ಬೆಳಗಾವಿ, ಅ 13: ಯುವಜನತೆ ದೈಹಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡು ಸಧೃಢರಾಗಿರಬೇಕು ಎಂದು ಕೆ ಎಲ್ ಇ ಕಾರ್ಯಾಧ್ಯಕ್ಷ ಡಾ. ಪ್ರಭಾಕರ ಕೋರೆ ಕರೆ ನೀಡಿದ್ದಾರೆ.
ಅವರು ನಗರದ ಕೆ ಎಲ್ ಇ ಶತಮಾನೋತ್ಸವ ಚಾರಿಟೆಬಲ್ ಆಸ್ಪತ್ರೆ ಹಾಗೂ ವೈದ್ಯಕೀಯ ಸಂಶೋಧನಾ ಕೇಂದ್ರ ಮತ್ತು ಶಾಸಕ ಅಭಯ ಪಾಟೀಲ ಸಹಯೋಗದಲ್ಲಿ ಆಯೋಜಿಸಲಾಗಿದ್ದ ವಾಕಥಾನ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಭಾರತ ದೇಶ ತನ್ನ ಜನಸಂಖ್ಯೆಯಲ್ಲಿ ಎರಡನೇ ಅತಿದೊಡ್ಡ ದೇಶವಾಗಿದ್ದು ಅಧಿಕ ಯುವಜನರೂ ಇದ್ದಾರೆ. ಆದರೆ ಪೌಷ್ಟಿಕಾಂಶ, ಜೀವಸತ್ವಗಳ ಕೊರತೆ, ದೈಹಿಕ ಚಟುವಟಿಕೆಗಳು ಇಲ್ಲದಿರುವಿಕೆ, ಜ್ಞಾನದ ಅಭಾವ, ತಂತ್ರಜ್ಞಾಗಳ ಅತಿಯಾದ ಬಳಕೆ ಮೊದಲಾದ ಕಾರಣಗಳಿಂದಾಗಿ ಯುವಜನತೆ ಸಧೃಢರಾಗಿಲ್ಲ ಎಂದು ಅವರು ಬೇಸರ ವ್ಯಕ್ತಪಡಿಸಿದರು.
ಹೀಗಾಗಿ ಯುವಜನರು ಉತ್ತಮ ಜ್ಞಾನ ಹೊಂದುತ್ತಾ ತಂತ್ರಜ್ಞಾನದ ಅತಿಯಾದ ಬಳಕೆ ನಿಲ್ಲಿಸಿ ದೇಶದ ಸದೃಢ ನಿರ್ಮಾಣದ ಭಾಗವಾಗುವಂತೆ ಅವರು ಕರೆ ನೀಡಿದರು.
ಬಳಿಕ ದಕ್ಷಿಣ ಬೆಳಗಾವಿಯ ಶಾಸಕ ಅಭಯ ಪಾಟೀಲ ಮಾತನಾಡಿ, ಪ್ರಧಾನ ಮಂತ್ರಿ ಅವರು ಕರೆ ನೀಡಿರುವಂತೆ ಸ್ವಚ್ಛ ಹಾಗೂ ಪ್ಲಾಸ್ಟಿಕ್ ಮುಕ್ತ ಸಮಾಜದಿಂದ ಆರೋಗ್ಯ ಪೂರ್ಣ ಜೀವನ ಸಾಧ್ಯ. ಸುತ್ತಮುತ್ತಲ ಪರಿಸರವನ್ನು ಸ್ವಚ್ಛವಾಗಿರಿಸಿ, ಪ್ಲಾಸ್ಟಿಕ್ ಬಳಕೆ ನಿಲ್ಲಿಸಲು ಪಣ ತೊಡುವಂತೆ ಮನವಿ ಮಾಡಿದರು.
ನಂತರ ಮಾತನಾಡಿದ ಜಿಲ್ಲಾ ಹಿರಿಯ ನಾಗರಿಕ ಸಂಘದ ಮಾಜಿ ಅಧ್ಯಕ್ಷ ಪ್ರಭಾಕರ ಕುಲಕರ್ಣಿ, ಆರೋಗ್ಯ ಕಾಪಾಡಿಕೊಳ್ಳಲು ಉತ್ತಮ ಸಾಧನ ನಡಿಗೆ. ವಾಹನಗಳ ದಾಸರಾಗದೇ ಆದಷ್ಟು ನಡಿಗೆಯನ್ನು ರೂಢಿಸಿಕೊಳ್ಳುತ್ತಾ ದೈಹಿಕ ಹಾಗೂ ಮಾನಸಿಕ ಆರೋಗ್ಯ ಕಾಪಾಡಿಕೊಳ್ಳಬಹುದು ಎಂದು ಸಲಹೆ ನೀಡಿದರು.
ವಾಕಥಾನ್ ನಗರದ ಟಿಳಕವಾಡಿಯ ಲೆಲೆ ಮೈದಾನದಿಂದ ಪ್ರಾರಂಭಗೊಂಡು 2 ನೇ ರೈಲ್ವೇ ಗೇಟ್ ಮೂಲಕ ಆರ್ಪಿಡಿ ವೃತ್ತದ ಮುಖೇನ ಕೆ ಎಲ್ ಇ ಶತಮಾನೋತ್ಸವ ಚಾರಿಟೆಬಲ್ ಆಸ್ಪತ್ರೆ ತಲುಪಿತು. ಇದರಲ್ಲಿ ಒಂದು ಸಾವಿರಕ್ಕೂ ಹೆಚ್ಚು ನಾಗರಿಕರು ಪಾಲ್ಗೊಂಡಿದ್ದರು.