ಕೋಲ್ಕತಾ, ಸೆ 7: ನಾಗರಿಕ ಕೇಂದ್ರಿತ ಸೇವೆಗಳಿಗೆ ಒತ್ತು ನೀಡುವ ಮೂಲಕ ಆದಾಯ ತೆರಿಗೆ ಇಲಾಖೆ ಬಗೆಗಿನ ನಿಲುವನ್ನು ಬದಲಿಸಬೇಕಿದೆ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಒತ್ತಿ ಹೇಳಿದ್ದಾರೆ.
ಕೋಲ್ಕತಾದಲ್ಲಿ ಶುಕ್ರವಾರ ಪಶ್ಚಿಮ ಬಂಗಾಳ ಮತ್ತು ಸಿಕ್ಕಿಂ ವಲಯಗಳ ಕೇಂದ್ರೀಯ ನೇರ ತೆರಿಗೆ ಮಂಡಳಿ ಹಾಗೂ ಪರೋಕ್ಷ ಮತ್ತು ಅಬಕಾರಿ ಸುಂಕ ಮಂಡಳಿಯ ಅಧಿಕಾರಿಗಳೊಂದಿಗೆ ಸಂವಾದ ಅವರು, ಆದಾಯ ಸಂಗ್ರಹದ ಗುರಿ ಸಾಧನೆಯ ಭರದಲ್ಲಿ ಹೆಚ್ಚಿನ ಸಂಗ್ರಹದತ್ತ ಗಮನಹರಿಸದಂತೆ ಕಿವಿಮಾತು ಹೇಳಿದರು.
ಕಂದಾಯ ಕಾರ್ಯದರ್ಶಿ ಡಾ. ಅಜಯ್ ಭೂಷಣ್ ಪಾಂಡೆ, ಕೇಂದ್ರ ನೇರ ತೆರಿಗೆ ಮಂಡಳಿ ಅಧ್ಯಕ್ಷ ಚಂದ್ರ ಮೂಡಿ, ಕೇಂದ್ರ ಪರೋಕ್ಷ ತೆರಿಗೆ ಮತ್ತು ಅಬಕಾರಿ ಸುಂಕ ಮಂಡಳಿ ಅಧ್ಯಕ್ಷ ಪ್ರಣಬ್ ಕುಮಾರ್ ದಾಸ್ ಮತ್ತಿತರರು ಸಭೆಯಲ್ಲಿ ಉಪಸ್ಥಿತರಿದ್ದರು.
ಕೇಂದ್ರ ಹಣಕಾಸು ಸಚಿವರು ದೇಶಾದ್ಯಂತ ತೆರಿಗೆ ಅಧಿಕಾರಿಗಳು, ಪ್ರತಿನಿಧಿಗಳೊಂದಿಗೆ ನಡೆಸುತ್ತಿರುವ ಏಳನೇ ಸಭೆ ಇದಾಗಿತ್ತು.
ರಾಷ್ಟ್ರ ನಿರ್ಮಾಣದಲ್ಲಿ ತೆರಿಗೆ ಸಂಗ್ರಹಕಾರರ ಮಹತ್ವವನ್ನು ತಿಳಿಸಿದ ನಿರ್ಮಲಾ ಸೀತಾರಾಮನ್, ನಾಗರಿಕ ಕೇಂದ್ರಿತ ಸೇವೆಗಳಿಗೆ ಒತ್ತು ನೀಡಬೇಕಾದ ಅಗತ್ಯವಿದೆ ಎಂದರು.
ಈ ನಿಟ್ಟಿನಲ್ಲಿ ವಿಜಯದಶಮಿ ದಿನದಂದು ಮುಖತಃ ಭೇಟಿ ಇಲ್ಲದೇ ಆದಾಯ ತೆರಿಗೆ ಪರಿಶೀಲನಾ ವ್ಯವಸ್ಥೆಯನ್ನು ಜಾರಿಗೆ ತರಲಾಗುತ್ತಿದೆ ಎಂದರು.
