ಬೆಂಗಳೂರು 04: ಹಣದ ಲಭ್ಯತೆಯ ಆಧಾರದ ಮೇಲೆ ಹಂತ ಹಂತವಾಗಿ ಗುತ್ತಿಗದಾರರ ಬಾಕಿ ಬಿಲ್ ಪಾವತಿಸುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಗುತ್ತಿಗೆದಾರರಿಗೆ ಭರವಸೆ ನೀಡಿದರು.
ಬಾಕಿ ಬಿಲ್ ಪಾವತಿ ಸೇರಿ ಇನ್ನಿತರ ಬೇಡಿಕೆಗಳ ಈಡೇರಿಕಾಗಿ ವಿಧಾನಸೌಧದಲ್ಲಿ ತಮ್ಮನ್ನು ಸೋಮವಾರ ಭೇಟಿಯಾದ ರಾಜ್ಯ ಗುತ್ತಿಗೆದಾರರ ಸಂಘದ ಪದಾಧಿಕಾರಿಗಳಿಗೆ, ಹಂತ ಹಂತವಾಗಿ ಬಾಕಿ ಬಿಲ್ ಪಾವತಿಸುವುದಾಗಿ ಮುಖ್ಯಮಂತ್ರಿಗಳು ಭರವಸೆ ನೀಡಿದರು.
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯ ಗುತ್ತಿಗೆದಾರರ ಸಂಘದ ಪದಾಧಿಕಾರಿಗಳೊಂದಿಗೆ ಇಂದು ಸುದೀರ್ಘ ಮಾತುಕತೆ ನಡೆಸಿದ್ದೇನೆ. ಬಾಕಿಯಿರುವ ಬಿಲ್ ಪಾವತಿಗೆ ಮನವಿ ಮಾಡಿದ್ದಾರೆ. ಸರ್ಕಾರದಲ್ಲಿ ಲಭ್ಯವಿರುವ ಹಣಕಾಸನ್ನು ಅವಲೋಕಿಸಿ, ಗುತ್ತಿಗೆದಾರರ ಬಾಕಿ ಬಿಲ್ಲುಗಳ ಪಾವತಿ ಬಗ್ಗೆ ಪರಿಶೀಲಿಸಲಾಗುವುದು. ಏಪ್ರಿಲ್ ಮಾಹೆಯಲ್ಲಿ ಸಾಧ್ಯವಾದಷ್ಟು ಬಾಕಿ ಬಿಲ್ಲುಗಳನ್ನು ಪಾವತಿಸಲು ಪ್ರಯತ್ನಿಸಲಾಗುವುದು ಎಂದು ಹೇಳಿದರು.
ಹಿಂದಿನ ಸರ್ಕಾರದ ಅವಧಿಯಲ್ಲಿ ಅನುದಾನವಿಲ್ಲದಿದ್ದರೂ, ಟೆಂಡರ್ ಪ್ರಕ್ರಿಯೆಯನ್ನು ಕೈಗೊಂಡು, ಕಾಮಗಾರಿ ಪ್ರಾರಂಭಿಸಿದ ಕಾರಣದಿಂದಾಗಿ ಬಾಕಿ ಬಿಲ್ಲುಗಳು ಹೆಚ್ಚಿವೆ. ಇದಕ್ಕೆ ನಮ್ಮ ಸರ್ಕಾರ ಹೊಣೆಯಾಗಲು ಸಾಧ್ಯವೇ? ಯಾರೇ ಆಗಿರಲಿ ಲಂಚ ಪಡೆಯುವುದು ಹಾಗೂ ಲಂಚ ನೀಡುವುದು ಸಹ ಅಪರಾಧ. ಈ ರೀತಿಯ ಕೃತ್ಯದಲ್ಲಿ ಯಾರು ತೊಡಗಬಾರದು ಎಂದು ತಿಳಿಸಿದರು.
ನಾನು ಇದುವರೆಗೂ ಬಿಲ್ ಬಿಡುಗಡೆ ಮಾಡಲು ಯಾರಿಂದಲೂ ನಯಾಪೈಸೆ ದುಡ್ಡು ಪಡೆದಿಲ್ಲ. ಹಿಂದಿನ ಬಿಜೆಪಿ ಸರ್ಕಾರದವರು ಬಜೆಟ್ ನಲ್ಲಿ ಅನುದಾದ ಇಡದೆ ಬೇಕಾಬಿಟ್ಟಿ ಟೆಂಡರ್ ಕರೆದು, ಕೆಲಸ ಆರಂಭಿಸಿ, ಗುತ್ತಿಗೆದಾರರಿಗೆ ಬಿಲ್ ಹಣ ನೀಡದೆ ಸುಮಾರು ರೂ.30,000 ಕೋಟಿ ಬಾಕಿ ಮೊತ್ತವನ್ನು ನಮ್ಮ ಸರ್ಕಾರದ ತಲೆಯ ಮೇಲೆ ಹೊರಿಸಿ ಹೋಗಿದ್ದಾರೆ. ಇದಕ್ಕೆ ಯಾರು ಹೊಣೆ? ಎಂದು ಪ್ರಶ್ನಿಸಿದರು.