ಕಾನೂನು ಶಿಕ್ಷಣದಿಂದ ಆತ್ಮವಿಶ್ವಾಸ ಗಳಿಸಿ ಜನಸ್ಪಂದನೆಯ ನೆಚ್ಚಿನ ರಾಜಕೀಯ ನಾಯಕ : ಎಚ್ ಕೆ ಪಾಟೀಲ್

(ಇದೇ ದಿನಾಂಕ ಆಗಸ್ಟ್‌ 15 ರಂದು ಗದಗ ಜಿಲ್ಲೆಯ ಸಮಸ್ತ ನಾಗರಿಕರ ನೆಚ್ಚಿನ ಧೀಮಂತ ನಾಯಕ, ಎಚ್ ಕೆ ಪಾಟೀಲ್ ರ 71ನೇ ಜನ್ಮ ದಿನಾಚರಣೆಯ ಪ್ರಯುಕ್ತ: ರಾಘವೇಂದ್ರ ಪಾಲನಕರ ರವರ ವಿಶೇಷ ಲೇಖನ ) 

ಗದಗ 14 : ಮೂರೂವರೆ ದಶಕಗಳಿಗೂ ಹೆಚ್ಚು ಕಾಲ ಸಕ್ರಿಯ ರಾಜಕಾರಣದಲ್ಲಿರುವ ಹನುಮಂತಗೌಡ ಕೃಷ್ಣೇಗೌಡ ಪಾಟೀಲರು ಧರ್ಮಸಿಂಗ್ ನೇತೃತ್ವದ ಸಮ್ಮಿಶ್ರ ಸರ್ಕಾರದಲ್ಲಿ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವರಾಗಿದ್ದಾಗ ಕೇವಲ 11 ತಿಂಗಳ ಅವಧಿಯಲ್ಲಿ ಹಲವು ಮಹತ್ತರ ನೀತಿ-ನಿರೂಪಣೆ, ಸುಧಾರಣಾ ಕ್ರಮಗಳನ್ನು ಇಲಾಖೆಯ ವ್ಯಾಪ್ತಿಯಲ್ಲಿ ಕೈಗೊಂಡರು ಎಂಬುದು ಸುಲಭಕ್ಕೆ ಗೋಚರಿಸುವಂಥದ್ದು. 

ದೇಶದಲ್ಲೇ ಪ್ರಥಮ ಬಾರಿಗೆ ಜಾರಿಗೆ ತಂದ ಉದ್ಯೋಗ, ಆಹಾರ ಭದ್ರತೆ ಮತ್ತು ಮಕ್ಕಳ ಹಕ್ಕುಗಳ ಕಾನೂನುಗಳು ರಾಷ್ಟ್ರೀಯ ನೀತಿಗಳಾಗಿವೆ. ಪಾಟೀಲರು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವರಾಗಿದ್ದಾಗ ಬೆಳಗಾವಿಯ ಸುವರ್ಣಸೌಧದಲ್ಲಿ ಪ್ರಥಮ ಬಾರಿಗೆ ಅಧಿವೇಶನ ನಡೆದಿದ್ದು, ಬಳಿಕ ಪ್ರತಿವರ್ಷ ಅಲ್ಲಿ ಅಧಿವೇಶನ ನಡೆಸುವುದು ನಿಯಮವಾಗಿ ಬದಲಾಗಿದೆ. 

ಕರ್ನಾಟಕ ಕಾನೂನು ಮತ್ತು ಸಂಸದೀಯ ಸುಧಾರಣಾ ಸಂಸ್ಥೆ (ಕಿಲ್ಪಾರ್), ವಕೀಲರ ಅಕಾಡೆಮಿ ಆರಂಭವಾಗಿದ್ದು, ಹುಬ್ಬಳ್ಳಿಯಲ್ಲಿ ರಾಜ್ಯ ಕಾನೂನು ವಿಶ್ವವಿದ್ಯಾಲಯ ತಲೆ ಎತ್ತಿದ್ದು ಹಾಗೂ ಧಾರವಾಡ ಮತ್ತು ಗುಲ್ಬರ್ಗಾದಲ್ಲಿ ಹೈಕೋರ್ಟ್‌ ಪೀಠ ಆರಂಭಿಸಲು ಶಿಲಾನ್ಯಾಸ ನಡೆದಿದ್ದು ಪಾಟೀಲರು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವರಾಗಿದ್ದಾಗ ಎಂಬುದು ಗಮನಾರ್ಹ. ಸಿದ್ದರಾಮಯ್ಯನವರ ಸರ್ಕಾರದಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವರಾಗಿಯೂ ಅವರು ಮಹತ್ವದ ಕೆಲಸಗಳನ್ನು ಮಾಡಿದ್ದಾರೆ.  

