ಕವಿ, ನಾಟಕಕಾರ ಡಾ. ಎಚ್‌. ಎಸ್‌. ಶಿವಪ್ರಕಾಶ

ಡಾ. ಎಚ್‌. ಎಸ್‌. ಶಿವಪ್ರಕಾಶ ಅವರು ಕವಿಯಾಗಿ, ನಾಟಕಕಾರರಾಗಿ, ಅನುವಾದ, ವಿಮರ್ಶೆ ಮಾತ್ರವಲ್ಲದೇ ಅಂಕಣ ಬರಹದಲ್ಲೂ ಜನಪ್ರಿಯರಾದವರು. ಅವರು ಕನ್ನಡ ಸಾಹಿತ್ಯದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿರುವುದು ಬದುಕಿಗಾಗಲಿ ಅಥವಾ ಹವ್ಯಾಸಕ್ಕಾಗಲಿ ಅಲ್ಲ. ಅವರಲ್ಲಿ ಇರುವ ಕನ್ನಡ ಭಾಷೆಯ ಅಭಿಮಾನಕ್ಕಾಗಿ. ಕನ್ನಡ ಭಾಷೆಯ ಋಣಕ್ಕಾಗಿ ಎಲ್ಲಾ ರಂಗದಲ್ಲಿಯ ಕನ್ನಡ ಸಾಹಿತ್ಯ ಸೇವೆಯನ್ನು ಅತ್ಯಂತ ಪ್ರಾಮಾಣಿಕವಾಗಿ ಮಾಡಿಕೊಂಡು ಬಂದವರು.  

ಡಾ.ಎಚ್‌.ಎಸ್‌.ಶಿವಪ್ರಕಾಶ ಅವರು 1954ರ ಜೂನ್ 15ರಂದು ಶಿವಗಂಗೆಯಲ್ಲಿ ಜನಿಸಿದರು. ತಂದೆ ಬಿ.ಶಿವಮೂರ್ತಿಶಾಸ್ತ್ರಿ, ತಾಯಿ ಮುದ್ದುವೀರಮ್ಮ. ತಂದೆಯವರು ಶ್ರೇಷ್ಠ ವಿದ್ವಾಂಸರಾಗಿದ್ದು, ಮೈಸೂರು ಮಹಾರಾಜರ ಕಾಲದಲ್ಲಿ ಸೇವೆ ಸಲ್ಲಿಸಿದವರು. ತಾಯಿ ತಮಿಳುನಾಡಿನ ಮಧುರೈ ಜಿಲ್ಲೆಯ ಸಾಲಚಂದೈ ಗ್ರಾಮದವರು, ಪ್ರಾಥಮಿಕ ಶಾಲೆಯ ಶಿಕ್ಷಕಿಯಾಗಿದ್ದರು. ಶಿವಪ್ರಕಾಶರವರು ಪ್ರಾಥಮಿಕ ಶಿಕ್ಷಣವನ್ನು ಬಸವನಗುಡಿಯ ಪೂರ್ಣಯ್ಯನವರ ಛತ್ರದಲ್ಲಿ, ಮಾಧ್ಯಮಿಕ ಶಿಕ್ಷಣವನ್ನು ಬಳೇಪೇಟೆಯ ಆರ್‌.ಕೆ.ಎಸ್‌. ಸ್ಕೂಲ್‌ನಲ್ಲಿ ಮತ್ತು ಸೆಂಟ್ರಲ್ ಹೈಸ್ಕೂಲ್‌ನಲ್ಲಿ ಮುಗಿಸಿದರು. 1970ರಲ್ಲಿ ಸರ್ಕಾರಿ ಕಲೆ ಮತ್ತು ವಿಜ್ಞಾನ ಕಾಲೇಜಿನಲ್ಲಿ ಪಿಯುಸಿಯನ್ನು ಪ್ರಥಮ ದರ್ಜೆಯಲ್ಲಿ ಪಾಸಾದರು. ನಂತರ 1970ರಿಂದ 1973ರವರೆಗೆ ಸೆಂಟ್ರಲ್ ಕಾಲೇಜಿನಲ್ಲಿ ಬಿ.ಎ. ಆನರ್ಸ್‌ ಪಡೆದು, 1975ರಲ್ಲಿ ಇಂಗ್ಲೀಷ್ ಎಂ.ಎ. ಮುಗಿಸಿದರು. ಅವರು 1998ರಲ್ಲಿ ಬೆಂಗಳೂರು ವಿಶ್ವವಿದ್ಯಾಲಯದಿಂದ ಡಾಕ್ಟರೇಟ್ ಪದವಿಯನ್ನು ಪಡೆದುಕೊಂಡರು.  

