ಇಸ್ಲಾಮಾಬಾದ್, ನ 6: ಅಂತರ್ಜಾಲ(ಇಂಟನರ್ೆಟ್) ಸ್ವಾತಂತ್ರ್ಯದ ವಿಷಯದಲ್ಲಿ ವಿಶ್ವದ 10 ಕೆಟ್ಟ ದೇಶಗಳಲ್ಲಿ ಪಾಕಿಸ್ತಾನ ಸತತ ಒಂಬತ್ತನೇ ವರ್ಷವೂ ಸೇರಿದೆ ಎಂದು ಅಂತರ್ಜಾಲ ನಿಗಾ ಸಂಸ್ಥೆ ಫ್ರೀಡಂ ಹೌಸ್ ನ ವರದಿ ತಿಳಿಸಿದೆ. ವರದಿಯು ಪಾಕಿಸ್ತಾನವನ್ನು ಅಂತರ್ಜಾಲ ಸ್ವಾತಂತ್ರ್ಯದ ವಿಷಯದಲ್ಲಿ 100 ಕೆಟ್ಟ ದೇಶಗಳ ಪೈಕಿ 26 ಸ್ಥಾನದಲ್ಲಿರಿಸಿದೆ. ಇದು ಕಳೆದ ವರ್ಷದ ಕ್ರಮಾಂಕಕ್ಕಿಂತ ಒಂದು ಸ್ಥಾನ ಕಡಿಮೆಯಾಗಿದೆ ಎಂದು ದಿ ಎಕ್ಸ್ಪ್ರೆಸ್ ಟ್ರಿಬ್ಯೂನ್ ವರದಿ ಮಾಡಿದೆ. ಪ್ರಾದೇಶಿಕ ಕ್ರಮಾಂಕದಲ್ಲಿ ವಿಯೆಟ್ನಾಂ ಮತ್ತು ಚೀನಾ ನಂತರ ಪಾಕಿಸ್ತಾನ ಮೂರನೇ ಕೆಟ್ಟ ದೇಶವಾಗಿ ಹೊರಹೊಮ್ಮಿದೆ. 'ದಿ ಕ್ರೈಸಿಸ್ ಆಫ್ ಸೋಷಿಯಲ್ ಮೀಡಿಯಾ' ಎಂಬ ಶೀರ್ಷಿಕೆಯ 2019ನೇ ಸಾಲಿನ 'ಫ್ರೀಡಮ್ ಆನ್ ದಿ ನೆಟ್' (ಎಫ್ಒಟಿಎನ್) ವರದಿಯನ್ನು ಫ್ರೀಡಂ ಹೌಸ್ ಮಂಗಳವಾರ ಬಿಡುಗಡೆ ಮಾಡಿದೆ. ಜಾಗತಿಕ ಅಂತರ್ಜಾಲ ಸ್ವಾತಂತ್ರ್ಯ ಸತತ ಒಂಬತ್ತನೇ ವರ್ಷವೂ ಕುಸಿದಿದೆ ಎಂದು ದಿ ಎಕ್ಸ್ ಪ್ರೆಸ್ ಟ್ರಿಬ್ಯೂನ್ ವರದಿ ಮಾಡಿದೆ. ಚುನಾವಣೆಯನ್ನು ಕುಶಲತೆಯಿಂದ ನಿರ್ವಹಿಸಲು ಮತ್ತು ನಾಗರಿಕರ ಬಗ್ಗೆ ಗಮನ ಇಡಲು ವಿಶ್ವದಾದ್ಯಂತದ ಸರ್ಕಾರಗಳು ಸಾಮಾಜಿಕ ಮಾಧ್ಯಮವನ್ನು ಹೆಚ್ಚಾಗಿ ಬಳಸುತ್ತಿವೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ. ತಂತ್ರಜ್ಞಾನವನ್ನು ಡಿಜಿಟಲ್ ಸರ್ವಾಧಿಕಾರವಾದದ ಕಡೆಗೆ ತಿರುಗಿಸುತ್ತಿವೆ ಎಂದು ವರದಿ ಹೇಳಿದೆ. ಪಾಕಿಸ್ತಾನದಲ್ಲಿ ಪ್ರತಿಭಟನೆಗಳು, ಚುನಾವಣೆಗಳು, ಧಾರ್ಮಿಕ ಮತ್ತು ರಾಷ್ಟ್ರೀಯ ರಜಾದಿನಗಳಲ್ಲಿ ಅಧಿಕಾರಿಗಳು ಆಗಾಗ್ಗೆ ದೂರಸಂಪರ್ಕ ಸೇವೆಗಳನ್ನು ಅಡ್ಡಿಪಡಿಸುತ್ತಾರೆ ಎಂದು ವರದಿಯು ಗಮನಿಸಿದೆ. 2018 ರ ಸಾರ್ವತ್ರಿಕ ಚುನಾವಣೆಗಳಲ್ಲಿ, ಬಲೂಚಿಸ್ತಾನದ ಕೆಲವು ಭಾಗಗಳಲ್ಲಿ ಮೊಬೈಲ್ ಇಂಟನರ್ೆಟ್ ಸೇವೆಗಳನ್ನು ಗಮನಾರ್ಹವಾಗಿ ಸ್ಥಗಿತಗೊಳಿಸಲಾಗಿತ್ತು. ಒಟ್ಟಾರೆ ಪಾಕಿಸ್ತಾನದಲ್ಲಿ ಅಂತರ್ಜಾಲ ಸ್ವಾತಂತ್ರ್ಯಕ್ಕೆ ಹೆಚ್ಚು ಅವಕಾಶವಿಲ್ಲ ಎಂದು ವರದಿ ಹೇಳಿದೆ.