ನವದೆಹಲಿ 24: ಬೆಲೆ ಏರಿಕೆಯಿಂದ ದಿನನಿತ್ಯದ ಅಗತ್ಯ ವಸ್ತುಗಳ ವಿಷಯದಲ್ಲಿ ರಾಜಿ ಮಾಡಿಕೊಳ್ಳುವ ಅನಿರ್ವಾಯತೆ ದೇಶದ ಜನತೆಗೆ ಎದುರಾಗಿದ್ದು, ಸರ್ಕಾರ ಮಾತ್ರ ಕುಂಭಕರ್ಣನಂತೆ ನಿದ್ದೆ ಮಾಡುತ್ತಿದೆ ಎಂದು ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಹೇಳಿದ್ದಾರೆ.
ಇಲ್ಲಿನ ಗಿರಿನಗರದ ತರಕಾರಿ ಮಾರುಕಟ್ಟೆಗೆ ಇತ್ತೀಚಿಗೆ ಭೇಟಿ ನೀಡಿ, ಗೃಹಿಣಿಯೊಂದಿಗೆ ಸಂವಾದ ನಡೆಸಿದ್ದನ್ನು ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಹಂಚಿಕೊಂಡಿರುವ ರಾಹುಲ್ ಗಾಂಧಿ, ಸಾಮಾನ್ಯ ಜನರ ಬಜೆಟ್ ಹೇಗೆ ಕ್ಷೀಣಿಸುತ್ತಿದೆ ಮತ್ತು ಹಣದುಬ್ಬರ ಪ್ರತಿಯೊಬ್ಬರಿಗೂ ಸಮಸ್ಯೆಯಾಗಿದೆ ಎಂಬುದನ್ನು ತಿಳಿಯಲು ಮಾರಾಟಗಾರರೊಂದಿಗೆ ಮಾತನಾಡಿದ್ದಾಗಿ ಹೇಳಿದ್ದಾರೆ.
ಬೆಲೆ ಏರಿಕೆಯಿಂದ ಜನರು ತತ್ತರಿಸಿದ್ದು, ದೈನಂದಿನ ಅಗತ್ಯಗಳ ಖರೀದಿಯಲ್ಲಿ ರಾಜಿ ಮಾಡಿಕೊಳ್ಳಬೇಕಾದ ಸಂದರ್ಭವಿದೆ ಎಂದು ಅವರು ಫೋಸ್ಟ್ ಮಾಡಿದ್ದಾರೆ.
‘ಬೆಳ್ಳುಳ್ಳಿ, ಅವರೆಕಾಳು, ಅಣಬೆ ಮತ್ತಿತರ ತರಕಾರಿಗಳ ಬೆಲೆಯನ್ನು ಚರ್ಚಿಸಿ ಜನರ ನೈಜ ಅನುಭವಗಳನ್ನು ಕೇಳಿ ತಿಳಿದುಕೊಂಡೆ. ಬೆಳ್ಳುಳ್ಳಿ ಕೆ.ಜಿಗೆ 400, ಅವರೆಕಾಳು ಕೆ.ಜಿಗೆ 120... ಹೀಗಾದರೆ ಜನ ತಿನ್ನುವುದೇನು? ಉಳಿಸುವುದೇನು?’ ಎಂದು ಕೇಳಿದ್ದಾರೆ.
‘ಒಂದು ಕಾಲದಲ್ಲಿ ಕೆ.ಜಿಗೆ ₹40 ಇದ್ದ ಬೆಳ್ಳುಳ್ಳಿ ಬೆಲೆ ಇಂದು ₹400 ಆಗಿದೆ... ಬೆಲೆ ಏರಿಕೆಯಿಂದ ಜನರು ಹೈರಾಣಾಗಿದ್ದು, ದಿನನಿತ್ಯದ ಅಗತ್ಯಗಳನ್ನು ಪೂರೈಸುವುದರಲ್ಲಿಯೂ ರಾಜಿ ಮಾಡಿಕೊಳ್ಳುವ ಪರಿಸ್ಥಿತಿ ಬಂದಿದೆ’ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.