ಕೊರೊನಾ ಲೆಕ್ಕಿಸದೇ ಹೂವು ಖರೀದಿಗೆ ಮುಗಿಬಿದ್ದ ಜನತೆ

Flower

ಸದಾನಂದ ಮಜತಿ

ಬೆಳಗಾವಿ: ಜನವೋ ಜನ, ಯಾರ ಮುಖದ ಮೇಲೂ ಮಾಸ್ಕ್ ಇಲ್ಲ., ಸಾಮಾಜಿಕ ಅಂತರವಂತೂ ದೂರವೇ ಉಳಿಯಿತು. ಕೊರೊನಾ ಇರುವುದನ್ನೇ ಮರೆತು ಬೆಳಗಾವಿಯ ಪುಷ್ಪ ಮಾರುಕಟ್ಟೆಗೆ ಬೆೆಳ್ಳಂಬೆಳಿಗ್ಗೆ ಜನರು ಲಗ್ಗೆ ಇಟ್ಟಿದ್ದರು.

ದೀಪಾವಳಿ ನಿಮಿತ್ತ ನಗರದ ಪುಷ್ಪ ಮಾರುಕಟ್ಟೆಯಲ್ಲಿ ಹೂವುಗಳನ್ನು ಕೊಳ್ಳಲು ಜನಸಾಗರವೇ ಸೇರಿತ್ತು.

ಇಂದು ನರಕಚತುರ್ದಶಿ, ನಾಳೆ ಅಮಾವಾಸ್ಯೆ ಇರುವುದರಿಂದ  ನೂರಾರು ರೈತರು ತಹರೇವಾರಿ ಪುಷ್ಪಗಳನ್ನು ಮಾರುಕಟ್ಟೆಗೆ ತಂದಿದ್ದರು. ಹೂವು ಮಾರಾಟಗಾರರು, ಪೂಜೆ ಮಾಡುವ ವ್ಯಾಪಾರಸ್ಥರು, ಮನೆಯಲ್ಲಿ ಲಕ್ಷ್ಮೀ ಪೂಜೆ ಮಾಡುವ ಜನರು ಹೀಗೆ ಸಾವಿರಾರು ಜನ ಸೇರಿದ್ದರು.

ಚೆಂಡು ಹೂವಿಗೆ ಫುಲ್ ಡಿಮಾಂಡ್ : ಮಾರುಕಟ್ಟೆಯಲ್ಲಿ ತಹರೇವಾರಿ ಪುಷ್ಪಗಳಿದ್ದರೂ ಚಂಡು ಹೂವಿಗೆ ವಿಶೇಷ ಬೇಡಿಕೆ ಇತ್ತು. ಸೇವಂತಿಗೆ ಹೂವು ಖರೀದಿಯೂ ಜೋರಾಗಿತ್ತು. ಚೆಂಡು ಹೂವು ಕೆಜಿಗೆ 80ರೂ. ನಿಂದ 200 ರೂವರೆಗೆ ಮಾರಾಟವಾದರೆ, ಸೇವಂತಿಗೆ ಹೂವಿಗೆ 100 ರಿಂದ 200ರವರೆಗೆ ದರಕ್ಕೆ ಮಾರಾಟವಾಯಿತು.

ರೈತರಿಗೆ ಖುಷಿ: ಗಾಂಧಿನಗರದಿಂದ ಅಶೋಕನಗರಕ್ಕೆ ಪುಷ್ಪ ಮಾರುಕಟ್ಟೆ ಸ್ಥಳಾಂತರಗೊಂಡು ನಾಲ್ಕು ದಿನವಾಯಿತು. ರೈತರು ಫುಲ್ ಖುಷಿಯಾಗಿದ್ದಾರೆ. ಹಳೆ ಮಾರುಕಟ್ಟೆಯಲ್ಲಿ ಜಾಗದ ಅಭಾವದಿಂದ ರೈತರು ನೇರ ಮಾರಾಟ ಸಾಧ್ಯವಾಗಿರಲಿಲ್ಲ. ಆದರೆ ನೂತನ ಮಾರುಕಟ್ಟೆಯಲ್ಲಿ ಸಾಕಷ್ಟು ಸ್ಥಳ ಇರುವುದರಿಂದ ರೈತರು ದಲ್ಲಾಳಿ ಅಂಗಡಿವರ ಮೊರೆ ಹೋಗುವ ಬದಲಾಗಿ ತಾವೇ ಮಾರಾಟಕ್ಕೆ ಮುಂದಾಗಿದ್ದು ಕಂಡುಬಂತು. ರಸ್ತೆಯ ಇಕ್ಕೆಲಗಳಲ್ಲಿ ವಾಹನ ನಿಲ್ಲಿಸಿದ್ದರಿಂದ ವಾಹನ ಸಂಚಾರ ದಟ್ಟಣೆ ಉಂಟಾಗಿತ್ತು. ಜಿಲ್ಲೆಯ ವಿವಿಧ ಭಾಗಗಳಿಂದ ನೆರೆಯ ಜಿಲ್ಲೆಗಳಾದ ಧಾರವಾಡ, ಬಾಗಲಕೋಟೆಗಳಿಂದಲೂ ರೈತರು ಪುಷ್ಪಗಳನ್ನು ಮಾರಾಟಕ್ಕೆ ಇಟ್ಟಿದ್ದರು.