ನವದೆಹಲಿ, ಡಿ 2 -ಪಂಜಾಬ್ ಮತ್ತು ಮಹಾರಾಷ್ಟ್ರ ಬ್ಯಾಂಕ್ ನಲ್ಲಿ ಠೇವಣಿ ಇರಿಸಿರುವ ಸಣ್ಣ ಠೇವಣಿದಾರರು ತಮ್ಮ ಖಾತೆಗಳಿಂದ ಹಣ ಹಿಂಪಡೆಯಲು ಅವಕಾಶ ನೀಡಬೇಕಾಗಿದೆ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಸೋಮವಾರ ಲೋಕಸಭೆಗೆ ತಿಳಿಸಿದ್ದಾರೆ.
ಲೋಕಸಭೆಯ ಪ್ರಶ್ನೋತ್ತರ ಅವಧಿಯಲ್ಲಿ ಈ ವಿಷಯ ತಿಳಿಸಿದ ಅವರು, ಪಿಎಂಸಿ ಬ್ಯಾಂಕ್ ನ ಶೇ 78 ರಷ್ಟು ಹೂಡಿಕೆದಾರರು ತಮ್ಮ ಖಾತೆಯಲ್ಲಿ ಮೊತ್ತ ಹಿಂಪಡೆಯಬಹುದಾಗಿದೆ. ಸಣ್ಣ ಠೇವಣಿದಾರರಿಗೆ ಹಣ ಹಿಂಪಡೆಯುವ ಅವಕಾಶ ನೀಡಬೇಕಿದೆ ಎಂದರು.
ಬಿಜೆಪಿಯ ರಿತಾ ಬಹುಗುಣ ಜೋಷಿ ಮತ್ತು ಜಿ ಎಸ್ ಬಸವರಾಜ್ ಅವರ ಪ್ರಶ್ನೆ ಉತ್ತರಿಸಿದ ಸಚಿವೆ, ಹಣ ಹಿಂಪಡೆಯುವ ಮಿತಿಯ ಮೇಲೆ ನಿಗಾ ವಹಿಸಿದ್ದು ಠೇವಣಿದಾರರ ಹಿತಾಸಕ್ತಿ ಗಮನಿಸಿ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದರು.
ಠೇವಣಿದಾರರ ಅಗತ್ಯ, ಕಷ್ಟ ಕಾರ್ಪಣ್ಯ ಆಧರಿಸಿ ವೈದ್ಯಕೇತರ ಅಗತ್ಯಗಳಿಗಾಗಿ ಒಂದು ಲಕ್ಷ ರೂಪಾಯಿವರೆಗೆ ಹಣ ಹಿಂಪಡೆಯಲು ಅವಕಾಶವಿದೆ ಎಂದು ಸಚಿವರು ತಿಳಿಸಿದರು.
ತನ್ನ ಅಧಿಕಾರಿಗಳು ಮತ್ತು ಸಾಲ ಪಡೆದವರ ವಿರುದ್ಧ ಬ್ಯಾಂಕ್ ನೀಡಿರುವ ದೂರು ಆಧರಿಸಿ, ಮಹಾರಾಷ್ಟ್ರ ಪೊಲೀಸರ ಆರ್ಥಿಕ ಅಪರಾಧ ವಿಭಾಗ ತನಿಖೆ ಕೈಗೊಂಡಿದೆ. ವಹಿವಾಟಿನ ಬಗ್ಗೆ ಫಾರೆನ್ಸಿಕ್ ಆಡಿಟರ್ ಗಳನ್ನೂ ನೇಮಕ ಮಾಡಲಾಗಿದೆ ಎಂದು ಲೋಕಸಭೆಗೆ ತಿಳಿಸಲಾಯಿತು.