ರಾಜ್ಯದಲ್ಲಿ ಪೊಲೀಸ್ ದುರ್ಬಳಕೆ ಹೆಚ್ಚಾಗುತ್ತಿದೆ: ಬಸವರಾಜ ಬೊಮ್ಮಾಯಿ

Police abuse is on the rise in the state: Basavaraja Bommai

ರಾಜ್ಯದಲ್ಲಿ ಪೊಲೀಸ್ ದುರ್ಬಳಕೆ ಹೆಚ್ಚಾಗುತ್ತಿದೆ: ಬಸವರಾಜ ಬೊಮ್ಮಾಯಿ

ಶಿಗ್ಗಾವಿ 20: ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿಯವರು ಸದನದಲ್ಲಿ ಅವಾಚ್ಯವಾಗಿ ಹೇಳಿಕೆ ನೀಡಿದ್ದಾರೊ ಇಲ್ಲವೊ ಎಂಬುದರ ಸತ್ಯಶೋಧನೆ ಆಗಬೇಕು. ತನಿಖೆ ಆಗಬೇಕು ಎಂದು ಮಾಜಿ ಸಿಎಂ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಆಗ್ರಹಿಸಿದರು. ದೆಹಲಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪೊಲೀಸರ ನಡವಳಿಕೆಯನ್ನು ನಾವು ಸಮರ್ಥಿಸಿಕೊಳ್ಳುವುದಕ್ಕೆ ಸಾಧ್ಯವಿಲ್ಲ. ಹಿಂದೆ ವಿಧಾನಸೌಧದಲ್ಲಿ ಪಾಕಿಸ್ತಾನ್ ಜಿಂದಾಬಾದ್ ಅಂದವರಿಗೆ ಈ ಸರ್ಕಾರ ಯಾವುದೇ ಶಿಕ್ಷೆ ವಿಧಿಸಲಿಲ್ಲ. ಸಿ.ಟಿ.ರವಿಯವರು ತಾವು ಆ ರೀತಿ ಹೇಳಿಕೆ ನೀಡಲಿಲ್ಲ ಎಂದು ಬಹಳ ಸ್ಪಷ್ಟವಾಗಿ ನಿರಾಕರಿಸಿದ್ದಾರೆ. ನಾವು ನ್ಯಾಯಸಮರ್ಥವಾಗಿ ಮಾತನಾಡುತ್ತಿದ್ದೇವೆ. ನಾವೇನೂ ತನಿಖೆ ಬೇಡ ಎಂದು ಹೇಳಿಲ್ಲವಲ್ಲ. ಸತ್ಯಶೋಧನೆ ಆಗದೇ ತನಿಖೆಯಾಗದೇ ಯಾವುದೇ ಅಂತಿಮನಿರ್ಧಾರಕ್ಜೆ ಬರುವುದು ತಪ್ಪು ಎಂದರು.  

 ಕರ್ನಾಟಕದಲ್ಲಿ ಆಡಳಿತ ಹಳಿ ತಪ್ಪಿದೆ. ಪೊಲೀಸ್ ರಾಜ್ಯ ನಡೆಯುತ್ತಿದೆ. ಪ್ರತಿಯೊಂದಕ್ಕೂ ಪೋಲಿಸ್ ದುರ್ಬಳಕೆ ಆಗುತ್ತಿದೆ. ವಿರೋಧ ಪಕ್ಷಗಳ ಮೇಲೆ ದ್ವೇಷ ಸಾಧಿಸಲು ಹಲವಾರು ಎಸ್ ಐಟಿ ರಚನೆ ಮಾಡಿ ಹಲವಾರು ತನಿಖೆ ಮಾಡುತ್ತಿದ್ದಾರೆ. ಸ್ವತಃ ಮುಖ್ಯಮಂತ್ರಿಗಳೇ ಭ್ರಷ್ಟಾಚಾರದಲ್ಲಿ ಮುಳುಗಿದ್ದು ಅವರ ವಿರುದ್ದವೇ ತನಿಖೆ ನಡೆಯುತ್ತಿದೆ.ಇಂತಹ ಸಂದರ್ಭದಲ್ಲಿ ಪೊಲೀಸ್ ವ್ಯವಸ್ಥೆ ದುರ್ಬಳಕೆ ವಿಧಾನಸೌಧದವರೆಗೂ ತಲುಪಿದೆ ಎಂದು ಬಸವರಾಜ ಬೊಮ್ಮಾಯಿ ಆರೋಪಿಸಿದರು.ಬೆಳಗಾವಿ ಅಧಿವೇಶನದಲ್ಲಿ ಮೊದಲು ರೈತ ಸಮುದಾಯವಾಗಿರುವ ಪಂಚಮಸಾಲಿ ಸಮುದಾಯದ ಮೇಲೆ ಲಾಠಿ ಚಾರ್ಜ್‌ ಮಾಡಿ ರಕ್ತ ಸುರಿಸಿದರು. ಹಲವಾರು ಬಾರಿ ರೈತರು, ಇದೇ ಪಂಚಮಸಾಲಿ ಸಮುದಾಯದವರು ಪ್ರತಿಭಟನೆ ಮಾಡಿದಾಗಲೂ ಈ ರೀತಿ ನಡೆದಿರಲಿಲ್ಲ. ಒಂದು ರೀತಿಯಲ್ಲಿ ಪೊಲೀಸರ ದಬ್ಬಾಳಿಕೆಯಿಂದಲೇ ಎಲ್ಲವನ್ನು ಮಾಡಬಲ್ಲೆ ಎಂಬ ಅಭಿಪ್ರಾಯ ಮುಖ್ಯಮಂತ್ರಿ ಹಾಗೂ ಉಪ ಮುಖ್ಯಮಂತ್ರಿಗಳಿಗೆ ಬಂದಂತಿದೆ. ವಿಧಾನ ಪರಿಷತ್ ಸದಸ್ಯ ಸಿ.ಟಿ. ರವಿಯವರ ಬಂಧನ ಸದನದೊಳಗೆ ಆಗಿರುವ ಘಟನೆಯ ಬಗ್ಗೆ ಸಭಾಪತಿಯವರು ನಿರ್ಣಯ ಮಾಡಬೇಕು ಎಂದು ಹೇಳಿದರು.ಈ ಸಂದರ್ಭದಲ್ಲಿ ಸಂಸದ ಗೋವಿಂದ ಕಾರಜೋಳ ಹಾಜರಿದ್ದರು.