ಆಧುನಿಕ ತಂತ್ರಜ್ಞಾನ ಬಳಕೆ ಮೂಲಕ ತೆರಿಗೆ ಸೋರಿಕೆ ನಿಯಂತ್ರಿಸಬೇಕು ಎಂದು ಅವರು ಹೇಳಿದರು. ಸಣ್ಣ ಮತ್ತು ಮಧ್ಯಮ ಪ್ರಮಾಣದ ಉದ್ದಿಮೆದಾರರ ಅನುಕೂಲಕ್ಕಾಗಿ ಕಾರ್ಯಕ್ರಮಗಳನ್ನು ಆಯೋಜಿಸುವಂತೆ ಅವರು ಸಲಹೆ ನೀಡಿದರು.
ಆದಾಯ ತೆರಿಗೆ ಇಲಾಖೆ ಹಾಗೂ ಸರಕು ಮತ್ತು ಸೇವಾ ತೆರಿಗೆ (ಜಿಎಸ್ಟಿ) ಇಲಾಖೆಗಳೆರಡೂ ರೀಫಂಡ್ (ಮರುಪಾವತಿ)ಗಳನ್ನು ಸಕಾಲಕ್ಕೆ ಮಾಡಿವೆ ಮತ್ತು ತೆರಿಗೆ ಪಾವತಿದಾರರ ಕುಂದುಕೊರತೆಗಳನ್ನು ಶೀಘ್ರವಾಗಿ ಪರಿಹರಿಸಿವೆ ಎಂದು ಸಚಿವರು ಮೆಚ್ಚುಗೆ ವ್ಯಕ್ತಪಡಿಸಿದರು.
ಅಬಕಾರಿ ಇಲಾಖೆಯ ವಿದ್ಯುನ್ಮಾನ ಮಾಹಿತಿ ಹಂಚಿಕೆ ವ್ಯವಸ್ಥೆ ಉದ್ಘಾಟಿಸಿದರು ಮತ್ತು ಅತಿಸಣ್ಣ, ಸಣ್ಣ ಮತ್ತು ಮಧ್ಯಮ ಉದ್ಯಮ(ಎಮ್ಎಸ್ಎಮ್ಇ) ಗಳ ಕಿರುಹೊತ್ತಿಗೆ ಹಾಗೂ ಜಿಎಸ್ಟಿ ಯಡಿ ಸಬ್ ಕಾ ವಿಶ್ವಾಸ್ ಕುರಿತ ಪ್ರಶ್ನೋತ್ತರ ಕೈಪಿಡಿಯನ್ನು ಬಿಡುಗಡೆ ಮಾಡಿದರು.
ತೆರಿಗೆ ಅಧಿಕಾರಿಗಳು ಕೇವಲ ಯಾಂತ್ರಿಕವಾಗಿ ಕಾರ್ಯನಿರ್ವಹಿಸದೇ ತೆರಿಗೆ ಪಾವತಿದಾರರನ್ನು ಸಂಪರ್ಕಿಸಲು ಇತರ ಮಾರ್ಗಗಳನ್ನು ಕಂಡುಕೊಳ್ಳಬೇಕು ಎಂದು ಚಂದ್ರ ಮೂಡಿ ಸಲಹೆ ನೀಡಿದರು.
ತೆರಿಗೆ ಅಧಿಕಾರಿಗಳು ತೆರಿಗೆ ಸುಗಮಗೊಳಿಸುವವರಾಗುತ್ತಿದ್ದು ಆದಾಯ ತೆರಿಗೆ ಇಲಾಖೆ ಮಹತ್ತರ ಬದಲಾವಣೆ ಕಾಣುತ್ತಿದೆ. ಆದರೆ ಉದ್ದೇಶಪೂರ್ವಕ ತೆರಿಗೆ ವಂಚಕರಿಗೆ ಕಾನೂನಿನನ್ವಯ ಕ್ರಮ ಕೈಗೊಳ್ಳಲಾಗುವುದು ಎಂದರು.