ತಂದೆ ಕೆ ಎಚ್ ಪಾಟೀಲರ ಆದರ್ಶವೇ ಕಾನೂನು ಅಧ್ಯಯನಕ್ಕೆ ನಾಂದಿ : ಕಾನೂನು ಓದುವುದರಿಂದ ಸಾರ್ವಜನಿಕ ಜೀವನದಲ್ಲಿ ಅನುಕೂಲವಾಗುತ್ತದೆ ಎನ್ನುವ ಅರಿವಿದ್ದರಿಂದ ಹುಬ್ಬಳ್ಳಿಯ ಜೆಎಸ್‌ಎಸ್ ಸಕ್ರಿ ಕಾನೂನು ಕಾಲೇಜಿನಲ್ಲಿ 1972-76ರಲ್ಲಿ ಎಲ್ ಎಲ್ ಬಿ ಪದವಿ ಪೂರೈಸಿದ ಎಚ್ ಕೆ ಪಾಟೀಲರು ತಂದೆ, ಮಾಜಿ ಸಚಿವ ಕೆ ಎಚ್ ಪಾಟೀಲ್ ಕಾನೂನು ಕಲಿತವರಲ್ಲ. ಆದರೆ, ಆ ಪರಿಣತಿಯನ್ನು ಗಳಿಸಿಕೊಂಡಿದ್ದರು. ವಕೀಲರುಗಳ ಅವರ ಜೊತೆ ತಂದೆಯವರು ಸಮಾಲೋಚನೆ ಮಾಡುತ್ತಿದ್ದರು. ಇದು ಅವರಿಗೆ ಆಶ್ಚರ್ಯ ಉಂಟು ಮಾಡುತ್ತಿತ್ತು. ವಕೀಲರಿಗಿಂತಲೂ ಹೆಚ್ಚಿನ ಕಾನೂನು ಜ್ಞಾನ ತಂದೆಯವರಿಗೆ ಇದೆ ಎಂಬ ಮಾತುಗಳು ಚರ್ಚೆಯ ಸಂದರ್ಭದಲ್ಲಿ ಬರುತ್ತಿದ್ದವು. ಇವೆಲ್ಲವೂ ಒಂದಲ್ಲಾ ಒಂದು ರೀತಿಯಲ್ಲಿ ಅವರ ಮೇಲೆ ಪ್ರಭಾವ ಬೀರಿದ್ದವು. 

ಸ್ನೇಹಿತರೆಲ್ಲರೂ ಸೇರಿ ಸಂವಿಧಾನ, ಅಂದಿನ ರಾಜಕೀಯ ಸನ್ನಿವೇಶ ಮತ್ತು ಜಾರಿಯಾಗುತ್ತಿದ್ದ ಕಾನೂನುಗಳ ಬಗ್ಗೆ ಚರ್ಚೆ, ವಾದ, ಸಂವಾದ ನಡೆಸುತ್ತಿದ್ದೆವು. ಅಂದಿನ ಕಾಲದಲ್ಲಿ ಭೂ ಸುಧಾರಣಾ ಕಾನೂನು ಜಾರಿಗೆ ಬಂದಿತ್ತು. ಅದರ ಬಗ್ಗೆ ಭಾರಿ ಚರ್ಚೆ ನಡೆಯುತ್ತಿತ್ತು. ಶಾಲಾ-ಕಾಲೇಜು ಶುಲ್ಕಗಳನ್ನು ಹೆಚ್ಚಿಸುವುದರಿಂದ ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಭಾರಿ ತೊಂದರೆಯಾಗುತ್ತಿತ್ತು. ಇದನ್ನು ಆಧರಿಸಿ  ದೊಡ್ಡ ಹೋರಾಟ ನಡೆಸಿದ್ದರು. ಅವರಿಗೆ ರಾಷ್ಟ್ರಮಟ್ಟದ ನಾಯಕರುಗಳಾದ ಚಂದ್ರಶೇಖರ್, ಕೃಷ್ಣಕಾಂತ್, ಮೋಹನ್ ಧಾರಿಯಾ ಅಂದಿನ ರಾಜಕೀಯ ಸನ್ನಿವೇಶದ ಬಗ್ಗೆ ತಿಳಿ ಹೇಳುತ್ತಿದ್ದರು. ಆ ವೇದಿಕೆಯಿಂದ ಬಂದ ನುಡಿ, ವಿಚಾರ, ಆಲೋಚನಾ ಪ್ರಕ್ರಿಯೆ ಅವರ ಮೇಲೆ ಸಾಕಷ್ಟು ಪರಿಣಾಮ ಬೀರಿತ್ತು. 

ವಕೀಲ ವೃತ್ತಿಯೊಂದಿಗೆ ಎಚ್ ಕೆ ಪಾಟೀಲರ ಪಯಣ : ಧಾರವಾಡದ ಸಿ ಬಿ ಪಾಟೀಲ್ ಮತ್ತು ಜಿ ಎಂ ಪಾಟೀಲರು ಹಿರಿಯ ವಕೀಲರು. ಅವರು ನಮಗೆ ವಕೀಲಿಕೆ ಮಾಡಿದ್ದರೆ ಆದರ್ಶವಾಗಿರುತ್ತಿದ್ದರು. ನಾನು ರೆಗ್ಯುಲರ್ ಪ್ರಾಕ್ಟೀಸ್ ಮಾಡಿದವನಲ್ಲ. ವಕೀಲರಾದ ಸಿ ಎಲ್ ಪಾಟೀಲ್ ನನ್ನ ಸ್ನೇಹಿತರೇ ಆಗಿದ್ದರು. ಬೇರೆಬೇರೆ ವಿಚಾರಕ್ಕೆ ಅವರ ಬಳಿ ಹೋಗುತ್ತಿದ್ದವು. ಅವರ ಚೇಂಬರ್‌ಗೆ ಹೋದರೂ ಅಲ್ಲಿಗೆ ಸೇರಿರಲಿಲ್ಲ. 

ಕೇವಲ ಎರಡು ಬಾರಿ ನ್ಯಾಯಾಲಯಕ್ಕೆ ತೆರಳಿದ್ದರು, ಒಮ್ಮೆ ಕಾರ್ಮಿಕ ಪ್ರಕರಣಕ್ಕಾಗಿ ಮತ್ತೊಮ್ಮೆ ಸಿವಿಲ್ ವಿಚಾರಕ್ಕಾಗಿ ನ್ಯಾಯಾಲಯದ ಮೆಟ್ಟಿಲೇರಿದ್ದರು. ಅದು ಬಿಟ್ಟು ಎಂದೂ ಅವರು ನ್ಯಾಯಾಲಯಕ್ಕೆ ಕಾಲಿಡಲಿಲ್ಲ. ಕಂಪೆನಿಯಿಂದ ಸಿಗಬೇಕಿದ್ದ ಪಿಎಫ್ ಮತ್ತು ಇಎಸ್‌ಐ ಸೌಲಭ್ಯ ದೊರೆತಿರಲಿಲ್ಲ ಎಂದು ಉದ್ಯೋಗಿಯೊಬ್ಬ ತನ್ನ ಕಂಪೆನಿಯ ವಿರುದ್ಧ ದಾವೆ ಹೂಡಿದ್ದ. ಆತನನ್ನು ಕೆಲಸದಿಂದ ತೆಗೆದು ಹಾಕಿದ್ದರು. ಆತನ ಪರವಾಗಿ ಎಚ್ ಕೆ ಪಿ ಯವರು ನ್ಯಾಯಾಲಯದಲ್ಲಿ ಒಮ್ಮೆ ವಾದಿಸಿದ್ದರು.  

ವಕೀಲಿಕೆಯಿಂದ ರಾಜಕಾರಣದೆಡೆಗೆ ಎಚ್ ಕೆ ಪಾಟೀಲರ ಪಯಣಕ್ಕೆ ರಾಷ್ಟ್ರಕಂಡ ಮೊದಲ ಮಹಿಳಾ ಪ್ರಧಾನಿ ಇಂದಿರಾಗಾಂಧಿ ಪ್ರೇರಣೆ : ರಾಜಕಾರಣದ ಮೇಲೆ  ಇದ್ದ ಆಸಕ್ತಿ, ಅವರ ತಂದೆಯವರ ರಾಜಕೀಯ ಹಿನ್ನೆಲೆ ಹಾಗೂ ಅಂದಿನ ರಾಜಕೀಯ ಸನ್ನಿವೇಶದ ಜೊತೆಗೆ ಗೆಳೆಯರೆಲ್ಲರೂ  ಸಕ್ರಿಯ ರಾಜಕಾರಣಕ್ಕೆ ಪ್ರವೇಶ ಮಾಡಬೇಕು ಎಂದು ಅಪೇಕ್ಷೆ ಪಟ್ಟಿದ್ದರಿಂದ 1984ರಲ್ಲಿ ಪದವೀಧರ ಕ್ಷೇತ್ರದ ಮೂಲಕ ವಿಧಾನ ಪರಿಷತ್ ಪ್ರವೇಶಿಸಿದರು.  ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರ ಕಾಲದಲ್ಲಿ ಕಾಂಗ್ರೆಸ್ ಇಬ್ಬಾಗವಾಗಿ ಶ್ರೀಮಂತರು ಒಂದು ಕಡೆ, ಸಮಾನತೆ ಬಯಸುವವರು ಮತ್ತೊಂದು ಕಡೆಯಾಗಿದ್ದರು. ಇವೆಲ್ಲವೂ ರಾಜಕೀಯ ಪ್ರವೇಶಕ್ಕೆ ಎಚ್ ಕೆ ಪಾಟೀಲರ ಮೇಲೆ ಪ್ರಭಾವ ಬೀರಿದ್ದವು. 

ಕಾನೂನು ಶಿಕ್ಷಣ ನಮ್ಮಲ್ಲಿ ಆತ್ಮ ವಿಶ್ವಾಸ ಮೂಡಿಸುತ್ತದೆ. ಕಾನೂನು ರೂಪಿಸಲು, ಅದನ್ನು ಅರ್ಥ ಮಾಡಿಕೊಳ್ಳಲು ಕಾನೂನು ಸಹಾಯ ಮಾಡುತ್ತದೆ. ದೇಶದಲ್ಲಿ ಮೊದಲ ಬಾರಿಗೆ  ಉದ್ಯೋಗ ಭದ್ರತೆ ಮಸೂದೆ 2005 ಸಿದ್ಧಪಡಿಸಲಾಯಿತು. ಆನಂತರ ಇದು ರಾಷ್ಟ್ರೀಯ ನೀತಿಯಾಯಿತು. ಕರ್ನಾಟಕದ ಗ್ರಾಮೀಣ ಭಾಗದಲ್ಲಿರುವ ಕುಟುಂಬದ ಒಬ್ಬರಿಗೆ ಉದ್ಯೋಗ ಭದ್ರತೆ ನೀಡುವುದು ಮಸೂದೆಯ ಉದ್ದೇಶವಾಗಿತ್ತು. ಕರ್ನಾಟಕ ಕಡ್ಡಾಯ ಪ್ರಾಥಮಿಕ ಶಿಕ್ಷಣ ಮಸೂದೆ 2005 ಅನ್ನು ಸಿದ್ಧಪಡಿಸಲಾಯಿತು. ಇದೂ ಆನಂತರ ರಾಷ್ಟ್ರೀಯ ನೀತಿಯಾಯಿತು. 

