ನವದೆಹಲಿ, ಫೆ 3 ಸಂಸತ್ತಿನಲ್ಲಿ ಶುಕ್ರವಾರ ಆರಂಭಗೊಂಡ ಬಜೆಟ್ ಅಧಿವೇಶನದ ಮೊದಲ ದಿನ ಉಭಯ ಸದನಗಳನ್ನುದ್ದೇಶಿಸಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಮಾಡಿದ ಭಾಷಣದ ವಂದನಾ ನಿರ್ಣಯದ ವೇಳೆ ವಿಪಕ್ಷಗಳು ಕಲಾಪ ಬಹಿಷ್ಕರಿಸಿ ಪ್ರತಿಭಟನೆ ನಡೆಸಿದ ಘಟನೆ ನಡೆಯಿತು.
ನಿಯಮದಂತೆ ಸ್ಪೀಕರ್ ಓಂ ಬಿರ್ಲಾ ಅವರ ಸೂಚನೆ ಮೇರೆಗೆ ಸೋಮವಾರ ಬಿಜೆಪಿ ಸಂಸದ ಪರ್ವೇಶ್ ಸಾಹೆಬ್ ಸಿಂಗ್ ವರ್ಮಾ ಅವರು ವಂದನಾನಿರ್ಣಯ ಮಂಡನೆ ಮಂಡಿಸಲು ಮುಂದಾದಾಗ ಕಾಂಗ್ರೆಸ್, ಡಿಎಂಕೆ, ಎಐಎಂಐಎಂ ಮತ್ತು ಆರ್ ಎಸ್ ಪಿ ಪಕ್ಷಗಳ ಸದಸ್ಯರು ಸಭಾತ್ಯಾಗ ಮಾಡಿದರು.
ಭಾಷಣದ ಕುರಿತು ಚರ್ಚೆ ನಡೆಸುವಂತೆ ಸ್ಪೀಕರ್ ಸಲಹೆ ನೀಡುತ್ತಿದ್ದಂತೆ ಲೋಕಸಭೆಯ ಕಾಂಗ್ರೆಸ್ ನಾಯಕ ಅಧಿರ್ ರಂಜನ್ ಚೌಧರಿ ಆಕ್ಷೇಪ ವ್ಯಕ್ತಪಡಿಸಿದರು. ಇದಕ್ಕೆ ಇತರರು ಧ್ವನಿಗೂಡಿಸಿದಾಗ ಸದನದಲ್ಲಿ ಗದ್ದಲ ಉಂಟಾಯಿತು. ದೆಹಲಿ ವಿಧಾನಸಭಾ ಚುನಾವಣೆ ವೇಳೆ ವಿವಾದಾತ್ಮಕ ಹೇಳಿಕೆ ನೀಡಿದ್ದ ವರ್ಮಾ ಅವರು ನಿರ್ಣಯ ಮಂಡಿಸಿದ್ದನ್ನು ವಿರೋಧಿಸಿದ ಪಕ್ಷದ ಗೌರವ್ ಗೊಗೊಯಿ, ಎಐಎಂಐಎಂ ನ ಅಸಾದುದ್ದೀನ್ ಒವೈಸಿ, ಡಿಎಂಕೆಯಯ ಟಿ.ಆರ್. ಬಾಲು ಮತ್ತು ಎ.ರಾಜಾ ಆಕ್ಷೇಪ ವ್ಯಕ್ತಪಡಿಸಿದರು.
ಅದಕ್ಕೆ ಓಂ ಬಿರ್ಲಾ, ಸಂಸತ್ತಿನ ಹೊರಗಿನ ಹೇಳಿಕೆಗಳಿಗೆ ಕಲಾಪದ ವೇಳೆ ಗದ್ದಲ ನಡೆಸಿ ತಪ್ಪು ಪದ್ಧತಿಯನ್ನು ಆರಂಭಿಸಬಾರದು ಎಂದು ಕಿಡಿಕಾರಿದರು. ಆದರೆ, ತಮಗೆ ಮಾತನಾಡಲು ಅವಕಾಶ ಕಲ್ಪಿಸಲಿಲ್ಲ ಎಂದು ಆರೋಪಿಸಿ ವಿಪಕ್ಷ ಸದಸ್ಯರು ಸಭಾತ್ಯಾಗ ಮಾಡಿದರು.
ವಿಪಕ್ಷಗಳ ವರ್ತನೆಗೆ ಪ್ರತಿಕ್ರಿಯಿಸಿದ ವರ್ಮಾ, ಕೆಲ ನಾಯಕರು ಪ್ರಧಾನಿ ನರೇಂದ್ರ ಮೋದಿ ಅವರಿಗೆ 'ಹಿಟ್ಲರ್' ಹಾಗೂ 'ಮೌತ್ ಕಾ ಸೌದಾಘರ್' ಎಂದು ಟೀಕಿಸಿದ್ದರು. ಈಗ ಇತರರ ಸಾರ್ವಜನಿಕ ನಡವಳಿಕೆ ಬಗ್ಗೆ ಪ್ರಶ್ನಿಸುತ್ತಿದ್ದಾರೆ ಎಂದು ಆರೋಪಿಸಿದರು.