ಲಕ್ನೋ, ಫೆಬ್ರವರಿ 14, ಸಿಎಎ ವಿರೋಧಿ ಪ್ರತಿಭಟನಕಾರರ ಮೇಲೆ ನಡೆದ ಪೊಲೀಸ್ ದೌರ್ಜನ್ಯ ಮತ್ತು ರಾಜ್ಯದಲ್ಲಿ ಹದಗೆಟ್ಟಿರುವ ಕಾನೂನು ಮತ್ತು ಸುವ್ಯವಸ್ಥೆ ಪರಿಸ್ಥಿತಿಗಳನ್ನು ಪ್ರಸ್ತಾಪಿಸಿ ಪ್ರತಿಪಕ್ಷಗಳು ಗದ್ದಲವೆಬ್ಬಿಸಿ, ಕೋಲಾಹಲ ಉಂಟು ಮಾಡಿದ್ದರಿಂದ ಉತ್ತರಪ್ರದೇಶದ ವಿಧಾನಸಭೆಯನ್ನು ಎರಡು ಬಾರಿ ಮುಂದೂಡಿದ ಪ್ರಸಂಗ ಶುಕ್ರವಾರ ನಡೆಯಿತು.ಸಿಎಎ ವಿರೋಧಿ ಪ್ರತಿಭಟನಕಾರರ ವಿರುದ್ಧದ ಪೊಲೀಸ್ ದೌರ್ಜನ್ಯದ ಕುರಿತು ಚರ್ಚಿಸಲು ಸಲ್ಲಿಸಿದ್ದ ನೋಟಿಸ್ ಅನ್ನು ಸ್ವೀಕರಿಸಲು ಸ್ಪೀಕರ್ ಹೃದ್ಯ ನಾರೈನ್ ದೀಕ್ಷಿತ್ ಅವರು ನಿರಾಕರಿಸಿದಾಗ, ಪ್ರತಿಪಕ್ಷಗಳು ಕಲಾಪ ಬಹಿಷ್ಕರಿಸಿ ಹೊರನಡೆದವು. ಸದನದಲ್ಲಿ ತಮಗೆ ಮಾತನಾಡಲು ಅವಕಾಶವಿಲ್ಲದಿದ್ದರೆ ಸದನದಲ್ಲಿ ಉಳಿಯುವುದರಲ್ಲಿ ಯಾವುದೇ ಅರ್ಥವಿಲ್ಲ ಎಂದು ಹೇಳಿದ ಪ್ರತಿಪಕ್ಷದ ನಾಯಕ ರಾಮ್ ಗೋವಿಂದ್ ಚೌಧರಿ ಹೊರನಡೆದರು. ಅವರನ್ನು ಹಿಂಬಾಲಿಸಿ ಇತರ ಸದಸ್ಯರು ಕೂಡ ಕಲಾಪ ಬಹಿಷ್ಕರಿಸಿದರು.ಸಿಎಎ ಪ್ರತಿಭಟನಕಾರರ ಮೇಲೆ ನಡೆದ ದೌರ್ಜನ್ಯವನ್ನು ಖಂಡಿಸಿದ ಬಿಎಸ್ಪಿ ನಾಯಕ ಲಾಲ್ಜಿ ವರ್ಮಾ ಅವರು ಯುಪಿ ಘಟನೆಗಳನ್ನು ಬ್ರಿಟಿಷ್ ಆಳ್ವಿಕೆಯಲ್ಲಿ ನಡೆದ ಜಲಿಯನ್ ವಾಲಾ ಬಾಗ್ ಹತ್ಯಾಕಾಂಡಕ್ಕೆ ಹೋಲಿಸಿದರು.
ಕಲಾಪ ಆರಂಭಗೊಳ್ಳುತ್ತಿದ್ದಂತೆ ಕಾಂಗ್ರೆಸ್ ಪ್ರತಿಭಟನೆಯನ್ನು ಆರಂಭಿಸಿತು. ಕಾಂಗ್ರೆಸ್ ಸದಸ್ಯರು ರಾಜ್ಯದಲ್ಲಿ ಹದಗೆಡುತ್ತಿರುವ ಕಾನೂನು ಮತ್ತು ಸುವ್ಯವಸ್ಥೆ ಪರಿಸ್ಥಿತಿ ಮತ್ತು ಸಿಎಎ ವಿರೋಧಿ ಪ್ರತಿಭಟನಕಾರರ ಮೇಲಿನ ದೌರ್ಜನ್ಯದ ಬಗ್ಗೆ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು.ಸದನದಲ್ಲಿ ನಡೆಯುತ್ತಿರುವ ಘಟನೆ 'ದುರದೃಷ್ಟಕರ' ಎಂದು ಹೇಳಿದ ಸ್ಪೀಕರ್ ಸದನವನ್ನು ಮೊದಲು 20 ನಿಮಿಷಗಳ ಕಾಲ ಮುಂದೂಡಿದರು. ಅದಾದ ಬಳಿಕ ರಾಜ್ಯ ಸಂಸದೀಯ ವ್ಯವಹಾರಗಳ ಸಚಿವ ಸುರೇಶ್ ಕುಮಾರ್ ಖನ್ನಾ ಅವರಿಗೆ ಮಾತನಾಡಲು ಸ್ಪೀಕರ್ ಅವಕಾಶ ನೀಡಿದರು.ಮತ್ತೆ ಸದನ ಸಮಾವೇಶಗೊಂಡಾಗಲೂ ಅದೇ ಪರಿಸ್ಥಿತಿ ನಿರ್ಮಾಣಗೊಂಡಿದ್ದರಿಂದ ಸ್ಪೀಕರ್ ಸದನವನ್ನು ಮತ್ತೆ 20 ನಿಮಿಷಗಳ ಕಾಲ ಮುಂದೂಡಿದರು.ವಿರೋಧ ಪಕ್ಷಗಳು ಅಪರಾಧಿಗಳನ್ನು ರಕ್ಷಿಸಲು ಪ್ರಯತ್ನಿಸುತ್ತಿವೆ. ಈ ಸರ್ಕಾರದ್ ಅವಧಿಯಲ್ಲಿ ರಾಜ್ಯದ ಕಾನೂನು ಮತ್ತು ಸುವ್ಯವಸ್ಥೆ ಉತ್ತಮವಾಗಿದೆ ಎಂದು ಖನ್ನಾ ಹೇಳಿದರು.ಕಲಾಪ ಮುಂದೂಡಿಕೆ ಕಾರಣದಿಂದಾಗಿ ಪ್ರಶ್ನೋತ್ತರ ಅವಧಿ ಅಸ್ತವ್ಯಸ್ತಗೊಂಡಿತು.