ಎಚ್‌.ಎಸ್‌.ಶಿವಪ್ರಕಾಶ ಅವರು 1976ರಲ್ಲಿ ತುಮಕೂರು ಸರ್ಕಾರಿ ಕಾಲೇಜಿನಲ್ಲಿ ಅಧ್ಯಾಪಕರಾಗಿ ನೇಮಕಗೊಂಡು ವೃತ್ತಿಯನ್ನು ಆರಂಭಿಸಿದರು. 1982ರ ವರೆಗೆ ತುಮಕೂರದಲ್ಲಿಯೇ ಸೇವೆ ಸಲ್ಲಿಸಿ, ತದನಂತರ 1992ರವರೆಗೆ ಬೆಂಗಳೂರಿನ ಹೋಂ ಸೈನ್ಸ್‌ ಕಾಲೇಜಿನಲ್ಲಿ ಸೇವೆ ಸಲ್ಲಿಸಿದರು. ನಂತರ ಅವರು ದೊಡ್ಡ ಬಳ್ಳಾಪುರ, ಹೊಸಕೋಟೆ, ಆನೇಕಲ್, ಕೆ.ಆರ್‌.ಪುರ ಮತ್ತು ಬೆಂಗಳೂರಿನ ಮಹಾರಾಜ ಕಲಾ ಕಾಲೇಜುಗಳಲ್ಲಿ ಸೇವೆ ಸಲ್ಲಿಸಿದರು. ಅವರ ಕಾರ್ಯಧ್ಯಕ್ಷತೆಯನ್ನು ಮನಗಂಡ ಸರ್ಕಾರವು 1997 ರಿಂದ 2001ರವರೆಗೆ ಕೇಂದ್ರ ಸಾಹಿತ್ಯ ಅಕಾಡೆಮಿಯಲ್ಲಿ ಸಂಪಾದಕ ಹುದ್ದೆಯನ್ನು ನೀಡಿತು. ಅಲ್ಲದೇ ಅವರು 2001 ರಿಂದ 2004ರವರೆಗೆ ನವದೆಹಲಿಯ ಜವಾಹರಲ್ ವಿಶ್ವವಿದ್ಯಾಲಯದಲ್ಲಿ ಕಲಾ ಮತ್ತು ಸೌಂದರ್ಯಶಾಸ್ತ್ರ ವಿಭಾಗದಲ್ಲಿ ಸಹ ಪ್ರಾಧ್ಯಾಪಕರಾಗಿ ಸೇವೆಸಲ್ಲಿಸಿದರು. ಡಾ. ಎಚ್‌. ಎಸ್‌. ಶಿವಪ್ರಕಾಶ ಅವರು ಜರ್ಮನಿಯ ಬರ್ಲಿನ್‌ನಲ್ಲಿಯ ಟ್ಯಾಗೋರ ಕೇಂದ್ರದ ನಿರ್ದೇಶಕರಾಗಿಯೂ ಸೇವೆ ಸಲ್ಲಿಸಿರುವರು. ಕವಿ, ನಾಟಕಕಾರ ಎಚ್‌.ಎಸ್‌.ಶಿವಪ್ರಕಾಶ ಅವರು 1976ರಲ್ಲಿ ಮದುವೆಯಾದರು. ಅಲ್ಲಿಂದಲೇ ಅವರ ಸಮಸ್ಯೆಗಳು ಪ್ರಾರಂಭವಾದವು. ಆದಷ್ಟು ಅವರು ವೈವಾಹಿಕ ಜೀವನ ನಡೆಸಲು ಪ್ರಯತ್ನಿಸಿದರೂ ಸಾಧ್ಯವಾಗಲಿಲ್ಲ. ಹೀಗಾಗಿ 1989ರಲ್ಲಿ ವಿವಾಹ ವಿಚ್ಛೇದನಕ್ಕೆ ಅರ್ಜಿಸಲ್ಲಿಸಿದರು. ಅಂತಿಮವಾಗಿ 2009ರಲ್ಲಿ ಅವರು ವಿಚ್ಛೇದನ  ಪಡೆದುಕೊಂಡರು. 