ಕರ್ನಾಟಕ ಆಹಾರ ಭದ್ರತೆ ಸುಗ್ರೀವಾಜ್ಞೆ 2005 ಹೊರಡಿಸಲಾಯಿತು. ಬಡವರಿಗೆ ಆಹಾರ ಭದ್ರತೆ ಕಲ್ಪಿಸುವುದು ಸುಗ್ರೀವಾಜ್ಞೆಯ ಉದ್ದೇಶವಾಗಿತ್ತು. ದೇಶದಲ್ಲಿ ಮೊದಲ ಬಾರಿಗೆ ಇಂಥ ಕಾನೂನನ್ನು ಸುಗ್ರೀವಾಜ್ಞೆಯ ಮೂಲಕ ಜಾರಿಗೊಳಿಸಲಾಯಿತು.  2008ರಲ್ಲಿ ಇದನ್ನು ರಾಷ್ಟ್ರೀಯ ನೀತಿಯನ್ನಾಗಿ ಮನಮೋಹನ್ ಸಿಂಗ್ ನೇತೃತ್ವದ ಯುಪಿಎ ಸರ್ಕಾರ ಜಾರಿಗೊಳಿಸಿತು. ಮಕ್ಕಳ ಆರೋಗ್ಯ, ಪೌಷ್ಟಿಕತೆ, ಶಿಕ್ಷಣ, ಉದ್ಯೋಗ ಮತ್ತು ಮಕ್ಕಳ ಮೇಲಿನ ದೌರ್ಜನ್ಯ ತಡೆಯುವ ಮೂಲಕ ಮಕ್ಕಳಸ್ನೇಹಿಯಾದ ಕರ್ನಾಟಕ ಮಕ್ಕಳ ಹಕ್ಕುಗಳ ಮಸೂದೆ 2005 ಅನ್ನು ಜಾರಿಗೆ ತರಲಾಯಿತು. ಇದನ್ನು ಕೇಂದ್ರ ಸರ್ಕಾರ ಜಾರಿಗೊಳಿಸಿತು. 

ಧಾರವಾಡ ಮತ್ತು ಗುಲ್ಬರ್ಗಾದಲ್ಲಿ ಹೈಕೋರ್ಟ್‌ ಪೀಠಗಳನ್ನು ಆರಂಭಿಸುವ ಸಂಬಂಧ ಅಡಿಗಲ್ಲು ಹಾಕಿದ್ದು, ಗುಲ್ಬರ್ಗಾ ವಿಶ್ವವಿದ್ಯಾಲಯದಲ್ಲಿ ವಿಜ್ಞಾನೇಶ್ವರ ಮಿತಾಕ್ಷರ ಅಧ್ಯಯನ ಕೇಂದ್ರದ ಆರಂಭಕ್ಕೂ ಚಾಲನೆ ನೀಡಲು ಕಾರಣಿಭೂತರಾದರು. 

ಮಾನವ ಹಕ್ಕುಗಳ ಕಾಯಿದೆ ಜಾರಿಗೆ ತಂದು ಹತ್ತು ವರ್ಷಗಳಾಗಿದ್ದರೂ ರಾಜ್ಯದಲ್ಲಿ ನೀತಿ ರೂಪಿಸಲಾಗಿರಲಿಲ್ಲ ಮತ್ತು ರಾಜ್ಯದಲ್ಲಿ ಮಾನವ ಹಕ್ಕುಗಳ ಸಂಸ್ಥೆಯನ್ನು ಆರಂಭಿಸಿರಲಿಲ್ಲ. ಎಚ್ ಕೆ ಪಾಟೀಲರು ಕಾನೂನು ಸಚಿವರಾದ ಬಳಿಕ ರಾಜ್ಯ ಮಾನವ ಹಕ್ಕುಗಳ ಸಂಸ್ಥೆ ಆರಂಭಿಸುವುದರ ಜೊತೆಗೆ ಮಾನವ ಹಕ್ಕುಗಳ ನ್ಯಾಯಾಲಯಗಳನ್ನು ಆರಂಭಿಸಲಾಯಿತು. 

ಹುಬ್ಬಳ್ಳಿಯ ನವನಗರದಲ್ಲಿ ರಾಜ್ಯ ಕಾನೂನು ವಿಶ್ವವಿದ್ಯಾಲಯ 2009ರಲ್ಲಿ ಆರಂಭವಾಯಿತು. ಇದು ಅಸ್ತಿತ್ವಕ್ಕೆ ಬರುವಂತೆ ಮಾಡಲು ಸಾಕಷ್ಟು ಶ್ರಮವಹಿಸಿದ್ದಾರೆ.  ವಿವಿಧ ವಿಷಯಗಳಲ್ಲಿ ಪದವಿ ಮತ್ತು ಸ್ನಾತಕೋತ್ತರ ಕೋರ್ಸ್‌ಗಳು ವಿಶ್ವವಿದ್ಯಾಲಯದಲ್ಲಿ ಲಭ್ಯವಿದ್ದು, ಸುಮಾರು 97 ಕಾನೂನು ಕಾಲೇಜುಗಳು ಕೆಎಸ್‌ಎಲ್‌ಯುನಿಂದ ಮಾನ್ಯತೆ ಪಡೆದಿವೆ. 

