ಕವಿಗಳು ಸಾಂಸ್ಕೃತಿಕ ಪರಂಪರೆಯನ್ನು ಕಟ್ಟಿ ಬೆಳೆಸಿದ್ದಾರೆ: ಸಾಹಿತಿ ಉಳಿಯತ್ತಡ್ಕ್‌

Poets built and nurtured a cultural heritage: Uliyattadak

ವಿಜಯಪುರ 03: ಕನ್ನಡದ ಕವಿಗಳು ಸೂಕ್ಷ್ಮ ಸಂವೇದನಾ ಶೀಲತ್ವದಿಂದ ಕನ್ನಡ ನಾಡಿನ ಪರಿಸರದ ಪ್ರಭಾವಕ್ಕೆ ಒಳಪಟ್ಟು, ನಾಡು - ನುಡಿ ಮೇಲೆ ಬೆಳಕು ಚೆಲ್ಲುವ ಅಮೂಲ್ಯವಾದ ಕೃತಿಗಳನ್ನು ರಚಿಸುವ ಮೂಲಕ ಸಂಸ್ಕೃತಿಕ ಪರಂಪರೆಯನ್ನು ಕಟ್ಟಿ ಬೆಳಿಸಿದ್ದಾರೆ. ಯುವ ಕವಿ ಕಲ್ಲಪ್ಪ ಶಿವಶರಣ ಅವರು ನಮ್ಮ ಹಿರಿಯ ತಲೆಮಾರಿನ ಕವಿಗಳು ಹಾಕಿಕೊಟ್ಟ ಮಾರ್ಗದಲ್ಲಿ ನವ ಕವಿತೆಗಳನ್ನು ಬರೆಯುವ ಮೂಲಕ ಕನ್ನಡ ಸಾಹಿತ್ಯ ಲೋಕದಲ್ಲಿ ಹೊಸತನ ಸೃಷ್ಠಿಸುವ ಭರವಸೆಯ ಕವಿಯಾಗಿ ಹೊರಹೊಮ್ಮಿದ್ದಾರೆ ಎಂದು ಚನ್ನಬಸವ ಪಟ್ಟದೇವರು ಗಡಿನಾಡ ಚೇತನ ಪ್ರಶಸ್ತಿ ಪುರಸ್ಕೃತ, ನೆರೆಯ ಕೇರಳದ ಕಾಸರಗೋಡಿನ ಹಿರಿಯ ಸಾಹಿತಿ ಡಾ. ರಾಧಾಕೃಷ್ಣ ಕೆ ಉಳಿಯತ್ತಡ್ಕ ಅವರು ಹೇಳಿದರು. 

ನಗರದ ಅಷ್ಟಫೈಲ್ ಬಂಗ್ಲೆ ಹತ್ತಿರದ ಶಿವಶರಣ ಶೈಕ್ಷಣಿಕ ಗ್ರಾಮೀಣಾಭಿವೃದ್ಧಿ ವಿವಿದ್ಧೋದ್ದೇಶಗಳ ಸಂಸ್ಥೆಯ ನೂತನ ಕಛೇರಿಯಲ್ಲಿ ಶಿವಶರಣ ಶೈಕ್ಷಣಿಕ ಗ್ರಾಮೀಣಾಭಿವೃದ್ಧಿ ವಿವಿದ್ಧೋದ್ದೇಶಗಳ ಸಂಸ್ಥೆ ವತಿಯಿಂದ ಹಮ್ಮಿಕೊಂಡ ಯುವ ಕವಿ ಕಲ್ಲಪ್ಪ ಶಿವಶರಣ ಅವರ ಚೊಚ್ಚಲ ಕವನ ಸಂಕಲನ “ಕಲ್ಲು ಮನಸ್ಸು” ಕೃತಿಯ ವಿಮರ್ಶೆ ಹಾಗೂ ಕವಿಗೋಷ್ಠಿಯನ್ನು ಸಸಿಗೆ ನೀರುಣಿಸುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು. 

ಕನ್ನಡದ ಪ್ರತಿಯೊಬ್ಬ ಕವಿಗಳು ತಮ್ಮ ಕವಿತೆಗಳಲ್ಲಿ ತಾಯಿ ತಮ್ಮ ಮೇಲೆ ಬೀರಿದ ಪ್ರಭಾವನ್ನು ಅಕ್ಷರಗಳಲ್ಲಿ ಹಿಡಿದಿಟ್ಟಿದ್ದಾರೆ. ಅದೇ ರೀತಿ ಕವಿ ಕಲ್ಲು ಶಿವಶರಣ ಅವರು ತಮ್ಮ ತಾಯಿ ತಮ್ಮ ಜೀವನದಲ್ಲಿ ಬೀರಿದ ಪ್ರಭಾವನ್ನು ಅಮ್ಮ ಎಂಬ ಕವಿತೆಯಲ್ಲಿ ಹಿಡಿದಿಡುವ ಮೂಲಕ ತಮ್ಮ ತಾಯಿಯ ಮಮತೆ ಕನ್ನಡ ಸಾರಸ್ವತ ಲೋಕಕ್ಕೆ ಪರಿಚಯಿಸಿದ್ದಾರೆ. ಕಲ್ಲು ಮನಸ್ಸುಗಳನ್ನು ಕರಗಿಸುವ ಶಕ್ತಿ ಈ ಕಲ್ಲು ಮನಸ್ಸು ಕೃತಿಯಲ್ಲಿದೆ ಎಂದು  ಹೇಳಿದರು. 