ಕನ್ನಡ ಸಾಹಿತ್ಯ ಪ್ರಕಾರಗಳಾದ ಕಾವ್ಯ ವಿಮರ್ಶೆ, ನಾಟಕ, ಅನುವಾದ, ಹಾಯ್ಕು, ಆತ್ಮಚರಿತ್ರೆ, ಸಂಪಾದನೆ ಹೀಗೆ ಎಲ್ಲಾ ಕ್ಷೇತ್ರಗಳಲ್ಲಿ ತಮ್ಮ ಛಾಪನ್ನು ಮೂಡಿಸಿದ್ದಾರೆ. ಡಾ.ಎಚ್‌.ಎಸ್‌.ಶಿವಪ್ರಕಾಶರವರು ಹದಿನಾರು ಕವನ ಸಂಕಲನಗಳನ್ನು, ಹದಿನಾರು ನಾಟಕಗಳನ್ನು ಒಂದು ಆತ್ಮ ಚರಿತ್ರೆ ಹೀಗೆ ನಾಲ್ವತ್ತಕ್ಕೂ ಹೆಚ್ಚು ಕೃತಿಗಳನ್ನು ಕನ್ನಡ ಸಾರಸ್ವತ ಲೋಕಕ್ಕೆ ಸಮರ​‍್ಿಸಿದ್ದಾರೆ. ಮಿಲರೆಪ, ಮಳೆಬಿದ್ದ ನೆಲದಲ್ಲಿ, ಅನುಕ್ಷಣ ಚರಿತೆ, ಸೂರ್ಯಜಲ, ಮಳೆಯ ಮಂಟಪ, ಮತ್ತೆ ಮತ್ತೆ, ಮಬ್ಬಿನ ಹಾಗೆ ಕಣಿವೆ ಹಾಸಿ, ಮರುರೂಪಗಳು, ನನ್ನ ಮೈನಾಗಾರ, ಮರೆತು ಹೋದ ಡೊಂಬರಾಕೆ, ಕವಿತೆ ಇಂದಿನವರೆಗೆ, ರುದ್ರ ಕವನ ಸಂಕಲನಗಳು, ಮಹಾಚೈತ್ರ, ಸುಲ್ತಾನ ಟಿಪ್ಪು, ಮಂಟೇಸ್ವಾಮಿ ಕಥಾ ಪ್ರಸಂಗ, ಮಾದಾರಿ ಮಾದಯ್ಯ, ಮಧುರೆಕಾಂಡ, ಮಾಧವಿ, ಮಕರ ಚಂದ್ರ, ಸತಿ ಮದುವೆ ಹೆಣ್ಣು, ಕಿಂಗ್‌ಲಿಯರ್, ಮಾರನಾಯಕನ ದೃಷ್ಟಾಂತ, ಮಲ್ಲಮ್ಮನ ಮನೆ ಹೋಟ್ಲು ನಾಟಕಗಳು, ಬತ್ತೀಸ್‌ರಾಗ ಆತ್ಮ ಚರಿತ್ರೆ, ಸಾಹಿತ್ಯ ಮತ್ತು ರಂಗಭೂಮಿ, ಯುಗಾಂತ್ರ ಮುಂತಾದ ಕೃತಿಗಳನ್ನು ಅವರು ರಚಿಸಿದ್ದಾರೆ. ಅವರ ಕೃತಿಗಳು ಇಂಗ್ಲೀಷ, ಪ್ರೆಂಚ್, ಇಟಾಲಿಯನ್, ಸ್ಪಾನಿಶ್, ಜರ್ಮನ್, ಹಿಂದಿ, ಮಲಯಾಳಂ, ಮರಾಠಿ, ತಮಿಳು ಮತ್ತು ತೆಲುಗು ಭಾಷೆಗಳಿಗೂ ಅನುವಾದಗೊಂಡಿವೆ. ಕನ್ನಡ, ಹಿಂದಿ, ಆಸ್ಸಾಮಿ, ತಮಿಳು ಮತ್ತು ಮಲಯಾಳಂ ಭಾಷೆಗಳಲ್ಲಿ ಅವರ ನಾಟಕಗಳು ಪ್ರದರ್ಶನಗೊಂಡಿವೆ.  

