ಬ್ರಿಸ್ಬೇನ್, ನ.21 : ಆಸ್ಟ್ರೇಲಿಯಾದ ಸ್ಟಾರ್ ಬೌಲರ್ ಗಳಾದ ಮಿಚೆಲ್ ಸ್ಟಾಕರ್್ (52ಕ್ಕೆ 4) ಹಾಗೂ ಪ್ಯಾಟ್ ಕಮಿನ್ಸ್ (60ಕ್ಕೆ 3) ಇವರುಗಳ ಬಿಗುವಿನ ದಾಳಿಗೆ ಪಾಕಿಸ್ತಾನ ಮೊದಲ ಟೆಸ್ಟ್ ನ ಮೊದಲ ಇನ್ನಿಂಗ್ಸ್ ನಲ್ಲಿ 240 ರನ್ ಗಳಿಗೆ ಆಲೌಟ್ ಆಗಿದೆ.
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಪಾಕ್ ತಂಡದ ಆರಂಭ ಭರ್ಜರಿಯಾಗಿತ್ತು. ಶಾನ್ ಮಸೂದ್ (27) ಹಾಗೂ ನಾಯಕ ಅಜರ್ ಅಲಿ (39) ಸೊಗಸಾದ ಬ್ಯಾಟಿಂಗ್ ನಡೆಸಿದರು. ತಂಡ ಹೆಣೆದುಕೊಂಡ ಯೋಜನೆಯಂತೆ ಬ್ಯಾಟ್ ಮಾಡಿದ ಜೋಡಿ ಆತಿಥೇಯ ಬೌಲರ್ ಗಳನ್ನು ಕಾಡಿತು. ಈ ಜೋಡಿಯನ್ನು ಬೇರ್ಪಡಿಸುವಲ್ಲಿ ಪ್ಯಾಟ್ ಕಮಿನ್ಸ್ ಯಶಸ್ವಿಯಾದರು.
ಮಧ್ಯಮ ಕ್ರಮಾಂಕದ ಸ್ಟಾರ್ ಆಟಗಾರರು ರನ್ ಕಲೆ ಹಾಕುವಲ್ಲಿ ಎಡವಿದರು. ಒಂದು ಹಂತದಲ್ಲಿ 75 ರನ್ ಗಳಿಗೆ 1 ವಿಕೆಟ್ ಕಳೆದುಕೊಂಡು ಸುಸ್ಥಿತಿಯಲ್ಲಿದ್ದ ಆಸೀಸ್ ಮೂರು ರನ್ ಸೇರಿಸುವಷ್ಟರಲ್ಲಿ ನಾಲ್ಕು ವಿಕೆಟ್ ಕಳೆದುಕೊಂಡಿತು.
ಆರನೇ ವಿಕೆಟ್ ಗೆ ಅಸದ್ ಶಫೀಕ್ ಹಾಗೂ ಮಹಮ್ಮದ್ ರಿಜ್ವಾನ್ (37) ಜೋಡಿ 49 ರನ್ ಗಳ ಜೊತೆಯಾಟ ನೀಡಿತು. ಏಳನೇ ವಿಕೆಟ್ ಗೆ ಯಾಸೀರ್ ಶಾ (26) ಮತ್ತು ಶಫೀಕ್ ಜೊಡಿ ತಾಳ್ಮೆಯ ಬ್ಯಾಟಿಂಗ್ ನಡೆಸಿದರು. ಅಲ್ಲದೆ ಅಮೂಲ್ಯ 84 ರನ್ ಕಾಣಿಕೆ ನೀಡಿದರು.
ಅಸದ್ ಶಫೀಕ್ 134 ಎಸೆತಗಳಲ್ಲಿ 7 ಬೌಂಡರಿ ನೆರವಿನಿಂದ 76 ರನ್ ಬಾರಿಸಿದರು. ಅಂತಿಮವಾಗಿ ಪಾಕ್ 86.2 ಓವರ್ ಗಳಲ್ಲಿ 240ರನ್ ಗಳಿಗೆ ಆಲೌಟ್ ಆಯಿತು.
ಆಸೀಸ್ ವೇಗಿ ಮಿಚೆಲ್ ಸ್ಟಾಕರ್್ 18.2 ಓವರ್ ಗಳಲ್ಲಿ 52 ರನ್ ನೀಡಿ ನಾಲ್ಕು ವಿಕೆಟ್ ಪಡೆದರು. ಪ್ಯಾಟ್ ಕಮಿನ್ಸ್ 3, ಜೋಶ್ ಹ್ಯಾಜಲ್ ವುಡ್ 2 ವಿಕೆಟ್ ಕಬಳಿಸಿದರು.