ಹಾವೇರಿ18:ವಿಕಲಚೇತನರಿಗೆ ಹಾಗೂ ಅವರ ಕುಂಬಗಳಿಗೆ ಎಲ್ಲ ಯೋಜನೆಗಳಲ್ಲಿ ಪ್ರಥಮ ಆದ್ಯತೆ ನೀಡುವ ಮೂಲಕ ಅವರನ್ನು ಆರ್ಥಿಕವಾಗಿ ಸದೃಢರನ್ನಾಗಿ ಮಾಡಬೇಕು ಎಂದು ಅಂಗವಿಕಲ ವ್ಯಕ್ತಿಗಳ ಅಧಿನಿಯಮದ ರಾಜ್ಯ ಆಯುಕ್ತರಾದ ವಿ.ಎಸ್.ಬಸವರಾಜು ಅವರು ತಿಳಿಸಿದರು.
ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ವಿವಿಧ ಇಲಾಖೆಗಳ ಅಧಿಕಾರಿಗಳೊಂದಿಗೆ ಪ್ರಗತಿ ಪರಿಶೀಲನಾ ಸಭೆ ನಡೆಸಿ ಮಾತನಾಡಿದರು.
ವಿಕಲಚೇತನರ ಅಭಿವೃದ್ಧಿಗೆ ಎಲ್ಲರೂ ಜವಾಬ್ದಾರಿಯಿಂದ ಕೆಲಸನಿರ್ವಹಿಸಬೇಕು. 21 ಬಗೆಯ ವಿಕಲತೆಗಳಿವೆ, ಅವುಗಳನ್ನು ಗುರುತಿಸಬೇಕು. ಮೊದಲ ಹಂತದಲ್ಲಿ ವಿಕಲಚೇತನ ಮಕ್ಕಳನ್ನು ಸೊನ್ನೆಯಿಂದ 5 ವರ್ಷದೊಳಗೆ ಗುರುತಿಸಿ ಅವರಿಗೆ ಅಗತ್ಯ ವೈದ್ಯಕೀಯ ಚಿಕಿತ್ಸೆ ನೀಡುವ ಕೆಲಸವಾಗಬೇಕು. ಶಿಕ್ಷಣ ಇಲಾಖೆ, ಆರೋಗ್ಯ ಇಲಾಖೆ ಹಾಗೂ ಮಹಿಳಾ ಮತ್ತು ಮಕ್ಕಳ ಇಲಾಖೆಗಳು ಸಮನ್ವಯದಿಂದ ಕಾರ್ಯನಿರ್ವಹಿಸಬೇಕು ಹಾಗೂ ಈ ಇಲಾಖೆಗಳ ಗುರುತರ ಜವಾಬ್ದಾರಿಯಾಗಿದೆ ಎಂದು ಹೇಳಿದರು.
ಶಾಲೆಯಿಂದ ಹೊರಗುಳಿದ ವಿಕಲಚೇತನ ಮಕ್ಕಳನ್ನು ಗುರುತಿಸಿ ಅವರನ್ನು ಮರಳಿ ಶಾಲೆಗೆ ಕರೆತರಬೇಕು. ವಿಕಲಚೇತನರಿಗೆ ವಾಹನ ವಿತರಣೆ, ಚೇರ್ ವಿತರಣೆ, ಮಾಡಿದರೆ ಸಾಲದು. ಅವರಿಗೆ ಬದುಕು ಕಟ್ಟಿಕೊಡುವ ಕೆಲಸವಾಗಬೇಕು. ಮನೆ ಹಂಚಿಕೆಯಲ್ಲಿ ವಿಕಲಚೇತನ ವ್ಯಕ್ತಿಯೊಂದಿಗೆ ಅವರ ಕುಟುಂಬದ ಸದಸ್ಯರನ್ನು ಜಂಟಿಯಾಗಿ ನೊಂದಣಿ ಮಾಡಬೇಕು ಎಂದು ಸಂಬಂಧಪಟ್ಟ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.
ಮೂಲಭೂತ ಸೌಲಭ್ಯಗಳಾದ ಶಿಕ್ಷಣ, ಆರೋಗ್ಯ ಸೇವೆ, ಮನೆ, ಶೌಚಾಲಯ ಸೌಲಭ್ಯ ಒದಗಿಸಬೇಕು. ವಿಕಲಚೇತರ ಕುಟುಂಬಗಳ ಸಮಸ್ಯೆಗಳನ್ನು ಅರ್ಥಮಾಡಿಕೊಂಡು ಅವರ ಜಾಗದಲ್ಲಿ ನಮ್ಮನ್ನು ಕಲ್ಪಿಸಿಕೊಂಡು ಅವರ ನೋವಿಗೆ ಸ್ಪಂದಿಸುವ ಕೆಲಸವಾಗಬೇಕು. ವ್ಯವಸ್ಥೆ ಬದಲಾಗಬೇಕಾಗಿದೆ, ಕೆಲವು ಯೋಜನೆಗಳಲ್ಲಿ ವಿಕಲಚೇತನರು ಅಶಕ್ತರಾಗಿದ್ದರೆ ಅವರ ಕುಟುಂಬಗಳನ್ನು ಪರಿಗಣಿಸಿ ಎಂದು ಸೂಚನೆ ನೀಡಿದರು.