ರಾಜ್ಯ ಸರ್ಕಾರ ಸೂಚನೆಯ ಮೇರೆಗೆ ತಪ್ಪಾದುದ್ದನ್ನು ತಿದ್ದಲು ಮತ್ತು ಆಗಾಗ್ಗೆ ರಾಜ್ಯದ ಕಾನೂನುಗಳಲ್ಲಿ ಸುಧಾರಣೆ ಮಾಡುವುದರ ಜೊತೆಗೆ ಕಾನೂನು ಮತ್ತು ಸಂಸದೀಯ ಚಟುವಟಿಕೆಗಳಲ್ಲಿ ಸುಧಾರಣೆ ತರುವ ಉದ್ದೇಶದಿಂದ ಕರ್ನಾಟಕ ಕಾನೂನು ಮತ್ತು ಸಂಸದೀಯ ಸುಧಾರಣಾ ಸಂಸ್ಥೆಯನ್ನು (ಕಿಲ್ಪಾರ್) ಆರಂಭಿಸಲು ಕಾರಣಿಭೂತರಾದರು. 

ರಾಜ್ಯದ ರಾಜಧಾನಿ ಬೆಂಗಳೂರಿನ ಹೊರಗೆ ಬೆಳಗಾವಿಯ ಸುವರ್ಣ ಸೌಧದಲ್ಲಿ ವಿಧಾನ ಮಂಡಲ ಅಧಿವೇಶ ನಡೆದಿದ್ದು ನಾನು ಕಾನೂನು ಸಚಿವನಾಗಿದ್ದ ಕಾಲದಲ್ಲಿ. ಆ ಬಳಿಕ ಪ್ರತಿ ವರ್ಷ ಬೆಳಗಾವಿಯಲ್ಲಿ ಅಧಿವೇಶ ನಡೆಸುವುದು ರೂಢಿಗತ ನಿಯಮವಾಗಿದೆ. 

ನ್ಯಾಯಾಲಯದ ತೀರ​‍್ುಗಳನ್ನು ಕಾರ್ಯಗತಗೊಳಿಸುವ ದೃಷ್ಟಿಯಿಂದ ರಾಜ್ಯದ ಇತಿಹಾಸದಲ್ಲೇ ಮೊದಲ ಬಾರಿಗೆ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ನೇತೃತ್ವದಲ್ಲಿ ಉನ್ನತ ಮಟ್ಟದ ಸಮಿತಿ ರಚಿಸಲಾಯಿತು. ಸರ್ಕಾರದ ವಿರುದ್ಧದ ತೀರ​‍್ು, ಆದೇಶಗಳನ್ನು ಜಾರಿಗೊಳಿಸುವ ಮೂಲಕ ಫಲಾನುಭವಿಗಳಿಗೆ ಅದರ ಅನುಕೂಲ ಮಾಡಿಕೊಡುವುದರ ಜೊತೆಗೆ ನ್ಯಾಯಾಂಗ ನಿಂದನೆಯ ಮುಜುಗರದಿಂದ ಸರ್ಕಾರವನ್ನು ಪಾರು ಮಾಡುವ ಯತ್ನ ಮಾಡಲಾಯಿತು. ಹೀಗೆ ಸಾಕಷ್ಟು ಸವಾಲುಗಳನ್ನು ಎದುರಿಸುತ್ತಲೇ ಸುಧಾರಣಾ ಕ್ರಮಕೈಗೊಂಡ ಕೀರ್ತಿಯು ಶ್ರೀಯುತರಿಗೆ ಸಲ್ಲುತ್ತದೆ. 

ಎಚ್ ಕೆ ಪಾಟೀಲರ ಕೌಟುಂಬಿಕ ಹಿನ್ನೆಲೆ :  ಗದಗ ಜಿಲ್ಲೆಯ ಹುಲಕೋಟಿ ಗ್ರಾಮದ ಎಚ್ ಕೆ ಪಾಟೀಲ್ ರೆಂದೇ ನಾವು ನೀವೆಲ್ಲರೂ ಗುರುತಿಸಲ್ಪಡುವ ಹನಮಂತಗೌಡ, ಕೃಷ್ಣೆಗೌಡ ಪಾಟೀಲ್ ರನ್ನು ಕಂಡಾಗ ಅರಿವಾಗುತ್ತದೆ. ಎಚ್ ಕೆ ಪಾಟೀಲರು ತಾಯಿ ಪದ್ಮಾವತಿ ಹಾಗೂ ತಂದೆ ಕೆ ಎಚ್ ಪಾಟೀಲ್ ದಂಪತಿಗಳ ಮಗನಾಗಿ ಅಗಸ್ಟ್‌ 15 1953 ರಲ್ಲಿ ಜನಿಸಿದರು ಇವರು ತಮ್ಮ ವಿದ್ಯಾಭ್ಯಾಸವನ್ನು ಬಿ ಎಸ್ ಸಿ ಎಲ್ ಎಲ್ ಬಿ ಪದವಿಯನ್ನು ಪೂರೈಸಿಕೊಂಡು ತಮ್ಮ ವಿದ್ಯಾರ್ಥಿ ಜೀವನದಲ್ಲಿಯೇ ಒಳ್ಳೆಯ ನಾಯಕತ್ವದ ಗುಣಗಳನ್ನು ಹೊಂದಿದ್ದರು. ಮೂಲತಃ ರಾಜಕೀಯ ಹಿನ್ನೆಲೆಯುಳ್ಳ ಕುಟುಂಬದಿಂದ ಬಂದಂತಹ ಎಚ್ ಕೆ ಪಾಟೀಲ್ ರು ತಮ್ಮ ಅತ್ಯುನ್ನತ ನಾಯಕತ್ವದ ಗುಣಗಳಿಂದ ಅತ್ಯಂತ ಕಡಿಮೆ ಅವಧಿಯಲ್ಲಿಯೇ ಚಾಣಾಕ್ಷ ರಾಜಕಾರಣಿ ಎಂದು ಪ್ರಖ್ಯಾತಿಯನ್ನು ಹೊಂದಿರುತ್ತಾರೆ. 

