ಶ್ರೀನಗರ, ಫೆ.4, ಪಾಕಿಸ್ತಾನದ ಪಡೆಗಳು ಕದನ ವಿರಾಮ ಉಲ್ಲಂಘಿಸಿ ಉತ್ತರ ಕಾಶ್ಮೀರ ಜಿಲ್ಲೆಯ ಕುಪ್ವಾರಾದ ಗಡಿ ಪಟ್ಟಣವಾದ ಕರ್ನಾಹ್‌ನಲ್ಲಿ ಯದ್ವಾತದ್ವ ಶೆಲ್ ದಾಳಿ ಮತ್ತು ಗುಂಡಿನ ದಾಳಿ ನಡೆಸಿದ ಪರಿಣಾಮ ಓರ್ವ ನಾಗರಿಕ ಸಾವನ್ನಪ್ಪಿದ್ದು, ಇತರ ನಾಲ್ವರು ಗಾಯಗೊಂಡಿದ್ದಾರೆ. ಕಳೆದ 48 ಗಂಟೆಗಳ ಅವಧಿಯಲ್ಲಿ ಪಾಕಿಸ್ತಾನ ಪಡೆಗಳು ಕದನ ವಿರಾಮ ಉಲ್ಲಂಘಿಸಿದ ನಾಲ್ಕನೇ ಪ್ರಕರಣ ಇದಾಗಿದ್ದು, ಶೆಲ್ ದಾಳಿಯಲ್ಲಿ ಹಲವು ಮನೆಗಳು ಕೂಡ ಹಾನಿಗೊಳಗಾಗಿವೆ.
ಕಳೆದ 24 ಗಂಟೆಗಳ ಅವಧಿಯಲ್ಲಿ ಪಾಕಿಸ್ತಾನದ ಪಡೆಗಳು ಅಪ್ರಚೋದಿತ ಶೆಲ್ ದಾಳಿ ಮತ್ತು ಗುಂಡಿನ ದಾಳಿ ನಡೆಸಿದ್ದು, ಕರ್ನಾಹ್‌ದಲ್ಲಿ ಮುಂಚೂಣಿ ಠಾಣೆಗಳು ಮತ್ತು ನಾಗರಿಕ ಪ್ರದೇಶಗಳನ್ನು ಗುರಿಯಾಗಿಸಿಕೊಂಡಿದೆ ಎಂದು ಅಧಿಕೃತ ಮೂಲಗಳು ಯುಎನ್‌ಐಗೆ ತಿಳಿಸಿವೆ.ನಿನ್ನೆ ಸಂಜೆ ಕರ್ನಾಹ್‌ದ ತಂಗ್‌ದಾರ್‌ನ ನಾಗರಿಕ ಪ್ರದೇಶವಾದ ಟಾಡ್ ಎಂಬಲ್ಲಿ ಶೆಲ್ ಅಪ್ಪಳಿಸಿದ ಪರಿಣಾಮ 60 ವರ್ಷ ಪ್ರಾಯದ ಸಲೀಮ್ ಅಹ್ಮದ್ ಎಂಬ ನಾಗರಿಕ ಸಾವನ್ನಪ್ಪಿದ್ದು, ನಾಲ್ವರು ಗಾಯಗೊಂಡಿದ್ದಾರೆ ಎಂದು ಅವು ತಿಳಿಸಿವೆ. "ಗಾಯಾಳುಗಳನ್ನು ತಕ್ಷಣ ಆಸ್ಪತ್ರೆಗೆ ಕರೆದೊಯ್ಯಲಾಯಿತು, ಅಲ್ಲಿ ಅವರ ಆರೋಗ್ಯ ಸ್ಥಿತಿ ಸ್ಥಿರವಾಗಿದೆ ಎಂದು ತಿಳಿಸಿದ್ದಾರೆ ಎಂದು ಅವರು ಹೇಳಿದರು.ಎರಡೂ ಪ್ರದೇಶಗಳಲ್ಲಿನ ಭಾರತೀಯ ಸೈನಿಕರು ಸೂಕ್ತ ಪ್ರತಿಕ್ರಿಯೆ ನೀಡಿದ್ದಾರೆ. ಆದರೆ, ಪಾಕ್ ಸೈನಿಕರ ಕಡೆಯಲ್ಲಿ ಉಂಟಾದ ಹಾನಿಯ ಬಗ್ಗೆ ತಕ್ಷಣ ತಿಳಿದುಬಂದಿಲ್ಲ ಎಂದು ಅವರು ಹೇಳಿದರು.ಕಳೆದ 48 ಗಂಟೆಗಳ ಅವಧಿಯಲ್ಲಿ ಶೆಲ್ ದಾಳಿ ಮತ್ತು ಗುಂಡಿನ ದಾಳಿ ಮುಂದುವರೆದಿದ್ದರಿಂದ ಗಡಿ ಪ್ರದೇಶಗಳ ಬಳಿಯ ನಿವಾಸಿಗಳು ನಿರಂತರ ಭಯದಲ್ಲಿ ಬದುಕುತ್ತಿದ್ದಾರೆ.
