ಭಾರತದ ಗುಪ್ತಚರ ಸಂಸ್ಥೆಯಿಂದ ನನ್ನ ಹತ್ಯೆಗೆ ಸಂಚು: ಶ್ರೀಲಂಕಾ ಅಧ್ಯಕ್ಷರ ಡ್ಯಾಮೇಜಿಂಗ್ ಸ್ಟೇಟ್ಮೆಂಟ್

ಚೆನ್ನೈ 17: ನಾಯಕರ ಹತ್ಯೆ, ಭಯೋತ್ಪಾದನೆ ಕೃತ್ಯಕ್ಕೆ ಪಿತೂರಿ ಇತ್ಯಾದಿ ಆಪಾದನೆಗಳೆಲ್ಲಾ ಪಾಕಿಸ್ತಾನದ ಐಎಸ್​ಐ ಮೇಲೆ ಇರುವುದು ಸಾಮಾನ್ಯ. ಈಗ ಭಾರತದ ರಿಸರ್ಚ್ ಅಂಡ್ ಅನಾಲಿಸಿಸ್ ವಿಂಗ್ (ರಾ) ಗುಪ್ತಚರ ಸಂಸ್ಥೆಯ ಮೇಲೂ ಇಂಥ ಗಂಭೀರ ಆರೋಪ ಬಂದಿದೆ. ನೆರೆಯ ಶ್ರೀಲಂಕಾ ದೇಶದ ಅಧ್ಯಕ್ಷರ ಮೈತ್ರಿಪಾಲ ಸಿರಿಸೇನ ಇಂಥದ್ದೊಂದು ಆಪಾದನೆ ಮಾಡಿದ್ಧಾರೆಂದು ದಿ ಹಿಂದೂ ಪತ್ರಿಕೆ ವರದಿ ಮಾಡಿದೆ.
ತನ್ನ ಸಚಿವ ಸಂಪುಟದ ಸಭೆಯಲ್ಲಿ ಚರ್ಚೆ ಮಾಡುತ್ತಿದ್ದ ವೇಳೆ ಸಿರಿಸೇನಾ, ಭಾರತದ ರಾ ಸಂಸ್ಥೆಯಿಂದ ತನ್ನ ಹತ್ಯೆಗೆ ಪ್ರಯತ್ನವಾಗಿತ್ತು ಎಂದು ತಿಳಿಸಿದ್ದರು. ಅವರ ಪ್ರಕಾರ, ಪ್ರಧಾನಿ ನರೇಂದ್ರ ಮೋದಿ ಅವರಿಗೆ ಈ ಸಂಚಿನ ಅರಿವಿಲ್ಲದೇ ಇರಬಹುದು ಎಂದು ಹೇಳಿರುವ ಮಾಹಿತಿ ತನಗೆ ಲಭಿಸಿದೆ ಎಂದು ದಿ ಹಿಂದೂ ಪತ್ರಿಕೆಯ ವರದಿಯಲ್ಲಿ ತಿಳಿಸಲಾಗಿದೆ.
ಸಂಪುಟ ಸಭೆಯಲ್ಲಿ ಭಾಗಿಯಾಗಿದ್ದ ವ್ಯಕ್ತಿಯೊಬ್ಬರು ಭಾರತದ ಪತ್ರಿಕೆಗೆ ಈ ಮಾಹಿತಿ ನೀಡಿದ್ದಾರೆ. ಆದರೆ, ಶ್ರೀಲಂಕಾ ಅಧ್ಯಕ್ಷರ ಕಡೆಯಿಂದ ಯಾವುದೇ ಅಧಿಕೃತ ಮಾಹಿತಿ ಲಭ್ಯವಾಗಿಲ್ಲ.
ಕಳೆದ ತಿಂಗಳಷ್ಟೇ ಶ್ರೀಲಂಕಾದ ಭ್ರಷ್ಟಾಚಾರ ನಿಗ್ರಹ ದಳದ ನಮಲ್ ಕುಮಾರ ಎಂಬುವವರು ಶ್ರೀಲಂಕಾ ಅಧ್ಯಕ್ಷ ಸಿರಿಸೇನಾ ಮತ್ತು ಮಾಜಿ ರಕ್ಷಣಾ ಕಾರ್ಯದರ್ಶಿ ಗೋತಬಾಯ ರಾಜಪಕ್ಸ ಅವರ ಹತ್ಯೆಗೆ ಸಂಚು ನಡೆದಿರುವ ಮಾಹಿತಿ ತನ್ನ ಬಳಿ ಇದೆ ಎಂದು ಹೇಳಿದ್ದ. ಇದೀಗ ಅಧ್ಯಕ್ಷ ಮೈತ್ರಿಪಾಲ ಸಿರಿಸೇನಾ ಅವರು ರಾ ಸಂಸ್ಥೆಯತ್ತಲೇ ನೇರವಾಗಿ ಬೊಟ್ಟು ಮಾಡಿರುವುದು ಗಮನಾರ್ಹ.
ಎಲ್​ಟಿಟಿಇ ಕಾಲದಿಂದಲೂ ಭಾರತ ಮತ್ತು ಶ್ರೀಲಂಕಾ ನಡುವಿನ ಸಂಬಂಧ ಅಷ್ಟಕಷ್ಟೇ. ಶ್ರೀಲಂಕಾದಲ್ಲಿನ ಹಲವು ದುರ್ಘಟನೆಗಳಿಗೆ ಭಾರತದ ಕೈವಾಡ ಇದೆ ಎಂದು ಹಲವು ಬಾರಿ ಆಪಾದನೆಗಳು ಬಂದಿವೆ. 2015ರಲ್ಲಿ ಅಂದಿನ ಅಧ್ಯಕ್ಷ ಮಹಿಂದಾ ರಾಜಪಕ್ಸ ಅವರು ಚುನಾವಣೆಯಲ್ಲಿ ಹೀನಾಯ ಸೋಲನುಭವಿಸಿದಾಗ ಭಾರತದ ರಾ ಸಂಸ್ಥೆಯತ್ತಲೇ ಸಂಶಯ ವ್ಯಕ್ತಪಡಿಸಿದ್ದರು.