ಇದೇ ಕಾರ್ಯಕ್ರಮದಲ್ಲಿ ಕೃತಿ ವಿಮರ್ಶೆ ಮಾಡಿ ಯುವ ಸಾಹಿತಿ ಸೋಮನಿಂಗ ಎಚ್‌. ಹಿಪ್ಪರಗಿಯವರು ಮಾತನಾಡಿ, ವಿಜಯಪುರ ಜಿಲ್ಲೆಯು ರನ್ನ, ಅಭಿನವ, ಪಂಪ ನಾಗಚಂದ್ರ ಬಸವಾದಿ ಶರಣರು ಸೇರಿದಂತೆ ಅನೇಕಾನೇಕ ಸಾಂಸ್ಕೃತಿಕ ದಿಗ್ಗಜ್ಜರನ್ನು ಕನ್ನಡ ನಾಡಿಗೆ ಕೊಟ್ಟಿದೆ. ಜಿಲ್ಲೆಯಲ್ಲಿ ಹೊಸ ತಲೆಮಾರಿನ ಅನೇಕರು ಸಾಹಿತಿ ಕೃಷಿಯಲ್ಲಿ ತೊಡಗಿಸಿಕೊಂಡಿದ್ದಾರೆ. ಅವರಲ್ಲಿ ಕನ್ನಡ ನಾಡು ನುಡಿಯ ಬಗ್ಗೆ ಗಟ್ಟಿತನದಲ್ಲಿ ಹೇಳುವ ಧೈರ್ಯ ತೋರಿದವರಲ್ಲಿ ಕಲ್ಲು ಶಿವಶರಣ ಅವರು ಒಬ್ಬರಾಗಿದ್ದಾರೆ. ಅವರ ಕವನದ ಪ್ರತಿ ಪದವು ಕೂಡಾ ಈ ನಾಡಿನ ಜನರ ನಾಡಿಮಿಡಿತವನ್ನು ರಿಂಗಣಿಸುವಂತಿವೆ ಎಂದರು. 

ಕವಿಗೋಷ್ಠಿಯಲ್ಲಿ ಕವಿಗಳಾದ ಪರಶುರಾಮ ಶಿವಶರಣ ಕಾರ್ಯ ಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಕವಿತೆ, ಸಾಹಿತ್ಯ ಅಂತರಾಳದ ಅಭಿವ್ಯಕ್ತಿಯನ್ನು ವ್ಯಕ್ತಪಡಿಸುವ ಸಾಧನವಾಗಿದೆ. ಸಾಹಿತ್ಯದಿಂದ ಮನಸ್ಸು ಅರಳುವುದರ ಜೊತೆಗೆ ಸಮಾಜ ತಿದ್ದಲು ಸಾಧ್ಯ. ಪ್ರತಿಯೊಬ್ಬರು ಸಾಹಿತ್ಯದ ಅಭಿರುಚಿಯನ್ನು ಹೊಂದಬೇಕು. ಸಾಹಿತ್ಯ ಅಧ್ಯಯನಶೀಲರಾಗಿ ಉತ್ತಮ ವ್ಯಕ್ತಿತ್ವ ಪಡೆಯಬೇಕು ಎಂದರು. 

ಸಿಂದಗಿ ಕಸಾಪ ಅಧ್ಯಕಕ್ಷರಾದ ಶಿವಾನಂದ ಬಡಾನೂರು ಅತಿಥಿಗಳಾಗಿ ಭಾಗವಹಿಸಿದ್ದರು. 

ಇದೇ ಸಂದರ್ಭದಲ್ಲಿ ಯುವ ಸಾಹಿತಿ ಲಾಯಪ್ಪ ಇಂಗಳೆ, ಸೋಮಲಿಂಗ ಹಿಪ್ಪರಗಿ, ಭೀಮರಾಯ ಕುಂಟೋಜಿ, ಪ್ರತಾಪ ಚಿಕ್ಕಲಕಿ ಕವನ ವಾಚಿಸಿದರು.  

ಈ ಸಂದರ್ಭದಲ್ಲಿ ಚಲನಚಿತ್ರ ನಿರ್ದೇಶಕ ಸುನೀಲಕುಮಾರ ಸುಧಾಕರ, ಅಖಿಲ ಭಾರತೀಯ ವಾಲ್ಮೀಕಿ ಸಮಾಜ ಸೇವಾ ಸಂಘದ ರಾಜ್ಯಾಧ್ಯಕ್ಷ ಮಲ್ಲಿಕಾರ್ಜುನ ಬಟಗಿ, ಹೋರಾಟಗಾರ ಬಸವರಾಜ ಕುಬಕಡ್ಡಿ, ಬಸವಕುಮಾರ ಕಾಂಬಳೆ, ಕಲ್ಲಪ್ಪ ಬಬಲಾದ, ಚೀಮಾಜಿ ರಾಠೋಡ, ಅರ್ಜುನ ಬಂಡಿ, ಸಂಜೀವ ರಾಠೋಡ, ಕಾಶೀನಾಥ ಪವಾರ, ರವೀಂದ್ರ ಮಡಿವಾಳರ, ಪತ್ರಕರ್ತರಾದ ಉಮೇಶ ಶಿವಶರಣ, ಮಹೇಶ ನೂಲಾನವರ ಸೇರಿದಂತೆ ಹಲವರು ಉಪಸ್ಥಿತರಿದ್ದರು. 

ಕಾರ್ಯಕಮವನ್ನು ಸೋಮನಿಂಗ ಹಿಪ್ಪರಗಿ ಸ್ವಾಗತಿಸಿದರು. ಲಾಯಪ್ಪ ಇಂಗಳೆ ನಿರೂಪಿಸಿ, ವಂದಿಸಿದರು.