ನವದೆಹಲಿ, ಜ 30: ಅಸ್ಸಾಂನಲ್ಲಿ ಶಸ್ತ್ರಾಸ್ತ್ರ ತ್ಯಜಿಸಿರುವ ಬೋಡೋ ