ಬೆಂಗಳೂರು, ಅ 26: ಬೆಳ್ಳಂಬೆಳಗ್ಗೆ ರೌಡಿ ಶೀಟರ್ ಮೇಲೆ ಪೊಲೀಸರು ಗುಂಡು ಹಾರಿಸಿ, ಬಂಧಿಸಿದ್ದಾರೆ. ರೌಡಿ ಶೀಟರ್ ಹರೀಶ್ ಅಲಿಯಾಸ್ ರಾಬರಿ ಹರೀಶ್ ಬಂಧಿತ ಆರೋಪಿ. ಇತ್ತೀಚಿಗೆ ಈತ ದಾಸರಹಳ್ಳಿ ಬಳಿಯ ಅಂಗಡಿಯೊಂದನ್ನು ದರೋಡೆ ಮಾಡಿದ್ದ. ಇಂದು ಬೆಳಗ್ಗೆ ಆರೋಪಿ ಹರೀಶ್, ಅಬ್ಬಿಗೆರೆ ಬಳಿ ಅಡಗಿರುವ ಕುರಿತು ಖಚಿತ ಮಾಹಿತಿ ಪಡೆದಿದ್ದ ಪೀಣ್ಯ ಪೊಲೀಸ್ ಠಾಣೆ ಇನ್ಸ್ಪೆಕ್ಟರ್ ಮುದ್ದುರಾಜ್ ತಮ್ಮ ತಂಡದೊಂದಿಗೆ ಆರೋಪಿಯನ್ನು ಬಂಧಿಸಲು ಸ್ಥಳಕ್ಕೆ ತೆರಳಿದ್ದರು. ಈ ವೇಳೆ ಸಂದರ್ಭದಲ್ಲಿ ಆರೋಪಿ ಹರೀಶ್, ಪೊಲೀಸ್ ಪೇದೆಗಳಾದ ಲಕ್ಷ್ಮೀನಾರಾಯಣ್ ಮತ್ತು ರವಿಕುಮಾರ್ ಮೇಲೆ ಹಲ್ಲೆ ಮಾಡಿ ಪರಾರಿಯಾಗಲು ಯತ್ನಿಸಿದ್ದಾನೆ. ಈ ವೇಳೆ ಇನ್ಸ್ಪೆಕ್ಟರ್ ಮುದ್ದುರಾಜ್ ಗಾಳಿಯಲ್ಲಿ ಗುಂಡುಹಾರಿಸಿ ಶರಣಾಗುವಂತೆ ಆರೋಪಿಗೆ ಸೂಚಿಸಿದ್ದಾರೆ. ಆದರೆ ಅವರ ಮಾತನ್ನು ಲೆಕ್ಕಿಸದೆ ಹಲ್ಲೆಗೆ ಮುಂದಾದಾಗ ಅವರು ಆತನ ಕಾಲಿಗೆ ಗುಂಡು ಹಾರಿಸಿದ್ದಾರೆ. ತಕ್ಷಣ ಕುಸಿದು ಬಿದ್ದ ಆತನನ್ನು ಸುತ್ತುವರಿದ ಪೊಲೀಸರು ಆತನನ್ನು ವಶಕ್ಕೆ ಪಡೆದು ಆಸ್ಪತ್ರೆಗೆ ದಾಖಲಿಸಿದ್ದಾರೆ. ಘಟನೆಯ ಬಳಿಕ ಗಾಯಾಳು ಪೇದೆಗಳನ್ನು ಕೂಡ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.