ಈ ಮಧ್ಯೆ, ಈ ಸ್ಥಳದಲ್ಲಿ ದಾಳಿಯ ಸಂದರ್ಭದಲ್ಲಿ ರಕ್ಷಣೆ ಪಡೆಯಲು ಯಾವುದೇ ಬಂಕರ್‌ಗಳು ಇಲ್ಲ ಎಂದು ಸ್ಥಳೀಯರು ಆರೋಪಿಸಿದ್ದಾರೆ, "ನಾವು ಬಹಳ ಸಮಯದಿಂದ ಬಂಕರ್‌ಗಳಿಗಾಗಿ ಒತ್ತಾಯಿಸುತ್ತಿದ್ದೇವೆ, ಆದರೆ ಆಡಳಿತವು ಪದೇ ಪದೇ ಭರವಸೆ ನೀಡಿದ್ದರೂ ಈ ಸಮಸ್ಯೆಯನ್ನು ಪರಿಹರಿಸಲು ಯಾವುದೇ ಕ್ರಮ ಕೈಗೊಂಡಿಲ್ಲ" ಎಂದು ಸ್ಥಳೀಯ ನಿವಾಸಿಗಳು ಯುಎನ್‌ಐಗೆ ತಿಳಿಸಿದರು.ಭಾನುವಾರ, ಪಾಕಿಸ್ತಾನವು ಕದನ ವಿರಾಮವನ್ನು ಉಲ್ಲಂಘಿಸಿ ಗುರೆಜ್‌ನ ಬಕ್ತೂರ್‌ನಲ್ಲಿ ಮುಂಚೂಣಿ ಠಾಣೆಗಳನ್ನು ಗುರಿಯಾಗಿಸಿಕೊಂಡು ಶೆಲ್ ದಾಳಿ ನಡೆಸಿದಾಗ ಸಂದೀಪ್ ಯಾದವ್ ಎಂಬ ಸೈನಿಕ ಗಾಯಗೊಂಡಿದ್ದಾರೆ. ಪಾಕಿಸ್ತಾನ ಪಡೆಗಳು ಭಾನುವಾರ ತಂಗ್‌ದಾರ್ ಸೆಕ್ಟರ್‌ನಲ್ಲಿ ಕದನ ವಿರಾಮವನ್ನು ಉಲ್ಲಂಘಿಸಿವೆ.ಕಾಶ್ಮೀರ ಕಣಿವೆಯಲ್ಲಿ ಉಗ್ರರು ನುಸುಳಲು ಅನುಕೂಲವಾಗುವಂತೆ ಪಾಕಿಸ್ತಾನ ಪಡೆಗಳು 2003 ರಲ್ಲಿ ಭಾರತ ಮತ್ತು ಪಾಕಿಸ್ತಾನ ನಡುವೆ ಮಾಡಿಕೊಂಡಿದ್ದ ಕದನ ವಿರಾಮ ಒಪ್ಪಂದವನ್ನು ಉಲ್ಲಂಘಿಸುತ್ತಿವೆ ಎಂದು ಅಧಿಕೃತ ಮೂಲಗಳು ತಿಳಿಸಿವೆ. "ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿ (ಪಿಒಕೆ) ಹೆಚ್ಚಿನ ಸಂಖ್ಯೆಯ ಉಗ್ರರು ಬಾರತದೊಳಗೆ ಬರಲು ಕಾಯುತ್ತಿದ್ದಾರೆ" ಎಂದು ಮೂಲಗಳು ಹೇಳಿವೆ. ಆದಾಗ್ಯೂ, ತೀವ್ರವಾದ ಶೀತ ಮತ್ತು ಹವಾಮಾನ ವೈಪರೀತ್ಯ ಎದುರಿಸುತ್ತಿದ್ದರೂ, ಈ ಭಾಗದಲ್ಲಿ ಯಾವುದೇ ಉಗ್ರಗಾಮಿಗಳು ನುಸುಳುವ ಪ್ರಯತ್ನವನ್ನು ವಿಫಲಗೊಳಿಸಲು ಸೈನ್ಯವು ನಿಯಂತ್ರಣ ರೇಖೆಯ (ಎಲ್‌ಒಸಿ) ಉದ್ದಕ್ಕೂ ತೀವ್ರ ಎಚ್ಚರಿಕೆ ವಹಿಸಿದೆ ಎಂದು ಅವು ಹೇಳಿವೆ.