ಕಳೆದ ಹಣಕಾಸು ವರ್ಷದಲ್ಲಿ ಜಿಎಸ್ಟಿ ಸಂಗ್ರಹ ಶೇ.12 ರಷ್ಟು ಹೆಚ್ಚಳ ಕಂಡಿದೆ ಎಂದು ಪ್ರಣಬ್ ಕುಮಾರ್ ದಾಸ್ ಅಂಕಿಅಂಶ ನೀಡಿದರು. ತೆರಿಗೆ ಅಧಿಕಾರಿಗಳು ಸುಧಾರಿತ ಸೇವೆ ನೀಡುವ ಮೂಲಕ ಮೌಲ್ಯ ಸೃಷ್ಟಿಕರ್ತರಾಗಬೇಕು ಎಂದು ಅವರು ಕರೆ ನೀಡಿದರು.
ಇ - ಫೈಲಿಂಗ್, ರಿಟರ್ನಿಗಳ ಕೇಂದ್ರೀಕೃತ ಪರಿಷ್ಕರಣೆ, ಸ್ವಯಂಚಾಲಿತ ರಿಫಂಡ್ ಪ್ರಕ್ರಿಯೆ ಮೊದಲಾದವು ತೆರಿಗೆ ಇಲಾಖೆ ತಂತ್ರಜ್ಞಾನವನ್ನು ಸಮರ್ಥವಾಗಿ ಬಳಸಿಕೊಂಡಿರುವುದಕ್ಕೆ ಉದಾಹರಣೆ ಎಂದು ಡಾ. ಅಜಯ್ ಭೂಷಣ್ ಪಾಂಡೆ ಹೇಳಿದರು.
ತೆರಿಗೆ ಪಾವತಿದಾರರೊಂದಿಗೆ ತೆರಿಗೆ ಇಲಾಖೆ ವ್ಯವಹರಿಸುವ ರೀತಿ ಬದಲಾಗಬೇಕಿದೆ ಎಂದು ಒತ್ತಿ ಹೇಳಿದ ಅವರು, ತೆರಿಗೆ ಪಾವತಿದಾರರಿಗೆ ಪೂರಕ ವಾತಾವರಣ ಕಲ್ಪಿಸುವ ಹೊಣೆ ತೆರಿಗೆ ಇಲಾಖೆಯ ಮೇಲಿದೆ ಎಂದರು.
ಈ ನಿಟ್ಟಿನಲ್ಲಿ ಜಿಎಸ್ಟಿ ಭಾರತದ ಇತಿಹಾಸದಲ್ಲಿ ಅತಿ ದೊಡ್ಡ ಕ್ರಾಂತಿ ಎಂದರು.
ವಿವಿಧ ವ್ಯಾಪಾರ ಸಂಘಟನೆಗಳ ಪ್ರತಿನಿಧಿಗಳೊಂದಿಗೆ ಸಹ ನಿರ್ಮಲಾ ಸೀತಾರಾಮನ್ ಸಭೆ ನಡೆಸಿದರು. ರಾಷ್ಟ್ರ ನಿರ್ಮಾಣದಲ್ಲಿ ಅವರ ಕೊಡುಗೆಗೆ ಮೆಚ್ಚುಗೆ ಸಲ್ಲಿಸಿದ ಅವರು, ತೆರಿಗೆ ವಿಧಾನಗಳನ್ನು ಸರಳಗೊಳಿಸುವ ಮೂಲಕ ಮೌಲ್ಯ ಮತ್ತು ಉದ್ಯೋಗ ಸೃಷ್ಟಿಸಲು ತೆರಿಗೆ ಆಡಳಿತ ಕಾರ್ಯನಿರ್ವಹಿಸಲಿದೆ ಎಂದರು.
ನವೋದ್ಯಮ ಮತ್ತು ಎಮ್ಎಸ್ಎಮ್ಇ ವಲಯದ ಉತ್ತೇಜನಕ್ಕೆ ಸರ್ಕಾರ ಬದ್ಧವಾಗಿದೆ ಎಂದು ನಿರ್ಮಲಾ ಸೀತಾರಾಮನ್ ಭರವಸೆ ನೀಡಿದರು.