರು.