ನವದೆಹಲಿ, ಜೂನ್ 11, ದೇಶದಲ್ಲಿ ಕರೋನ ಪ್ರಕರಣ ಹೆಚ್ಚುತ್ತಿರುವಂತೆ ಪೆಟ್ರೋಲ್ ಹಾಗೂ ಡೀಸೆಲ್ ತೈಲ ಬೆಲೆ ಏರಿಕೆ ಗುರುವಾರವೂ ಬಿಡುವಿಲ್ಲದೆ ಮುಂದುವರೆದಿದ್ದು, ಗ್ರಾಹಕರಿಗೆ ಬರೆ ಹಾಕುತ್ತಿವೆ.ಪ್ರತಿ ಲೀಟರ್ ಗೆ ತಲಾ 60 ಪೈಸೆ ಹೆಚ್ಚಳ ಮಾಡಲಾಗಿದೆ. ಪರಿಷ್ಕರಣೆಯಲ್ಲಿ 82 ದಿನಗಳ ವಿರಾಮ ಕೊನೆಯಾದ ನಂತರ ಸತತ ಐದನೇ ದಿನ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ಏರಿಕೆ ಕಂಡಿದೆ. ದಿಲ್ಲಿಯಲ್ಲಿ ಪೆಟ್ರೋಲ್ ಬೆಲೆ ಪ್ರತಿ ಲೀಟರ್ ಗೆ 73.40ರೂ.ನಿಂದ 74ರೂ.ಗೆ ಹಾಗೂ ಡೀಸೆಲ್ ದರ ಲೀಟರ್ ಗೆ 71.62 ರಿಂದ 72.22 ರೂಪಾಯಿಗೆ ಹೆಚ್ಚಿಸಲಾಗಿದೆ ಎಂದು ಸರಕಾರಿ ತೈಲ ಕಂಪೆನಿಗಳು ಹೇಳಿವೆ. ದೇಶಾದ್ಯಂತ ದರ ಹೆಚ್ಚಿಸಲಾಗಿದ್ದು, ಸ್ಥಳೀಯ ಮಾರಾಟ ತೆರಿಗೆ ಅಥವಾ ವ್ಯಾಟ್ ಪ್ರಮಾಣವನ್ನು ಆಧರಿಸಿ ರಾಜ್ಯದಿಂದ ರಾಜ್ಯಕ್ಕೆ ಪೆಟ್ರೋಲ್-ಡೀಸೆಲ್ ದರಗಳು ಹೆಚ್ಚಾಗಲಿವೆ ಸತತ ದರ ಏರಿಕೆಯಿಂದಾಗಿ ಕಳದೆ 5 ದಿನಗಳಲ್ಲಿ ಪೆಟ್ರೋಲ್ ಗೆ ಲೀಟರ್ ಗೆ 2.74 ರೂ. ಹಾಗೂ ಡೀಸೆಲ್ ಗೆ 2.83 ರೂಪಾಯಿ ಹೆಚ್ಚಳವಾಗಿದೆ.