ಛಾಯಾಚಿತ್ರಗಳು ಜೀವನದ ಪ್ರತಿಬಿಂಬ: ಜಿಲ್ಲಾಧಿಕಾರಿ ದಿವ್ಯ ಪ್ರಭು
Photographs are a reflection of life: Deputy Commissioner Divya Prabhu
ಧಾರವಾಡ 09: ಛಾಯಾಚಿತ್ರಗಳು ಕೇವಲ ಚಿತ್ರಗಳಲ್ಲ, ಅವು ಜೀವನದ ನಿಜವಾದ ಕ್ಷಣಗಳನ್ನು, ಭಾವನೆಗಳನ್ನು ಮತ್ತು ಸಮಾಜದ ಹೃದಯಸ್ಪಂದನವನ್ನು ಸೆರೆ ಹಿಡಿಯುವ ಸಾಧನಗಳಾಗಿವೆ ಎಂದು ಜಿಲ್ಲಾಧಿಕಾರಿ ದಿವ್ಯ ಪ್ರಭು ಅವರು ಹೇಳಿದರು.
ಅವರು ಇಂದು (ಸೆ.9) ವಾರ್ತಾ ಇಲಾಖೆಯ ವಾರ್ತಾಭವನದಲ್ಲಿ ಸೆ.15 ರ ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಹಿನ್ನಲೆಯಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ, ಸಮಾಜ ಕಲ್ಯಾಣ ಇಲಾಖೆ ಹಾಗೂ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಸಂಯುಕ್ತ ಆಶ್ರಯದಲ್ಲಿ ಛಾಯಾಗ್ರಾಹಕರಿಗೆ ಮತ್ತು ವಿದ್ಯಾರ್ಥಿಗಳಿಗೆ ಆಯೋಜಿಸಿದ್ದ ಪ್ರಜಾಪ್ರಭುತ್ವ ಕುರಿತ ಛಾಯಾಚಿತ್ರ ಸ್ಪರ್ಧೆ ಮತ್ತು ಪ್ರದರ್ಶನ ಕಾರ್ಯಕ್ರಮ ಉದ್ಘಾಟಿಸಿ, ಮಾತನಾಡಿದರು.
ಪ್ರಜಾಪ್ರಭುತ್ವದ ಆಶಯಗಳನ್ನು ಎತ್ತಿಹಿಡಿಯುವಲ್ಲಿ ಛಾಯಾಚಿತ್ರಗಳು ಪ್ರಮುಖ ಪಾತ್ರವಹಿಸುತ್ತವೆ. ದೃಶ್ಯ ಮಾಧ್ಯಮದ ಮೂಲಕ ಪ್ರಜಾಪ್ರಭುತ್ವದ ಮೌಲ್ಯಗಳನ್ನು ಜನರಿಗೆ ತಲುಪಿಸಲು ಇಂತಹ ಸ್ಪರ್ಧೆಗಳು ಸಹಕಾರಿಯಾಗಿವೆ ಎಂದು ತಿಳಿಸಿದರು.
ಸ್ಪರ್ಧೆಯು ಸ್ಥಳೀಯ ಛಾಯಾಗ್ರಾಹಕರಿಗೆ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಲು ಉತ್ತಮ ವೇದಿಕೆಯಾಗಿದೆ ಎಂದು ಅವರು ಹೇಳಿದರು.
ಹಿಂದಿನ ದಿನಗಳಲ್ಲಿ ಛಾಯಾಚಿತ್ರಗಳ ಪ್ರದರ್ಶನದ ಸ್ಪರ್ಧೆಯನ್ನು ಸಾಮಾನ್ಯವಾಗಿ ಶಾಲಾ-ಕಾಲೇಜು ವಿದ್ಯಾರ್ಥಿಗಳ ಮಟ್ಟಕ್ಕೆ ಮಾತ್ರ ಸೀಮಿತವಾಗಿತ್ತು. ಆದರೆ ಈ ಬಾರಿ ಸಾರ್ವಜನಿಕರಿಂದಲೂ ಅತೀ ಉತ್ತಮ ಸ್ಪಂದನೆ ದೊರೆತಿದೆ. ಛಾಯಾಚಿತ್ರಗಳನ್ನು ತೆಗೆಯುವ ಮೂಲಕ ತಮ್ಮ ಅನುಭವ ಮತ್ತು ಸೃಜನಶೀಲತೆಯನ್ನು ಅವರು ಹಂಚಿಕೊಂಡಿದ್ದು ನೋಡಿದರೆ ಈ ಪ್ರದರ್ಶನ ಒಂದು ಸಮಾಜದ ಸಂವೇದನೆಗಳ ನಿಜವಾದ ಪ್ರತಿಬಿಂಬವಾಗಿದೆ ಎಂದು ಹೇಳಿದರು.
