ಸೋಮವಾರದಂದು ಸಂಸತ್‍ ಮಧ್ಯಾಹ್ನ 2 ಗಂಟೆಗೆ ಸಮಾವೇಶ

ನವದೆಹಲಿ, ಮಾರ್ಚ್ 20, ಕೊರೊನಾವೈರಸ್ ಪ್ರಕರಣಗಳು ಹೆಚ್ಚುತ್ತಿರುವುದರ ನಡುವೆ ವಿಮಾನಯಾನ ಸಂಸ್ಥೆಗಳು ವಿಮಾನಗಳ ಸಮಯವನ್ನು ಬದಲಿಸಿರುವುದರಿಂದ ಸಂಸತ್‍ ನ ಉಭಯ ಸದನಗಳು ಸೋಮವಾರದಂದು ಮಧ್ಯಾಹ್ನ 2 ಗಂಟೆಗೆ ಸಮಾವೇಶಗೊಳ್ಳಲಿವೆ. ರಾಜ್ಯಸಭಾ ಸಭಾಪತಿ ಎಂ.ವೆಂಕಯ್ಯ ನಾಯ್ಡು ಮತ್ತು ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಶುಕ್ರವಾರ ಸದನಗಳಲ್ಲಿ ಈ ಕುರಿತು ಪ್ರಕಟಿಸಿದ್ದಾರೆ. ಗುರುವಾರ ಸದನದಲ್ಲಿ ಚರ್ಚೆಯನ್ನು ಕೈಗೆತ್ತಿಕೊಂಡಾಗ ವಿಮಾನಗಳ ಸಮಯದ ಬದಲಾವಣೆಯಿಂದ ಬೆಳಿಗ್ಗೆ 11 ಗಂಟೆಗೆ ಸದನಕ್ಕೆ ಹಾಜರಾಗಲು ಸಾಧ್ಯವಾಗುವುದಿಲ್ಲ ಎಂದು ಸದಸ್ಯರು ಹೇಳಿದ್ದಾರೆ ಎಂದು ಸ್ಪೀಕರ್‍ ಓಂ ಬಿರ್ಲಾ ಲೋಕಸಭೆಗೆ ತಿಳಿಸಿದರು. ಈ ಹಿನ್ನೆಲೆಯಲ್ಲಿ ಸೋಮವಾರ 2 ಗಂಟೆಗೆ ಸಮಾವೇಶಗೊಳ್ಳಲು ಸ್ಪೀಕರ್ ನಿರ್ಧರಿಸಿದರು. ಸಮಯ ಬದಲಾವಣೆ ಒಂದು ದಿನಕ್ಕೆ ಮಾತ್ರ ಅನ್ವಯವಾಗುತ್ತದೆ ಎಂದು ಅವರು ಹೇಳಿದರು. ಮೇಲ್ಮನೆಯಲ್ಲೂ ವೆಂಕಯ್ಯನಾಯ್ಡು ಇದೇ ಘೋಷಣೆ ಹೊರಡಿಸಿದರು.