ಅಡಿಗರು, ಕೆ.ಎಸ್‌.ನರಸಿಂಹಸ್ವಾಮಿ ಮತ್ತು ಕಂಬಾರರು ಶಿವಪ್ರಕಾಶರವರ ಮೇಲೆ ಗಾಢವಾದ ಪ್ರಭಾವ ಬೀರಿದ್ದಾರೆ. 1976ರಲ್ಲಿ ಅವರು ಮೊದಲ ಕವನ ಸಂಕಲನ ಮಿಲರೇಪವನ್ನು ಪ್ರಕಟಿಸಿದರು. ಅವರ ಎಲ್ಲಾ ಕವನ ಸಂಕಲನಗಳಲ್ಲಿಯೂ ಆಧುನಿಕತೆಯ ಹಿಂಸೆಯ ರೂಪಕಗಳು ದಟ್ಟವಾಗಿ ಹರಡಿಕೊಂಡಿವೆ. ಅಲಕ್ಷಿತ ಸಮುದಾಯಗಳ ಸಾಂಸ್ಕೃತಿಕ ಪ್ರವೃತ್ತಿಗಳನ್ನು ಸ್ವಭಾವ ಸಹಜ ತುಡಿತಗಳನ್ನು ಕಟ್ಟಿಕೊಡುವ ಶಿವಪ್ರಕಾಶರವರ ಕಾವ್ಯ ಸಮಕಾಲೀನ ಸಂದರ್ಭಕ್ಕೆ ವಿಶಿಷ್ಟ ಅರ್ಥಗಳನ್ನು ಕಾಣಿಸಿದೆ. ಅವರು ಪುರಾಣ, ಇತಿಹಾಸ, ಜನಪದಗಳಿಂದ ವಸ್ತುಗಳನ್ನು ಅರಿಸಿಕೊಂಡು ಸಾರ್ವಕಾಲಿಕ ಮೌಲ್ಯಗಳನ್ನು ಎತ್ತಿ ಹಿಡಿಯುವ ನಾಟಕ ಕೃತಿಗಳನ್ನು ರಚಿಸಿದ್ದಾರೆ. ಅವರು ರಚಿಸಿದ ಒಂದೊಂದು ನಾಟಕಗಳು ಸಹ ಕನ್ನಡ ನಾಟಕ ಕ್ಷೇತ್ರದಲ್ಲಿ ಹೊಸ ಪ್ರಯೋಗಗಳು ಎನಿಸಿವೆ. ‘ಮಹಾಚೈತ್ರ’ ಜನಪ್ರಿಯತೆಯ ಜೊತೆಗೆ ಕನ್ನಡದ ಅತ್ಯುತ್ತಮ ನಾಟಕಗಳಲ್ಲಿ ಒಂದು ಎಂದು ವಿದ್ವಾಂಸರಿಂದ ಪರಿಗಣಿತಗೊಂಡಿದೆ. ಡಾ.ಎಚ್‌.ಎಸ್‌.ಶಿವಪ್ರಕಾಶರವರು ಪ್ರಸಿದ್ಧ ಇಂಗ್ಲೀಷ ನಾಟಕವಾದ ಕಿಂಗ್‌ಲಿಯರ್ ಮತ್ತು ಸ್ಪ್ಯಾನಿಶ್‌ನ ಜಿಂಗೋನಿಯಾ ಜಿಂಗೋನೆ ಅವರ ಪ್ರಸಿದ್ಧ ಕಾವ್ಯವನ್ನು ಕನ್ನಡಕ್ಕೆ ಅಚ್ಚುಕಟ್ಟಾಗಿ ಅನುವಾದಿಸಿಕೊಟ್ಟಿದ್ದಾರೆ. ‘ಮಾಗಿ ಪರ್ವ’ ಸಂಕಲನದಲ್ಲಿ ಹಾಯ್ಕುಗಳನ್ನು ಕಟ್ಟಿಕೊಟ್ಟಿದ್ದಾರೆ. ‘ಮೊದಲ ಕಟ್ಟಿನ ಗದ್ಯ’ ವಿಮರ್ಶಾಕೃತಿಯಲ್ಲಿ ಅವರು ಓದುಗರಿಗೆ ಹೊಸ ವಿಮರ್ಶಾದರ್ಶನವನ್ನೇ ನೀಡಿದ್ದಾರೆ. ನಾಡು, ನುಡಿ, ದೇವರು, ಮತ, ಮೂಢನಂಬಿಕೆ, ಸಿನಿಮಾ, ಧರ್ಮ, ಸಂಸ್ಕೃತಿ ಅಸಮಾನತೆ, ಸ್ತ್ರೀಯರ ಸ್ಥಾನಮಾನ ಹೀಗೆ ಸಮಾಜದ ಎಲ್ಲಾ ವಿಷಯಗಳ ಮೇಲು ಶಿವಪ್ರಕಾಶರವರು ಅಂಕಣ ಬರಹಗಳ ಮೂಲಕ ಅಭಿವ್ಯಕ್ತಿಸಿದ್ದಾರೆ. 

ಅವರ ಕಾವ್ಯ ಸತ್ವವನ್ನು ಸೂಕ್ಷ್ಮವಾಗಿ ಅವಲೋಕಿಸಿಕೊಂಡ ಆಂಧ್ರಕವಿ ಗೋರಟಿ ವೆಂಕಣ್ಣನವರು ಸ್ವ ಕವಿತೆಯೊಂದರ ಮೂಲಕ ಪ್ರತಿಕ್ರಿಯಿಸಿ ಗೌರವ ಸಲ್ಲಿಸಿದ್ದಾರೆ. ಕನ್ನಡ ಸಾಹಿತ್ಯದಲ್ಲಿ ಸಮೃದ್ಧವಾದ ಕೃಷಿಯನ್ನು ಮಾಡಿರುವ, ಮಾಡುತ್ತಿರುವ ಡಾ.ಎಚ್‌.ಎಸ್‌.ಶಿವಪ್ರಕಾಶರವರು ಬತ್ತೀಸರಾಗ ಎಂಬ ಆತ್ಮಕಥೆಯನ್ನು ರಚಿಸಿದ್ದಾರೆ. ಅವರ ಸಾಹಿತ್ಯ ಸಾಧನೆಗಾಗಿ ಹಲವಾರು ಪ್ರಶಸ್ತಿ-ಪುರಸ್ಕಾರಗಳು ಅವರನ್ನರಿಸಿ ಬಂದಿವೆ. ಕೇಂದ್ರ ಸಾಹಿತ್ಯ ಅಕಾಡೆಮಿ ಗೌರವ, ಕೇಂದ್ರ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ, ಕರ್ನಾಟಕ ಸಾಹಿತ್ಯ ಅಕಾಡೆಮಿ ಗೌರವ, ಕರ್ನಾಟಕ ಸಾಹಿತ್ಯ ಅಕಾಡೆಮಿಯಿಂದ ನಾಲ್ಕು ಕೃತಿಗಳಿಗೆ ಬಹುಮಾನ, ರಾಜ್ಯೋತ್ಸವ ಪ್ರಶಸ್ತಿ, ಕುವೆಂಪು ಭಾಷಾ ಭಾರತಿ ಪ್ರಶಸ್ತಿ, ಪುಣೆಯ ಅಖಿಲ ಭಾರತ ಮರಾಠಿ ಸಾಹಿತ್ಯ ಸಮ್ಮೇಳನದಲ್ಲಿ ಕುಸುಮಾಗ್ರಜ ರಾಷ್ಟ್ರೀಯ ಪುರಸ್ಕಾರ, ಧಾರವಾಡದ ಡಾ.ದ.ರಾ.ಬೇಂದ್ರೆ ರಾಷ್ಟ್ರೀಯ ಸ್ಮಾರಕ ಟ್ರಸ್ಟ್‌ವತಿಯಿಂದ ಅಂಬಿಕಾತನಯದತ್ತ ರಾಷ್ಟ್ರೀಯ ಪ್ರಶಸ್ತಿ, ಮಹಾತಪಸ್ವಿ ಶ್ರೀ ಕುಮಾರಸ್ವಾಮಿ ಸಾಹಿತ್ಯ ಭೂಷಣ ಪ್ರಶಸ್ತಿ ಹೀಗೆ ಹತ್ತು ಹಲವು ಪ್ರಶಸ್ತಿ ಪುರಸ್ಕಾರಗಳಿಗೆ ಅವರು ಭಾಜನರಾಗಿದ್ದಾರೆ.  