ಮೊದಲಿನ ದಿನಗಳಲ್ಲಿ ಛಾಯಾಚಿತ್ರ ತೆಗೆದುಕೊಳ್ಳುವುದು ಸುಲಭವಾಗಿರಲಿಲ್ಲ. ಆ ಸಮಯದಲ್ಲಿ ಕ್ಯಾಮೆರಾ ಸಾಧನಗಳು ಅಪರೂಪವಾಗಿದ್ದವು. ವಿಶೇಷ ಸಂದರ್ಭಗಳಲ್ಲಿ ಮಾತ್ರ ಛಾಯಾಚಿತ್ರೀಕರನ್ನು ಕರೆಸಿಕೊಳ್ಳಲಾಗುತ್ತಿತ್ತು. ಅವರು ತೆಗೆದ ಚಿತ್ರಗಳು ನಮ್ಮ ಜೀವನದ ನೆನಪುಗಳಾಗುತ್ತಿದ್ದವು. ಆದರೆ ಕಾಲ ಬದಲಾದಂತೆ ತಂತ್ರಜ್ಞಾನ ಬೆಳೆದಿತ್ತು. ಡಿಜಿಟಲ್ ಕ್ಯಾಮೆರಾಗಳು ಮತ್ತು ಸ್ಮಾರ್ಟಫೋನ್‌ಗಳ ಪ್ರಚಾರ ಹೆಚ್ಚಾದ ಕಾರಣ ಇಂದು ಪ್ರತಿಯೊಬ್ಬರೂ ಛಾಯಾಗ್ರಾಹಕರಾಗಿದ್ದಾರೆ.
ಮದುವೆ, ಹುಟ್ಟುಹಬ್ಬ, ಹಬ್ಬ ಹರಿದಿನಗಳು, ಜಾತ್ರೆ, ಪ್ರವಾಸದ ಸಂದರ್ಭವಾಗಲಿ, ಎಲ್ಲರೂ ತಮ್ಮ ಮೊಬೈಲ್‌ಗಳಲ್ಲಿ ಚಿತ್ರ ಮತ್ತು ವೀಡಿಯೊಗಳನ್ನು ಸೆರೆಹಿಡಿಯುತ್ತಿದ್ದಾರೆ. ಈ ಪರಿವರ್ತನೆಯೇ ಛಾಯಾಚಿತ್ರ ಕಲೆಯನ್ನು ಇನ್ನಷ್ಟು ಸಾಮಾನ್ಯಗೊಳಿಸಿದೆ. ಪ್ರತಿಯೊಂದು ಫೋಟೋದಲ್ಲಿಯೂ ಒಂದು ಕಥೆ ಅಡಗಿದೆ, ಆ ಎಲ್ಲ ಫೋಟೊಗಳು ನೆನಪುಗಳನ್ನು ಬಿಚ್ಚಿಡುತ್ತವೆ ಎಂದು ಜಿಲ್ಲಾಧಿಕಾರಿ ಹೇಳಿದರು.
