ಪಾಕಿಸ್ತಾನದ ಮಹಿಳಾ ರಾಜಕಾರಣಿ ಕೊರೋನಾ ವೈರಸ್‌ಗೆ ಬಲಿ

ಇಸ್ಲಾಮಾಬಾದ್, ಮೇ 20, ಪಾಕಿಸ್ತಾನದ ಆಡಳಿತಾರೂಢ ತಹ್ರೀಕ್‌ ಇ-ಇನ್ಸಾಫ್ (ಪಿಟಿಐ) ಪಕ್ಷದ ಮಹಿಳಾ ರಾಜಕಾರಣಿಯೊಬ್ಬರು ಬುಧವಾರ ಕೊರೋನಾ ಸೋಂಕಿಗೆ ಬಲಿಯಾಗಿದ್ದಾರೆ.ಲಾಹೋರ್‌ನ ಮಯೊ ಆಸ್ಪತ್ರೆಯಲ್ಲಿ ಸೋಮವಾರದಿಂದ ವೆಂಟಿಲೇಟರ್‌ನಲ್ಲಿದ್ದ ಶಹೀನ್ ರಝಾ (60) ನಿಧನರಾಗಿದ್ದಾರೆ. ಗುಜ್ರಾನ್‌ ವಾಲಾ ಕ್ಷೇತ್ರದ ಶಾಸಕರಾಗಿರುವ ಅವರಿಗೆ ಶನಿವಾರ ಕೋವಿಡ್‌ ಲಕ್ಷ್ಮಣಗಳು ಕಂಡುಬಂದಿತ್ತು.  ಬಳಿಕ ಅವರನ್ನು ಕ್ವಾರಂಟೈನ್‌ ನಲ್ಲಿ ಇಡಲಾಗಿತ್ತು. ಬಳಿಕ, ಅವರನ್ನು ಪರೀಕ್ಷಿಸಿದಾಗ ಅವರಿಗೆ ಕೊರೋನಾ ಪಾಸಿಟಿವ್ ಇರುವುದು ದೃಢಪಟ್ಟಿತ್ತು. ನಂತರ ಅವರನ್ನು ಐಸೋಲೇಷನ್ ವಾರ್ಡ್‌ಗೆ ಸ್ಥಳಾಂತರ ಮಾಡಲಾಗಿತ್ತು ಎಂದು 'ಡಾನ್‌' ವರದಿ ಮಾಡಿದೆ.ಪಂಜಾಬ್ ಅಸೆಂಬ್ಲಿ ಸದಸ್ಯರೂ ಆಗಿರುವ ರಝಾ ಕೆಲವು ಸಮಯದಿಂದ ಸಂಪರ್ಕತಡೆ ಕೇಂದ್ರಗಳನ್ನು ಪರಿಶೀಲಿಸುತ್ತಿದ್ದರು. ಅವರು ಮಧುಮೇಹ ಮತ್ತು ಅಧಿಕ ರಕ್ತದೊತ್ತಡದ ರೋಗಿಯೂ ಆಗಿದ್ದರು ಎಂದು ವೈದ್ಯರು ತಿಳಿಸಿದ್ದಾರೆ.ಅವರ ನಿಧನಕ್ಕೆ ಅಧ್ಯಕ್ಷ ಆರಿಫ್ ಅಲ್ವಿ, ಪ್ರಧಾನಿ ಇಮ್ರಾನ್ ಖಾನ್ ತೀವ್ರ ಶೋಕ ವ್ಯಕ್ತಪಡಿಸಿದ್ದಾರೆ.2018ರಲ್ಲಿ ಪಂಜಾಬ್‌ ವಿಧಾನಸಭೆಯ ವಿಶೇಷ ಸ್ಥಾನಕ್ಕೆ ಅವರು ಆಯ್ಕೆಯಾಗಿದ್ದರು.ಬುಧವಾರ ಪಾಕಿಸ್ತಾನದಲ್ಲಿ ಕೋವಿಡ್ 19 ಸೋಂಕಿತರ ಸಂಖ್ಯೆ 46,206ಕ್ಕೆ ಏರಿಕೆ. ಇದರಲ್ಲಿ 986 ಸಾವು ಕೂಡ ಸೇರಿದೆ. ಸಿಂಧ್‌ನಲ್ಲಿ ಅತಿ ಹೆಚ್ಚು 18,964 ಪ್ರಕರಣಗಳು ದಾಖಲಾಗಿವೆ.