ಎಚ್ ಕೆ ಪಾಟೀಲರ ರಾಜಕೀಯ ಸಾಧನೆಗಳ ಕುರಿತು ಅವಲೋಕನ : ಹುಲಕೋಟಿ ಎಂಬ ಗ್ರಾಮದಿಂದ ರಾಷ್ಟ್ರದ ರಾಜಧಾನಿ ದಿಲ್ಲಿಯವರೆಗೆ ಸಹಕಾರಿ ಹೆಜ್ಜೆಗಳನ್ನು ಮೂಡಿಸಿ ಶ್ರೇಷ್ಠ ಸಂಸ್ಥೆಗಳನ್ನು ಕಟ್ಟಿ ಬೆಳೆಸಿದ ಎಚ್ ಕೆ ಪಾಟೀಲರು ನಮ್ಮ ಕಣ್ಮುಂದಿನ ಹೆಮ್ಮೆಯ ಸಾಧಕರು. ಅವರು ಮೇಲ್ಮನೆಯಲ್ಲಿ ಮಾತನಾಡುತ್ತಿದ್ದ ವೈಖರಿ ಹಾಗೂ ಸಚಿವರಾಗಿದ್ದ ಸಂದರ್ಭದಲ್ಲಿ ಕೆಳಮನೆಯಲ್ಲಿ ಮಾರ್ಗದರ್ಶನ ಮಾಡುತ್ತಿದ್ದ ರೀತಿ ಎಂತಹವರಿಗೂ ಆದರ್ಶಪ್ರಾಯವಾಗಿದೆ. ಇವರ ಈ ಭಾಷಣಗಳ ಸಂಪುಟಗಳು ಅಧ್ಯಯನಕಾರರಿಗೆ, ಶಾಸಕರಿಗೆ, ಆಸಕ್ತರಿಗೆ, ಸಂಶೋಧಕರಿಗೆ, ಅಭಿಮಾನಿಗಳಿಗೆ ದಾರೀದೀಪವಾಗಬಲ್ಲವು” 

ಪ್ರಸ್ತುತ ರಾಜಕಾರಣದ ಕಾಲಘಟ್ಟದಲ್ಲಿ ಸಚಿವ ಎಚ್ ಕೆ ಪಾಟೀಲರಂತಹ ಒಬ್ಬ ಮುತ್ಸದ್ಧಿ, ಯುವ ರಾಜಕಾರಣಿಗಳಿಗೆ ಮಾರ್ಗದರ್ಶಕರು. ಈ ನಿಟ್ಟಿನಲ್ಲಿ ಅವರು ವಿಧಾನ ಪರಿಷತ್ ಸದಸ್ಯರಾಗಿ, ವಿರೋಧ ಪಕ್ಷದ ನಾಯಕರಾಗಿ, ಶಾಸಕರಾಗಿ, ಸಚಿವರಾಗಿ ವಿಧಾನಸಭೆ ಹಾಗೂ ವಿಧಾನ ಪರಿಷತ್‌ನಲ್ಲಿನ ಚರ್ಚೆ, ಮಂಡನೆ, ಭಾಷಣಗಳ ಮತ್ತು ವಿಚಾರ ವಿಮರ್ಶೆಗಳನ್ನು ಸಂಪುಟಗಳಲ್ಲಿ ನೀಡಲಾಗುತ್ತಿದೆ.  

 ಒಂದೆಡೆ ಎಚ್ ಕೆ ಪಾಟೀಲ್ ಅವರಲ್ಲಿನ ವಿವೇಚನೆ, ಯೋಚನೆ, ಯೋಜನೆ ಜೊತೆಗೆ ಅವರಲ್ಲಿನ ದೂರದೃಷ್ಟಿ ಎಲ್ಲಕ್ಕಿಂತ ಮುಖ್ಯವಾಗಿ ಒಬ್ಬ ಪ್ರಬುದ್ಧ ರಾಜಕಾರಣಿಯಲ್ಲಿರಬೇಕಾದ ಅಧ್ಯಯನಶೀಲತೆ ಹಾಗೂ ಸೃಜನಶೀಲತೆ ಇವರ ಗುಣಸ್ವಭಾವ. ಯಾವುದೇ ಒಂದು ವಿಷಯ ಮಂಡನೆ ಮಾಡುವಾಗ ಅದರ ಆಳಕ್ಕಿಳಿದು ಅಧ್ಯಯನಮಾಡಿ, ಒಂದು ವೇಳೆ ತಮಗೆ ಗೊತ್ತಿರದ ವಿಷಯವಿದ್ದರೂ ತಜ್ಞರೊಂದಿಗೆ ಚರ್ಚಿಸಿ, ಸಲಹೆ ಪಡೆದುಕೊಳ್ಳುವ ಗುಣ ಸ್ವಭಾವವನ್ನು ಎಚ್ ಕೆ ಪಾಟೀಲರದ್ದು ಹೊಂದಿರುವರು ಈ ಕಾರಣದಿಂದಲೇ ಅವರು ಆಡುವ ಮಾತಿಗೊಂದು ಮೌಲ್ಯವಿದೆ. ತೂಕವಿದೆ ಜೊತೆಗೆ ಮಹತ್ವದಾಯಕವಾಗಿದೆ  