ಇಂದಿನ ಛಾಯಾಗ್ರಹಣವು ತಂತ್ರಜ್ಞಾನದ ಅಬ್ಬರದಿಂದ ಸಂಪೂರ್ಣವಾಗಿ ಬದಲಾಗಿದೆ. ಡಿಜಿಟಲ್ ಕ್ಯಾಮರಾಗಳು, ಸ್ಮಾರ್ಟಫೋನ್‌ಗಳು, ಡ್ರೋನ್‌ಗಳು ಛಾಯಾಗ್ರಹಣವನ್ನು ಪ್ರತಿಯೊಬ್ಬರಿಗೂ ಸುಲಭವಾಗಿ ತಲುಪಿಸಿವೆ. ಈಗ ಒಂದು ಸೆಕೆಂಡಿಗೆ ನೂರಾರು ಚಿತ್ರಗಳನ್ನು ತೆಗೆಯಬಹುದು, ಅವುಗಳನ್ನು ತಕ್ಷಣವೇ ಪರೀಶೀಲಿಸಬಹುದು, ಸಂಪಾದಿಸಬಹುದು ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳಬಹುದು. ಛಾಯಾಗ್ರಹಣವು ಕೇವಲ ನೆನಪುಗಳನ್ನು ಸೆರೆಹಿಡಿಯುವ ಸಾಧನವಾಗಿ ಉಳಿದಿಲ್ಲ, ಅದೊಂದು ಸಂವಹನ ಮಾಧ್ಯಮವಾಗಿದೆ ಎಂದು ಹೇಳಿದರು.
ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕಿ ಪಿ. ಶುಭ ಅವರು ಮಾತನಾಡಿ, ಫೋಟೋಗ್ರಾಫಿ ಕೇವಲ ದೃಶ್ಯವಲ್ಲ, ಅದೊಂದು ಅನುಭವ, ನಿಮ್ಮ ಕ್ಯಾಮೆರಾ ಕೇವಲ ಒಂದು ಉಪಕರಣವಲ್ಲ, ಅದು ನಿಮ್ಮ ಕಣ್ಣುಗಳು ಮತ್ತು ಆತ್ಮದ ವಿಸ್ತರಣೆ. ನೀವು ಏನು ನೋಡುತ್ತೀರಿ ಎಂಬುದಕ್ಕಿಂತ ಹೆಚ್ಚಾಗಿ, ನೀವು ಏನು ಅನುಭವಿಸುತ್ತೀರಿ ಎಂಬುದನ್ನು ಸೆರೆಹಿಡಿಯಲು ಪ್ರಯತ್ನಿಸುತ್ತಿರಿ ಎಂದು ಛಾಯಾಗ್ರಾಹಕರ ಬಗ್ಗೆ ಹೇಳಿದರು.
ಇಂದಿನ ಡಿಜಿಟಲ್ ಯುಗದಲ್ಲಿ, ಯಾರಾದರೂ ಸುಲಭವಾಗಿ ಫೋಟೋ ತೆಗೆಯಬಹುದು. ಆದರೆ, ನಿಜವಾದ ಕಲಾಕೃತಿ ಹೊರಹೊಮ್ಮುವುದು ಭಾವನೆಗಳು ಮತ್ತು ಆಲೋಚನೆಗಳ ಸಂಯೋಜನೆಯಿಂದ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಧಾರವಾಡ ಫೋಟೊ ಮತ್ತು ವಿಡಿಯೋ ಗ್ರಾಫೊರ್ಸ್ ಸಂಘದ ಅಧ್ಯಕ್ಷ ಧತ್ತ ಪ್ರಸಾದ ವೆಂಕಟೇಶ, ಧಾರವಾಡ ಗ್ರಾಮೀಣ ಛಾಯಾಗ್ರಾಹಕ ಸಂಘದ ಅಧ್ಯಕ್ಷ ಪ್ರಭಯ್ಯ ಲಕ್ಕುಂಡಿಮಠ ಮತ್ತು ಹುಬ್ಬಳ್ಳಿ ತಾಲೂಕಿನ ಛಾಯಾಚಿತ್ರದ ಉಪಾಧ್ಯಕ್ಷ ದಿನೇಶ ದಾಬಡೆ ಅವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಸಹಾಯಕ ನಿರ್ದೇಶಕ ಡಾ. ಎಸ್.ಎಂ.ಹಿರೇಮಠ ಅವರು ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ಎಲ್ಲ ಛಾಯಾಚಿತ್ರ ಪ್ರದರ್ಶನದ ಸ್ಪರ್ಧಾರ್ಥಿಗಳು, ಸಮಾಜ ಕಲ್ಯಾಣ ಇಲಾಖೆ ಹಾಗೂ ವಾರ್ತಾ ಇಲಾಖೆಯ ಅಧಿಕಾರಿ ಮತ್ತು ಸಿಬ್ಬಂದಿಯವರು ಉಪಸ್ಥಿತರಿಸಿದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 