ಸಿಡ್ನಿ, ಆ 6 (ಕ್ಸಿನ್ಹುವಾ) ಟೋಕಿಯೋ ಒಲಿಂಪಿಕ್ಸ್ಗೆ ಇನ್ನೂ ಇಂದು ವರ್ಷ ಬಾಕಿ ಇರುವಂತೆ ಆಸ್ಟ್ರೇಲಿಯಾದ ಒಲಿಂಪಿಕ್ಸ್ ಚಿನ್ನದ ಪದಕ ವಿಜೇತ ಸ್ಯಾಲ್ಲಿ ಪೀಯರ್ಸನ್ ಅವರು ಹರ್ಡಲ್ಸ್ ವೃತ್ತಿ ಜೀವನಕ್ಕೆ ವಿದಾಯ ಘೋಷಿಸಿದ್ದಾರೆ.
32ರ ಪ್ರಾಯದ ಅಥ್ಲಿಟ್ ಇತ್ತೀಚೆಗೆ ಸ್ನಾಯುಸೆಳೆತದ ಸೇರಿದಂತೆ ಇತರೆ ಗಾಯಕ್ಕೆ ಒಳಗಾಗಿದ್ದು, ಈ ವಿಷಯ ಸ್ವತಃ ಅವರೇ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಸತತ ಗಾಯದಿಂದ ಬಳಲುತ್ತಿದ್ದು, ಚೇತರಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ ಹಾಗಾಗಿ, ಅಥ್ಲೆಟಿಕ್ಸ್ ವೃತ್ತಿ ಜೀವನಕ್ಕೆ ವಿದಾಯ ಘೋಷಿಸುತ್ತಿದ್ದೇನೆ ಎಂದು ಹೇಳಿದ್ದಾರೆ.
"ಇಂದಿಗೆ ವೃತ್ತಿ ಜೀವನಕ್ಕೆ ಸುದೀರ್ಘ 16 ವರ್ಷಗಳು ಕಳೆದಿದೆ. ಈ ಸಮಯ ಮೋಜು ಮತ್ತು ಉತ್ತೇಜಕ ವರ್ಷಗಳಾಗಿದ್ದವು. ಆದರೆ, ಇದೀಗ ನನ್ನ ದೇಹವು ತರಬೇತಿ ಮತ್ತು ಸ್ಪರ್ದೆ ಯ ಬೇಡಿಕೆಗೆ ಅನುಗುಣವಾಗಿ ತೀವ್ರತೆ ನಿಭಾಯಿಸಲು ಸಾಧ್ಯವಾಗುತ್ತಿಲ್ಲ ಎಂದು ನಾನು ನಂಬುವ ಹಂತಕ್ಕೆ ತಲುಪಿದ್ದೇನೆ ಎಂದು ಹೇಳಿದ್ದಾರೆ.
2012ರ ಲಂಡನ್ ಒಲಿಂಪಿಕ್ಸ್ನಲ್ಲಿ 100 ಮೀ ಹರ್ಡಲ್ಸ್ ಸ್ಪರ್ದೆಯಲ್ಲಿ ಸ್ಯಾಲ್ಲಿ ಪೀಯರ್ಸನ್ ಚಿನ್ನದ ಪದಕ ಮುಡುಗೇರಿಸಿಕೊಂಡಿದ್ದರು. 2008ರ ಬೀಜಿಂಗ್ ಒಲಿಂಪಿಕ್ಸ್ನಲ್ಲೂ ಬೆಳ್ಳಿ ಪದಕ ಗೆದ್ದಿದ್ದರು.
ವಿಶ್ವ ಚಾಂಪಿಯನ್ಶಿಪ್ನಲ್ಲಿ ಎರಡು ಚಿನ್ನದ ಪದಕ ಹಾಗೂ ಒಂದು ಬೆಳ್ಳಿ ಪದಕ ಗೆದ್ದಿದ್ದರು. ಪೀಯರ್ಸನ್ ಅವರ ಕ್ರೀಡಾ ಸಾಧನೆ ಪರಿಗಣಿಸಿ 2012ರಲ್ಲಿ ಆಸ್ಟ್ರೇಲಿಯಾ ಕ್ರೀಡೆಯು ಹಾಲ್ ಆಫ್ ಫೇಮ್ ಪ್ರಶಸ್ತಿ ನೀಡಿ ಗೌರವಿಸಿತ್ತು.
"ಸ್ಯಾಲಿ ತನ್ನ ಮಾನದಂಡಗಳನ್ನು ನಿಗದಿಪಡಿಸಿದ್ದಾರೆ, ಅವರು ಎಲ್ಲಾ ಮಹತ್ವಾಕಾಂಕ್ಷಿ ಕ್ರೀಡಾಪಟುಗಳಿಗೆ ಆದರ್ಶಪ್ರಾಯವಾಗಿದ್ದಾರೆ" ಎಂದು ಆಸ್ಟ್ರೇಲಿಯಾದ ಒಲಿಂಪಿಕ್ ಸಮಿತಿಯ ಮುಖ್ಯ ಕಾರ್ಯನಿರ್ವಾಹಕ ಮ್ಯಾಟ್ ಕ್ಯಾರೊಲ್ ಸ್ಥಳೀಯ ಮಾಧ್ಯಮಗಳಿಗೆ ತಿಳಿಸಿದ್ದಾರೆ.