ಕೃಷಿ, ನೀರಾವರಿ, ಕಾನೂನು, ಸಹಕಾರ, ಶಿಕ್ಷಣ, ಗ್ರಾಮೀಣಾಭಿವೃದ್ಧಿ ಹೀಗೆ ಹತ್ತು ಹಲವು ಕ್ಷೇತ್ರದಲ್ಲಿ ಅಭಿವೃದ್ಧಿಪರ ಕನಸು ಕಾಣುವ ಜೊತೆಗೆ ನನಸಾಗಿಸುವ ನಿಟ್ಟಿನಲ್ಲಿ ಬಹುತೇಕ ಪ್ರಯತ್ನಶೀಲರಾಗಿರುವವರು ಎಚ್‌.ಕೆ. ಪಾಟೀಲರು. ಪಶ್ಚಿಮ ಪದವಿಧರ ಮತಕ್ಷೇತ್ರದಿಂದ ವಿಧಾನ ಪರಿಷತ್ ಸದಸ್ಯರಾಗಿ ಸದನ ಪ್ರವೇಶ ಮಾಡಿದರು. ಪ್ರಬುದ್ಧ ಮತದಾರರ ಕ್ಷೇತ್ರದಿಂದ ಆಯ್ಕೆಯಾದ ಪ್ರಬುದ್ಧ ರಾಜಕೀಯ ಚಿಂತಕ, 1984ರಿಂದ 2008ರವರೆಗೆ 4 ಬಾರಿ ಶಾಸಕರಾಗಿ ಆಯ್ಕೆಯಾದರು.  ಸಚಿವರಾಗಿ, ಸಭಾನಾಯಕರಾಗಿ, ವಿರೋಧ ಪಕ್ಷದ ನಾಯಕರಾಗಿ ನಿರ್ವಹಿಸಿದ ಕಾರ್ಯ ಮಾದರಿಯಾಗಿದೆ.  ಕಾಲು ಶತಮಾನಗಳ ಕಾಲ ಮೇಲ್ಮನೆಯ ಘನತೆಗೆ ಎಂದು ಚ್ಯುತಿ ಬಾರದಂತೆ ಸದನದ ಕಾರ್ಯವಿಧಾನದ ಚೌಕಟ್ಟಿಗೆ ಒಳಪಟ್ಟು ಕಾರ್ಯನಿರ್ವಹಿಸಿರುವದು ಅವಿಸ್ಮರಣೀಯವಾಗಿದೆ. 

ಎಚ್ ಕೆ ಪಾಟೀಲ್‌ರು ಜವಳಿ, ಬೃಹತ್ ನಿರಾವರಿ, ಕಾನೂನು ಮತ್ತು ನ್ಯಾಯ, ಮಾನವ ಹಕ್ಕುಗಳು ಹಾಗೂ ಸಂಸದೀಯ ವ್ಯವಹಾರಗಳ ಇಲಾಖೆ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸೇರಿದಂತೆ ಮುಂತಾದ ಇಲಾಖೆಗಳ ಸಚಿವರಾಗಿ ಕಾರ್ಯನಿರ್ವಹಿಸಿದ್ದಲ್ಲದೇ, ಮೇಲ್ಮನೆಯಲ್ಲಿ ಸಭಾನಾಯಕರಾಗಿ ಮತ್ತು ವಿರೋಧ ಪಕ್ಷದ ನಾಯಕರಾಗಿ ಕಾರ್ಯನಿರ್ವಹಿಸಿದ್ದಾರೆ. ಕಾನೂನು ಸಚಿವರಾಗಿದ್ದ ಸಂದರ್ಭದಲ್ಲಿ ಆರಂಭಿಸಿದ ಸಂಸ್ಥೆಗಳು ಇವರ ದೂರದೃಷ್ಟಿಗೆ ಸಾಕ್ಷಿಯಾಗಿವೆ. ಕರ್ನಾಟಕ ಕಾನೂನು ವಿಶ್ವವಿದ್ಯಾಲಯ, ಕರ್ನಾಟಕ ಕಾನೂನು ಆಯೋಗ, ಕರ್ನಾಟಕ ಮಾನವ ಹಕ್ಕುಗಳ ಆಯೋಗ ಮತ್ತು ಕರ್ನಾಟಕ ಕಾನೂನು ಮತ್ತು ಸಂಸದೀಯ ಸುಧಾರಣಾ ಸಂಸ್ಥೆಯಂತಹ ಉತ್ತಮ ಸಂಸ್ಥೆಗಳನ್ನು ಸ್ಥಾಪಿಸಿ ಬೆಳೆಸಿದವರು.  

ಕರ್ನಾಟಕದ ಕಾನೂನುಗಳನ್ನು ಸಂಪುಟಗಳಲ್ಲಿ ಸಮಗ್ರವಾಗಿ ಪ್ರಕಟಿಸಿ ಇತಿಹಾಸ ಸೃಷ್ಠಿಸಿದವರು. ಧಾರವಾಡ ಹಾಗೂ ಕಲಬುರಗಿಯಲ್ಲಿ ಉಚ್ಛ ನ್ಯಾಯಾಲಯದ ಪೀಠ ಸ್ಥಾಪನೆಯಲ್ಲಿ ಇವರದ್ದು ಅಪಾರ ಕೊಡುಗೆ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ವಿಶ್ವವಿದ್ಯಾಲಯ, ರಾಜ್ಯದಲ್ಲಿ ನೂತನ ಗ್ರಾಮ ಪಂಚಾಯತಿಗಳ ಸೃಜನೆ, ಹೈದರಾಬಾದ್ ಕರ್ನಾಟಕದ ವಿಶೇಷ ಸ್ಥಾನಮಾನ, ಶುದ್ಧ ಕುಡಿಯುವ ನೀರಿನ ಘಟಕಗಳ ಅನುಷ್ಠಾನದಿಂದಾಗಿ ಇವರಿಗೆ ಶುದ್ಧ ನೀರಿನ ಹರಿಕಾರ ಎಂಬ ಬಿರುದಾಂಕಿತದಿಂದ ಗುರುತಿಸಲಾಗುತ್ತದೆ ಇವೆಲ್ಲವುಗಳು ಸನ್ಮಾನ್ಯ ಡಾ. ಎಚ್ ಕೆ ಪಾಟೀಲರ ಬಹುಮುಖ್ಯ ಕೊಡುಗೆಗಳಾಗಿವೆ. 

