ವೈಯಕ್ತಿಕ ವೈಷಮ್ಯ: 2 ಎಕರೆ ಗೋವಿನಜೋಳ ಬೆಳೆ ನಾಶ


ಲೋಕದರ್ಶನ ವರದಿ

ಬ್ಯಾಡಗಿ06: ವೈಯಕ್ತಿಕ ವೈಷಮ್ಯದ ಹಿನ್ನಲೆಯಲ್ಲಿ ಸುಮಾರು 2 ಎಕರೆ ಹೊಲದಲ್ಲಿ ಬೆಳೆದಿದ್ದ ಗೋವಿನಜೋಳದ ಬೆಳೆಯನ್ನು ಕತ್ತರಿಸಿ ಹಾಕಿ ನಾಶಪಡಿಸಿದ ಘಟನೆ ತಾಲೂಕಿನ ಕಲ್ಲೇದೇವರ ಸೇವಾ ನಗರ ತಾಂಡಾದಲ್ಲಿ ಶನಿವಾರ ತಡರಾತ್ರಿ ನಡೆದಿದೆ.

  ಕಲ್ಲಪ್ಪ ಸೋಮಲಪ್ಪ ಲಮಾಣಿ ಎಂಬುವವರ ಹೊಲದಲ್ಲಿ ಒಟ್ಟು ಐದು ಜನರಿದ್ದ ತಂಡವು ಈ ಕೃತ್ಯ ನಡೆಸಿದ್ದು ಬೆಳೆದು ನಿಂತಿದ್ದ ಗೋವಿನಜೋಳ ಬೆಳೆಯನ್ನು ರಾತ್ರಿ ವೇಳೆ ಕತ್ತರಿಸಿ ಹಾಕಿದ್ದಾರೆ.   ಪಕ್ಕದ ಹೊಲದಲ್ಲಿದ್ದ ವ್ಯಕ್ತಿಯೊಬ್ಬ ಇದನ್ನು ನೋಡಿ ಜೋರಾಗಿ ಕೂಗಿಕೊಂಡು ಜನರನ್ನು ಸೇರಿಸುವಷ್ಟರಲ್ಲಿ ದುಷ್ಕಮರ್ಿಗಳು ಅಲ್ಲಿಂದ ಪರಾರಿಯಾಗಿದ್ದಾರೆ.

ಮಹಿಳೆಯೊಬ್ಬಳ ವಿಚಾರಣೆ: ಘಟನೆಗೆ ಸಂಬಂಧಿಸಿದಂತೆ ಕೃತ್ಯಕ್ಕೆ ಹಳೆ ವೈಷಮ್ಯ ಕಾರಣವಾಗಿದ್ದು ಕೆಂಗೊಂಡ ಗ್ರಾಮದ ನಿವಾಸಿ ಅಕ್ಕಮ್ಮ ರುದ್ರಗೌಡ್ರ ಚಿಕ್ಕನಗೌಡ್ರ ಎಂಬಾಕೆಯ ಮೇಲೆ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು ಸ್ಥಳ ಪರಿಶೀಲನೆ ನಡೆಸಿದ ಪೊಲೀಸರು ಆರೋಪಿ ಅಕ್ಕಮ್ಮಳನ್ನು ಠಾಣೆಗೆ ಕರೆಸಿ ವಿಚಾರಣೆ ನಡೆಸಿದ್ದಾಗಿ ತಿಳಿದು ಬಂದಿದೆ.

ನನ್ನ ಮೇಲೆ ವೃಥಾ ಆರೋಪ: ವಿಚಾರಣೆ ವೇಳೆ ಅಕ್ಕಮ್ಮ ನನ್ನದೇನೂ ತಪ್ಪಿಲ್ಲ ಕಲ್ಲಪ್ಪನೇ ತನ್ನ ಹೊಲದ ಬೆಳೆ ನಾಶಪಡಿಸಿ ಇದೀಗ ನನ್ನ ಮೇಲೆ ವೃಥಾ ಆರೋಪ ಮಾಡುತ್ತಿದ್ದಾರೆ, ಉದ್ದೇಶಪೂರ್ವಕವಾಗಿ ಘಟನೆಯನ್ನು ಠಾಣೆಯವರೆಗೂ ಎಳೆದು ತಂದಿದ್ದು, ಅಷ್ಟಕ್ಕೂ ನಾಶಪಡಿಸಿದ ಹೊಲ ನನಗೆ ಸೇರಿದ್ದು ಎಂದು ತನ್ನ ವಾದವನ್ನು ಮಂಡಿಸಿದ್ದಾಳೆ.

ಪೊಲೀಸರಿಗೆ ಚಳ್ಳೆ ಹಣ್ಣು ತಿನ್ನಿಸಿದ ಮಹಿಳೆ: ಬೆಳೆ ನಾಶಪಡಿಸಿದ ಹೊಲ ನಿಮ್ಮದೇ ಎಂಬುದಕ್ಕೆ ತಮ್ಮಲ್ಲಿರುವ ದಾಖಲೆಗಳನ್ನು ಠಾಣೆಗೆ ತಂದೊದಗಿಸುವಂತೆ ಪೊಲೀಸರು ತಿಳಿಸಿದಾಗ, ದಾಖಲೆಗಳನ್ನು ತರುವುದಾಗಿ ತೆರಳಿದ ಅಕ್ಕಮ್ಮ ಇದೀಗ ನಾಪತ್ತೆಯಾಗಿದ್ದು ಆಕೆಗಾಗಿ ಪೊಲೀಸರು ವ್ಯಾಪಕ ಹುಡುಕಾಟ ನಡೆಸುತ್ತಿದ್ದಾರೆ.ಈ ಕುರಿತಂತೆ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ಮುಂದುವರೆದಿದೆ.