ಬೆಸಗರಹಳ್ಳಿ ರಾಮಣ್ಣ ಪ್ರತಿಷ್ಠಾನದಿಂದ ಅವರು ನಾಲ್ಕು ದಶಕಗಳ ಕವಿತೆಗಳು ‘ಹೋಗಿ ಬನ್ನಿ ಋತುಗಳೇ’ ಕೃತಿಯು 2021ರಲ್ಲಿ ಬೆಂಗಳೂರಿನಲ್ಲಿ ಲೋಕಾರೆ​‍್ಣಗೊಂಡಿದೆ. ಇದು ಎಳು ನೂರು ಪುಟಕ್ಕೂ ಮೀರಿದ ಸಮಗ್ರ ಸಂಕಲನವಾಗಿದೆ. ಸಧ್ಯ ಬೆಂಗಳೂರಿನಲ್ಲಿ ನೆಲೆಸಿರುವ ಅವರು ಯೂರೋಪ್, ದಕ್ಷಿಣ ಅಮೇರಿಕ, ಆಫ್ರಿಕಾ ದೇಶಗಳ ಹಲವಾರು ಸಾಹಿತ್ಯ ಕೃತಿಗಳನ್ನು ಕನ್ನಡಕ್ಕೆ ತಂದಿದ್ದಾರೆ. ‘ಮೌಲ್ಯಗಳು ಮಾಯವಾಗುತ್ತಿರುವ ಯಾಂತ್ರಿಕ ಬದುಕಿನ ಇವತ್ತಿನ ದಿನಗಳಲ್ಲಿ ಶಿವಪ್ರಕಾಶರು ಧಾರ್ಮಿಕ ಪರಂಪರೆಯಲ್ಲಿ ಶಕ್ತಿಯನ್ನು ಕಂಡುಕೊಳ್ಳುವ ಅತ್ಯಂತ ಕುತೂಹಲಕಾರಿಯಾದ ಪ್ರಯತ್ನಗಳನ್ನು ಕಾವ್ಯದಲ್ಲಿ ಮಾಡಿದ್ದಾರೆ’ ಎನ್ನುತ್ತಾರೆ ಖ್ಯಾತ ವಿಮರ್ಶಕರಾದ ಎಲ್‌.ಎಸ್‌.ಶೇಷಗಿರಿರಾಯರು, ಶಿವಪ್ರಕಾಶರ ‘ಸಿಂಗಿರಾಜ ಸಂಪಾದನೆ, ಸಾಮಗಾರ ಭೀಮವ್ವ, ವಾಸವದತ್ತೆ ಕನ್ನಡ ವಿಮರ್ಶೆಯ ಗಮನ ಸೆಳೆದಿರುವ ಮೂರು ಪ್ರಮುಖ ಕಥನ ಕವನಗಳು, ಯಾವದೇ ಒಂದು ಪಂಥ, ಆಂದೋಲನಗಳ, ಸಿದ್ಧಾಂತಗಳ ಜೊತೆ ಗುರುತಿಸಿಕೊಳ್ಳದೇ ಭಾವ-ಅನುಭಾವಗಳಲ್ಲಿ ಬದುಕಿನ ಆನ್ವೇಷಣೆಯ ಸೃಜನಶೀಲತೆಗೆ ಬದ್ಧರಾಗಿರುವ ಡಾ. ಎಚ್‌.ಎಸ್‌.ಶಿವಪ್ರಕಾಶ ಅವರು ಕನ್ನಡದ ಪ್ರಮುಖ ಕವಿ, ನಾಟಕಕಾರರು. 

- * * * -