ಘನ ರಾಜ್ಯ  ಸರ್ಕಾರದ  ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವರಾಗಿದ್ದ    ಅವಧಿಯಲ್ಲಿ, ಕರ್ನಾಟಕ ಸರ್ಕಾರವು 2015-16ನೇ ಸಾಲಿನ ಪಂಚಾಯತ್ ರಾಜ್ ಇಲಾಖೆಯಲ್ಲಿ ಮಾಹಿತಿ ಮತ್ತು ಸಂವಹನ ತಂತ್ರಜ್ಞಾನ (ಐಸಿಟಿ) ಯ ಪರಿಣಾಮಕಾರಿ ಬಳಕೆಗಾಗಿ ಕೇಂದ್ರವು ಸ್ಥಾಪಿಸಿದ ಇ-ಪ್ರಶಸ್ತಿಯನ್ನು ಪಡೆದುಕೊಂಡಿತು.  

ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು 24 ಏಪ್ರಿಲ್ 2017 ರಂದು ಲಖನೌದಲ್ಲಿ ರಾಷ್ಟ್ರೀಯ ಪಂಚಾಯತ್ ರಾಜ್ ದಿನಾಚರಣೆಯ ಸಂದರ್ಭದಲ್ಲಿ ಈ ಪ್ರಶಸ್ತಿಯನ್ನು ಪ್ರದಾನ ಮಾಡಿದರು. ಕರ್ನಾಟಕ ಸರ್ಕಾರದ ಅವರ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯು, 2014-15 ರಿಂದ 2017-18 ರವರೆಗೆ 4 ವರ್ಷಗಳ ಕಾಲ ಸತತವಾಗಿ ರಾಷ್ಟ್ರೀಯ ಪ್ರಶಸ್ತಿಗಳನ್ನು ಪಡೆದಿರುವ ಇವರು ರಾಜ್ಯ ರಾಜಕಾರಣದಲ್ಲಿಯೇ ವೈಶಿಷ್ಟ್ಯತೆಯನ್ನು ಮೆರೆದಿರುವ ಕೀರ್ತಿಗೆ ಪಾತ್ರರಾಗಿರುತ್ತಾರೆ. 

ಪ್ರಸ್ತುತ ಕಾನೂನು ಮತ್ತು ಸಂಸದೀಯ ವ್ಯೆವಹಾರಗಳ, ಮತ್ತು ಪ್ರವಾಸೋಧ್ಯೇಮ ಹಾಗೂ ಗದಗ ಜಿಲ್ಲಾ ಉಸ್ತುವಾರಿ ಸಚಿವರಾಗಿ ಗದಗ ಜಿಲ್ಲೆಯನ್ನು ಮಾದರಿ ಜಿಲ್ಲೆಯನ್ನಾಗಿಸುವ ಕನಸಿನೊಂದಿಗೆ, ಗದಗ ಬೆಟಗೇರಿ ಅವಳಿ ನಗರವನ್ನು ಹೈಟೆಕ್ ಸಿಟಿಯನ್ನಾಗಿಸುವ ಮಹೋನ್ನತ ಧ್ಯೇಯವನ್ನು ಗದಗ ಜಿಲ್ಲೆಯ ಜನಪ್ರಿಯ ಜನಸ್ನೇಹಿ, ಹಾಗೂ ಜನಸ್ಪಂದನೆಯ ನೆಚ್ಚಿನ ನಾಯಕ ಸನ್ಮಾನ್ಯ ಎಚ್ ಕೆ ಪಾಟೀಲರು ಹೊಂದಿರುವರು ಅವರ ಈ ಒಂದು ಜನಪರ ಯೋಜನೆಯು ಶೀಘ್ರವಾಗಿ ಈಡೇರಿಸಲಿ ಹಾಗೂ ಸನ್ಮಾನ್ಯರಿಗೆ ಆಯುಷ್ಯಾರೋಗ್ಯ ವೃದ್ಧಿಯಾಗಲಿ ಎಂದು ವಕೀಲರು ಹಾಗೂ ಸಾಮಾಜಿಕ ಕಾರ್ಯಕರ್ತ ರಾಘವೇಂದ್ರ ಪಾಲನಕರ ದೇವರಲ್ಲಿ ಪ್ರಾರ್ಥಿಸುತ್ತಾ, ನೆಚ್ಚಿನ ರಾಜಕೀಯ ನಾಯಕ ಎಚ್ ಕೆ ಪಾಟೀಲರಿಗೆ 71 ನೇ ಜನ್ಮ ದಿನಾಚರಣೆಯ ಹಾರ್ಧಿಕ ಶುಭಾಶಯಗಳನ್ನು ಕೋರಿರುತ್ತಾರೆ.