ಲೋಕದರ್ಶನ ವರದಿ
ಬೆಳಗಾವಿ 01: ಕಾವ್ಯ ಎಲ್ಲರಿಗೂ ಸಿದ್ಧಿಸದು. ಇಂಚಲರು ತಪಸ್ಸಿನಿಂದ ಕಾವ್ಯ ಕೃಷಿ ಮಾಡಿದವರು. ಬೆಳಗಾವಿಯಲ್ಲಿ ಭಾಷಾ ಗಲಭೆಗಳು ಉಂಟಾದ ಸಂದರ್ಭದಲ್ಲಿ ಕನ್ನಡ ಉಳಿಸಲು ಅವರು ನವೋದಯ ಸಾಲಿನ ಕವಿಯಾಗಿ ಕವಿ ಗರ್ಜನೆ ಮಾಡಿದ್ದು ಅಮರ ಎಂದು ಪ್ರೊ. ಬಿ.ಆರ್.ಪೊಲೀಸ ಪಾಟೀಲ ಹೇಳಿದರು.
ಅವರು ಇಂದು ಇಳಿಹೊತ್ತಿನಲ್ಲಿ ಬೆಳಗಾವಿ ನಗರದ ನೆಹರು ನಗರದ ಕನ್ನಡ ಸಾಂಸ್ಕೃತಿಕ ಭವನದಲ್ಲಿ 107 ನೆಯ ಎಸ್.ಡಿ.ಇಂಚಲ ಸ್ಮಾರಕ ಉಪನ್ಯಾಸ ಹಾಗೂ ಕಾವ್ಯ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡುತ್ತಾ, ಶಿಕ್ಷಣ ಎಂದರೆ ಅಕ್ಷರ ಜ್ಞಾನ ಎಂಬ ಮಂತ್ರ ಆಗಿದೆ. ಶಿಕ್ಷಣದಲ್ಲಿ ಯಾವ ತತ್ವ ಇರಬೇಕು ಎಂಬುದು ಕಲಿಕಾಕಾರನಿಗೆ ಮತ್ತು ಕಲಿಕೆ ಮಾಡುವವರಿಗೆ ಗೊತ್ತಿರಬೇಕು ಎಂದರು.
ವಿವಿಧ ಜಾನಪದ ಲಾವಣಿಗಳನ್ನು ತಮ್ಮ ಮುಕ್ತ ಕಂಠದಿಂದ ಹಾಡುವ ಮೂಲಕ ಜನಪದ ಸಾಹಿತ್ಯವನ್ನು ಸಭಿಕರಿಗೆ ವಿವರಿಸಿದರು.
ವಿಶೇಷ ಆಮಂತ್ರಿತರಾಗಿ
ಪ್ರಾ.ಬಿ.ಎಸ್.ಗವಿಮಠ ಆಗಮಿಸಿ ಪ್ರಾಸ್ತಾವಿಕ ಮಾತನಾಡಿ ಕವಿ ಎಸ್.ಡಿ. ಇಂಚಲ ಗುಣಗಾನ ಮಾಡಿದರು. ಪ್ರೊ. ಎಂ.ಎಸ್. ಇಂಚಲ ಡಾ. ಬಸವರಾಜ ಜಗಜಂಪಿ ಆಗಮಿಸಿ ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದರು.
ಈ ಬಾರಿ ಇಂಚಲ ಕಾವ್ಯ ಪ್ರಶಸ್ತಿಗೆ ಕೊಪ್ಪಳದ ಕನಕಗಿರಿ ಅಲ್ಲಾಗಿರಿರಾಜ್ ಅವರ ಕಾವ್ಯ ಕೃತಿ ಸಾಕಿ ಗಜಲ್ ಆಯ್ಕೆಯಾಗಿದೆ. ಈ ಕಾಲಕ್ಕೆ ಅವರು ಮಾತನಾಡಿ ಇಂಚಲ್ ಪ್ರಶಸ್ತಿ ದೊರಕಿದ್ದು ನನಗೆ ಸಂತಸ ತಂದಿದೆ ಎಂದರು.
ಅಧ್ಯಕ್ಷತೆಯನ್ನು ಇಂಚಲ ಸ್ಮಾರಕ ಸಮಿತಿಯ ಅಧ್ಯಕ್ಷೆ ಡಾ ಗುರುದೇವಿ ಹುಲೆಪ್ಪನವರಮಠ ವಹಿಸಿದ್ದರು. ಸ್ಮಾರಕ ಸಮಿತಿಯ ಸುಭಾಸ ಏಣಗಿ, ಮಹಾದೇವ ಬಳಿಗಾರ, ಆರ್ ಎಸ್ ಪಾಟೀಲ್, ಎ.ಬಿ. ಕೊರಬು, ಯ.ರು ಪಾಟೀಲ, ಬಸವರಾಜ ಗಾರ್ಗಿ, ಉಪನ್ಯಾಸಕ ಎಸ್ ವಿ ದಳವಾಯಿ, ಸುನಂದಾ ಎಮ್ಮಿ, ಚಾಪಗಾವಿ, ಸಿಎಂ ಪಾಗಾದ, ಶಿವರಾಯ ಏಳುಕೋಟಿ ಹಾಗೂ ಇತರರು ಭಾಗವಹಿಸಿದ್ದರು.ಇಂದಿರಾ ಮೋಟೆಬೆನ್ನೂರು ಪ್ರಾರ್ಥಿಸಿದರು. ಮಹಾದೇವ ಬಳಿಗಾರ ಸ್ವಾಗತಿಸಿದರು. ಆರ್.ಎಸ್. ಪಾಟೀಲ ಪರಿಚಯಿಸಿದರು. ಡಾ. ಮಹೇಶ ಗುರನಗೌಡರ ನಿರೂಪಿಸಿದರು. ಎಸ್.ಆರ್ ಗದಗ ವಂದಿಸಿದರು