ಕೋಲ್ಕತಾ, ಆ 18 ದೇಶದ ಮಣ್ಣಿನ ಮಗ ನೇತಾಜಿ ಸುಭಾಷ್ ಚಂದ್ರ ಬೋಸ್ ಪ್ರಯಾಣಿಸುತ್ತಿದ್ದ ವಿಮಾನ ಪತನಗೊಂಡ ನಂತರ ಅವರ ಪರಿಸ್ಥಿತಿ ಏನಾಯಿತು ಎಂಬುದನ್ನು ಅರಿಯಲು ಪ್ರತಿಯೊಬ್ಬ ನಾಗರಿಕನಿಗೂ ಹಕ್ಕಿದೆ ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹೇಳಿದ್ದಾರೆ. ಈ ಕುರಿತು ಭಾನುವಾರ ಟ್ವೀಟ್ ಮಾಡಿರುವ ಅವರು, 1945ರಲ್ಲಿ ಇದೇ ದಿನ, ತೈವಾನ್ ನ ತೈಹೋಕು ವಿಮಾನ ನಿಲ್ದಾಣದಿಂದ ಪ್ರಯಾಣ ಆರಂಭಿಸಿದ್ದ ನೇತಾಜಿ ನಾಪತ್ತೆಯಾದರು. ಅದರ ನಂತರ ಅವರಿಗೆ ಏನಾಯಿತು ಎಂಬುದರ ಕುರಿತು ಇನ್ನೂ ಮಾಹಿತಿ ಲಭ್ಯವಾಗಿಲ್ಲ ಎಂದಿದ್ದಾರೆ. ಜನರಿಗೆ ದೇಶದ ಮಣ್ಣಿನ ಮಗನ ಪರಿಸ್ಥಿತಿಯ ಕುರಿತು ಅರಿಯುವ ಸಂಪೂರ್ಣ ಹಕ್ಕಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ. ಅಧಿಕೃತ ಮಾಹಿತಿ ಪ್ರಕಾರ, 1945ರ ಆ. 18ರಂದು ಮಿತ್ ಸುಬಿಷಿ ಕೆ ಐ-21 ಹೆವಿ ಬಾಂಬರ್ ವಿಮಾನದಲ್ಲಿ ಅವರು ಪ್ರಯಾಣಿಸುತ್ತಿದ್ದಾಗ ಅದು ಪತನಗೊಂಡಿತ್ತು. ಆದರೆ, 2005ರಲ್ಲಿ ಮುಖರ್ಜಿ ಆಯೋಗದ ವರದಿಯಲ್ಲಿ, ಬೋಸ್ ಅವರು ಸೋವಿಯತ್ ರಷ್ಯಾದಿಂದ ಪರಾರಿಯಾಗಲು ವಿಮಾನ ಪತನದ ಕಥೆ ಕಟ್ಟಲಾಗಿತ್ತು ಎಂದು ಉಲ್ಲೇಖಿಸಿತ್ತು. ಆದರೆ, ಅಂದಿನ ಕಾಂಗ್ರೆಸ್ ಸರ್ಕಾರ ವರದಿಯನ್ನು ತಿರಸ್ಕರಿಸಿತು. ಅನೇಕರು, 1985ರವರೆಗೆ ಉತ್ತರಪ್ರದೇಶದ ಫೈಜಾಬಾದ್ ನಲ್ಲಿ ನೆಲೆಸಿದ್ದ ಗುಮ್ನಾಬಿ ಬಾಬ ಅವರೇ ಸುಭಾಷ್ ಚಂದ್ರ ಬೋಸ್ ಎಂದು ನಂಬುತ್ತಾರೆ. ಇದರಿಂದ ಅವರ ಸಾವಿನ ಕುರಿತು ಹಲವಾರು ಅನುಮಾನಗಳು ಎದುರಾಗಿವೆ. 2016ರ ಸೆ. 1ರಂದು ಪ್ರಧಾನಿ ಮೋದಿ ಸರ್ಕಾರ, ಬೋಸ್ ಸಾವಿಗೆ ಸಂಬಂಧಿಸಿದಂತೆ ಜಪಾನ್ ಸರ್ಕಾರದ ತನಿಖಾ ವರದಿಯನ್ನು ಮರುಪರಿಶೀಲಿಸಿ, ಅವರು ತೈವಾನ್ ವಿಮಾನ ಪತನದಲ್ಲೇ ಮೃತಪಟ್ಟಿದ್ದರು ಎಂಬ ಅಂತಿಮ ತೀರ್ಮಾನಕ್ಕೆ ಬಂದಿತ್ತು. ಆದರೆ, ಇಂದಿಗೂ ಹಲವರು ನೇತಾಜಿ ಅವರು ವಿಮಾನ ಪತನದಲ್ಲಿ ಬಚಾವಾಗಿದ್ದರು ಹಾಗೂ ಗೌಪ್ಯವಾಗಿ ಜೀವಿಸುತ್ತಿದ್ದರು ಎಂದು ನಂಬುತ್ತಾರೆ.