ಮಾನಸಿಕ ಅಸ್ವಸ್ಥ ಮಹಿಳೆಯರ ಮೇಲೆ ಅತ್ಯಾಚಾರ ಹೆಚ್ಚಾಗಿ ನಡೆಯುತ್ತಿದ್ದು, ಈ ಕುರಿತು ಪೊಲೀಸ್ ಇಲಾಖೆ ಹೆಚ್ಚಿನ ಗಮನ ಹರಿಸಬೇಕು ಹಾಗೂ ತಪ್ಪಿಸ್ಥರ ವಿರುದ್ಧ ಕ್ರಮಕೈಗೊಳ್ಳಬೇಕು. ವಿಕಲಚೇತನರಿಂದ ಪೊಲೀಸ್ ಠಾಣೆಗೆ ಬರುವ ದೂರುಗಳಿಗೆ ತ್ವರಿತವಾಗಿ ಸ್ಪಂದಿಸಬೇಕು ಹಾಗೂ ನ್ಯಾಯ ಕೊಡಿಸಲು ಪೊಲೀಸ್ ಇಲಾಖೆ ಮುಂದಾಗಬೇಕು ಎಂದು ಪೊಲೀಸ್ ಅಧಿಕಾರಿಗಳಿಗೆ ತಿಳಿಸಿದರು.
ಬುದ್ಧಿಮಾಂಧ್ಯರು ಹಾಗೂ ಹಿರಿಯ ನಾಗರಿಕರನ್ನು ದೇವಸ್ಥಾನಗಳಲ್ಲಿ, ಇತರೆ ಕಡೆಗಳಲ್ಲಿ ಬಿಟ್ಟು ಹೋಗುತ್ತಾರೆ. ಅಂತಹವರ ವ್ಯವಸ್ಥೆ ಸೂಕ್ತ ವ್ಯವಸ್ಥೆ ಕೈಗೊಳ್ಳುವ ನಿಟ್ಟಿಯಲ್ಲಿ ಎಲ್ಲ ಇಲಾಖೆಗಳು ಸಮನ್ವಯತೆಯಿಂದ ಕಾರ್ಯನಿರ್ವಹಿಸಬೇಕು. ವಿಕಲಚೇತನರಿಂದ ಸಮಸ್ಯೆಗಳ ದೂರುಗಳು ನಿರ್ವಹಣೆಗೆ ಜೆಎಂಎಫ್ಸಿ. ನ್ಯಾಯಾಲಯದಲ್ಲಿ ವಿಶೇಷ ವಕೀಲರನ್ನು ನೇಮಕ ಮಾಡಲಾಗಿದೆ. 2016ರ ಕಾನೂನಿನ ಬಗ್ಗೆ ಎಲ್ಲರೂ ತಿಳಿದುಕೊಳ್ಳಿ, ನಿಮ್ಮ ಸಿಬ್ಬಂದಿಗಳಿಗೆ ತರಬೇತಿ ನೀಡಿ. ಹಣ ಹಾಗೂ ವಸ್ತುಗಳನ್ನು ವಿತರಣೆಮಾಡಿದರೆ ಸಾಲದು, ಅವರಿಗೆ ಬದುಕಟ್ಟಿಕೊಡುವ ಕೆಲಸಮಾಡಬೇಕು. ಕರ್ತವ್ಯಕ್ಕಿಂತ ಮಾನವೀಯತೆ ದೊಡ್ಡದು. ವಿಕಲಚೇತನರ ಬದುಕಿನಲ್ಲಿ ಬದಲಾವಣೆ ತರುವ ನಿಟ್ಟಿನಲ್ಲಿ ಎಲ್ಲರೂ ಕಾಳಜಿಯಿಂದ, ಬದ್ಧತೆಯಿಂದ ಕೆಲಸ ನಿರ್ವಸಬೇಕು ಎಂದು ಸಲಹೆ ನೀಡಿದರು.
ಕೃಷಿ, ತೋಟಗಾರಿಕೆ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಪುರಸಭೆ ಹಾಗೂ ನಗರಸಭೆಗಳು, ಇತರೆ ಇಲಾಖೆಗಳು, ವಿವಿಧ ನಿಗಮಗಳಲ್ಲಿ ಶೇ.5ರ ಅನುದಾನದಲ್ಲಿ ವಿಕಲಚೇತನರಿಗೆ ಆದ್ಯತೆ ನೀಡುವಂತೆ ಸೂಚನೆ ನೀಡಿದರು.
ಸಭೆಯಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿವರ್ಾಹಕ ಅಧಿಕಾರಿ ರಮೇಶ ದೇಸಾಯಿ, ಅಪರ ಜಿಲ್ಲಾಧಿಕಾರಿ ಯೋಗೇಶ್ವರ, ಎ.ಪಿ.ಡಿ.ನಿರ್ದೇಶಕ ಶಿವು ಹಿರೇಮಠ, ಸಹಾಯಕ ಆಯುಕ್ತರಾದ ಪದ್ಮನಾಭ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಪಿ.ವೈ.ಶೆಟ್ಟೆಪ್ಪನವರ, ಜಿಲ್ಲಾ ವಿಕಲಚೇತನರ ಕಲ್ಯಾಣಾಧಿಕಾರಿ ಮಲ್ಲಿಕಾರ್ಜುನ ಮಠದ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಜಮಖಾನೆ, ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ ಡಾ.ರಾಜು ಕೂಲೇರ, ಜಿಲ್ಲೆಯ ಎಲ್ಲ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು, ತಹಶೀಲ್ದಾರರು, ನಗರಸಭೆ, ಪುರಸಭೆಗಳ ಮುಖ್ಯಾಧಿಕಾರಿಗಳು, ಜಿಲ್ಲಾ ಮಟ್ಟದ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.