ಬೆಂಗಳೂರು 14: ಟೆಕ್ಕಿ ಅತುಲ್ ಸುಭಾಷ್ ಆತ್ಮಹತ್ಯೆ ಪ್ರಕರಣ ಮಾಸುವ ಮುನ್ನವೇ ಬೆಂಗಳೂರಿನಲ್ಲಿ ಹೆಂಡತಿ ಕಾಟಕ್ಕೆ ಪೊಲೀಸ್ ಪೇದೆ ಆತ್ಮಹತ್ಯೆಗೆ ಶರಣಾದ ಮತ್ತೊಂದು ಬಲಿಯಾದ ಘಟನೆ ನಡೆದಿದೆ.
ತಿಪ್ಪಣ್ಣ ಎಂಬ ಪೊಲೀಸ್ ಪೇದೆ ಬೈಯ್ಯಪ್ಪನಹಳ್ಳಿಯಲ್ಲಿ ರೈಲಿಗೆ ತಲೆಕೊಟ್ಟು ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ತಿಳಿದುಬಂದಿದೆ.
ಬಿಜಾಪುರ ಜಿಲ್ಲೆ ಸಿಂದಗಿ ತಾಲೂಕಿನ ಹಂದಿಗನೂರು ಗ್ರಾಮದ ನಿವಾಸಿ ತಿಪ್ಪಣ್ಣ, ಹುಳಿಮಾವು ಪೋಲಿಸ್ ಠಾಣೆಯಲ್ಲಿ ಹೆಡ್ ಕಾನ್ಸ್‌ಟೇಬಲ್ ಆಗಿ ಕಾರ್ಯ ನಿರ್ವಹಿಸುತ್ತಿದ್ದರು. ಬೆಂಗಳೂರಿನ ನಾಗನಾತಪುರದ ಕೃಷ್ಣಪ್ಪಲೇಔಟ್ನಲ್ಲಿ ವಾಸವಿದ್ದರು.
ಮೂಲಗಳ ಪ್ರಕಾರ ತಿಪ್ಪಣ್ಣ ಬೈಕ್‌ನಲ್ಲಿ ಶುಕ್ರವಾರ ರಾತ್ರಿ 10.45ರ ಸಮಯದಲ್ಲಿ ಬೈಯ್ಯಪ್ಪನಹಳ್ಳಿ ರೈಲ್ವೆ ನಿಲ್ದಾಣ ಬಳಿ ಬಂದಿದ್ದರು.
ಬಳಿಕ ರೈಲಿಗೆ ತಲೆ ಕೊಟ್ಟು ಸಾವಿಗೆ ಶರಣಾಗಿದ್ದಾರೆ. ಬೈಯಪ್ಪನಹಳ್ಳಿ ರೈಲ್ವೆ ಪೊಲೀಸ್ ಠಾಣೆಯಲ್ಲಿ ತಿಪ್ಪಣ್ಣ ತಂದೆ ದೂರು ನೀಡಿದ್ದು, ತನ್ನ ಮಗನಿಗೆ ನ್ಯಾಯ ಕೊಡಿಸುವಂತೆ ದೂರಿನಲ್ಲಿ ಕೋರಿದ್ದಾರೆ.
ಆತ್ಮಹತ್ಯೆಗೂ ಮುನ್ನ ತಿಪ್ಪಣ್ಣ, ನಾನು ನನ್ನ ಹೆಂಡತಿಯ ಕಾಟಕ್ಕೆ ಬೇಸತ್ತು ಆತ್ಮಗತ್ಯೆ ಮಾಡಿಕೊಳ್ಳುತ್ತಿದ್ದೇನೆ ಹಾಗೂ ನನ್ನ ಹೆಂಡತಿಯ ತಂದೆಯಾದ ಯಮನಪ್ಪಾ ನನಗೆ ಜೀವ ಬೆದರಿಕೆ ಹಾಕಿರುತ್ತಾನೆ. ಗುರುವಾರ ಕರೆ ಮಾಡಿದಾಗ, ‘ನೀನು ಸತ್ತು ಹೋಗು, ನನ್ನ ಮಗಳು ಚೆನ್ನಾಗಿ ಇರುತ್ತಾಳೆ’ ಎಂದು ಹೇಳಿ ಅವಾಚ್ಯ ಪದಗಳಿಂದ ಮಾವ ನಿಂದಿಸಿದ್ದಾರೆ ಎಂದು ಡೆತ್‌ನೋಟ್‌ನಲ್ಲಿ ತಿಪ್ಪಣ್ಣ ಉಲ್ಲೇಖಿಸಿದ್ದಾರೆ ಎಂದು ಹೇಳಲಾಗಿದೆ.
ಡೆತ್ನೋಟ್ ಆಧರಿಸಿ ಹೆಂಡತಿ ಹಾಗೂ ಮಾವನ ಮೇಲೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಬಿಎನ್‌ಎಸ್ ಕಾಯ್ದೆ 108 ಸೆಕ್ಷನ್ ಅನ್ವಯ ಆತ್ಮಹತ್ಯೆ ಗೆ ಪ್ರಚೋದನೆ, 351 (3) ಸೆಕ್ಷನ್ ಅನ್ವಯ ಬೆದರಿಕೆ ಹಾಗೂ 352 ಸೆಕ್ಷನ್ ಅನ್ವಯ ಉದ್ದೇಶ ಪೂರ್ವಕವಾಗಿ ಅವಮಾನ ಮಾಡಿದ ಪ್ರಕರಣವನ್ನು ದಾಖಲಿಸಲಾಗಿದೆ.