ಮುಂಬಯಿ: ಒಂದೊಮ್ಮೆ ಮಗ ಚೆನ್ನಾಗಿ ನೋಡಿಕೊಳ್ಳದಿದ್ದರೆ, ದೌರ್ಜನ್ಯ ನಡೆಸಿದರೆ, ಕ್ರೂರವಾಗಿ ನಡೆಸಿಕೊಂಡರೆ ತಂದೆ-ತಾಯಿ ತಾವು ಆತನಿಗೆ ನೀಡಿದ ಆಸ್ತಿಯನ್ನು ವಾಪಸ್ ಪಡೆದುಕೊಳ್ಳಬಹುದು- ಇದು ಬಾಂಬೆ ಹೈಕೋರ್ಟ್ ನೀಡಿದ ಮಹತ್ವದ ತೀರ್ಪು.
ಹಿರಿಯ ನಾಗರಿಕರ ಪಾಲನೆ ಪೋಷಣೆಗೆ ಸಂಬಂಧಿಸಿದ ವಿಶೇಷ ಕಾನೂನನ್ನು ಉಲ್ಲೇಖಿಸಿರುವ ಕೋರ್ಟ್, ಮಗನಿಗೆ ನೀಡಿದ ಆಸ್ತಿಯನ್ನು ಮರಳಿ ಪಡೆಯುವ ಹಿರಿಯರ ಹಕ್ಕನ್ನು ಎತ್ತಿ ಹಿಡಿದಿದೆ. ನ್ಯಾಯಮೂರ್ತಿಗಳಾದ ರಂಜಿತ್ ಮೋರೆ ಮತ್ತು ಅನುಜಾ ಪ್ರಭು ದೇಸಾಯಿ ಅವರನ್ನೊಳಗೊಂಡ ವಿಭಾಗೀಯ ಪೀಠ ಕೆಳ ನ್ಯಾಯಾಲಯದ ತೀರ್ಪನ್ನು ಎತ್ತಿಹಿಡಿಯುತ್ತಾ ಈ ಸಂದೇಶ ನೀಡಿದೆ.
* ಯಾವ ಪ್ರಕರಣವಿದು?
ಅಂಧೇರಿಯ ವ್ಯಕ್ತಿಯೊಬ್ಬರ ಪತ್ನಿ 2014ರಲ್ಲಿ ಮೃತಪಟ್ಟಿದ್ದರು. ಆಗ ಮಗ ಮತ್ತು ಸೊಸೆ ಫ್ಲ್ಯಾಟ್ನ ಅರ್ಧ ಭಾಗವನ್ನು ತಮಗೆ ನೀಡಬೇಕೆಂದು ಕೇಳಿದ್ದರು. ಅಂತೆಯೇ ಅವರಿಗೆ ಬರೆದುಕೊಡಲಾಯಿತು. ಕಳೆದ ವರ್ಷ ಈ ವ್ಯಕ್ತಿ ಮರುಮದುವೆಯಾಗಿದ್ದು, ಮಗ ಮತ್ತು ಸೊಸೆ ಎರಡನೇ ಪತ್ನಿಯನ್ನು ನಿರ್ಲಕ್ಷಿಸಲು ಆರಂಭಿಸಿದರು. ಇದರಿಂದ ಸಿಟ್ಟಿಗೆದ್ದ ಅವರು ತಾನು ಮಗನಿಗೆ ಕೊಟ್ಟ ಪಾಲನ್ನು ವಾಪಸ್ ಪಡೆಯಲು ಮುಂದಾಗಿ ಕೋರ್ಟ್ ಮೊರೆ ಹೊಕ್ಕರು. ಕೆಳ ನ್ಯಾಯಾಲಯ ಅವರ ಪರವಾಗಿ ತೀರ್ಪು ನೀಡಿದಾಗ ಮಗ ಹೈಕೋರ್ಟ್ ಮೆಟ್ಟಿಲು ಹತ್ತಿದ. ಅಲ್ಲೂ ಅಪ್ಪನಿಗೆ ಜಯವಾಗಿದೆ.