ನವದೆಹಲಿ, ನ, 7: ಜಮ್ಮು-ಕಾಶ್ಮೀರದ ನೂತನ ಲೆಫ್ಟಿನೆಂಟ್ ಗೌರ್ನರ್ ಅಗಿ ನೇಮಕವಾಗಿರುವ ಗಿರೀಶ್ ಚಂದ್ರ ಮುರ್ಮಾ ಅವರನ್ನು ಗುರಿಯಾಗಿಸಿ ದಾಳಿ ಮಾಡಲು ಪಾಕಿಸ್ತಾನದ ಗುಪ್ತಚರ ಇಲಾಖೆ ಐಎಸ್ ಐ(ಇಂಟರ್ ಸರ್ವಿಸಸ್ ಇಂಟೆಲಿಜೆನ್ಸ್) ಸಂಚು ಮಾಡಿದೆ ಎಂದು ಬೇಹುಗಾರಿಕೆ ಮೂಲಗಳು ತಿಳಿಸಿವೆ ಎಂದೂ ವರದಿಯಾಗಿದೆ. ವರದಿಯ ಪ್ರಕಾರ, ಉಗ್ರ ಸಂಘಟನೆಗಳಾದ ಲಷ್ಕರ್ ಎ ತಯ್ಬಾ, ಹಿಜ್ಬುಲ್ ಮುಜಾಹಿದೀನ್ ಹಾಗೂ ಐಎಸ್ ಐ ಪಾಕಿಸ್ತಾನ ಆಕ್ರಮಿತ ಕಾಶ್ಮೀರದ ಕೋಟ್ಲಿ ಪ್ರದೇಶದಲ್ಲಿ ಈ ಸಂಬಂಧ ಸಭೆ ನಡೆಸಿದ್ದು, ಜಮ್ಮು-ಕಾಶ್ಮೀರದ ನೂತನ ರಾಜ್ಯಪಾಲರನ್ನು ಗುರಿಮಾಡಿಕೊಂಡು ದಾಳಿ ನಡೆಸುವ ಹುನ್ನಾರ, ಸಂಚು ರೂಪಿಸುತ್ತಿರುವುದಾಗಿ ವಿವರಿಸಿದೆ. ಇತ್ತೀಚೆಗೆ ಮುಗಿದ ಜಮ್ಮು-ಕಾಶ್ಮೀರದಲ್ಲಿ ನಡೆದ ಸ್ಥಳೀಯ ಬ್ಲಾಕ್ ಡೆವಲಪ್ ಮೆಂಟ್ ಕೌನ್ಸಿಲ್ ಚುನಾವಣೆಯಲ್ಲಿ ಗೆಲುವು ಸಾಧಿಸಿರುವ ಅಭ್ಯರ್ಥಿಗಳ ಮೇಲೂ ಉಗ್ರರು ವಕ್ರ ದೃಷ್ಟಿ ನೆಟ್ಟಿದ್ದಾರೆಂದೂ ವರದಿಯಾಗಿದೆ. ಜಮ್ಮು-ಕಾಶ್ಮೀರದ ನೂತನ ರಾಜ್ಯಪಾಲರು ಪ್ರಮುಖ ಬಿಜೆಪಿಯ ನಾಯಕರ ಮೇಲೂ ದಾಳಿ ಮಾಡುವಂತೆ ಐಎಸ್ ಐ ಸೂಚನೆ ನೀಡಿದ್ದು, ಅದರಂತೆ ಲಷ್ಕರ್ ಮತ್ತು ಹಿಜ್ಬುಲ್ ಉಗ್ರರ ಪಟ್ಟಿಯಲ್ಲಿ ಇವರ ಹೆಸರು ಇದೆ ಎಂದೂ ಗುಪ್ತಚರ ಇಲಾಖೆ ಮೂಲಗಳು ಹೇಳಿವೆ ಎನ್ನಲಾಗಿದೆ. ಕಳೆದ 29ರಂದು ಕೋಟ್ಲಿ ಮದರಸಾದಲ್ಲಿ ಜೈಷೆ ಉಗ್ರಗಾಮಿ ಸಂಘಟನೆ ಏರ್ಪಡಿಸಿದ್ದ ಸಭೆಯಲ್ಲಿ ಭಯೋತ್ಪಾದಕ ಸಂಘಟನೆಯ ಹಲವು ಕಮಾಂಡರ್ ಗಳು ಭಾಗವಹಿಸಿ ರೂಪು ರೇಷೆ ಸಿದ್ದಪಡಿಸಿದ್ದಾರೆ ಎಂದೂ ವರದಿಯಲ್ಲಿ ಹೇಳಲಾಗಿದೆ.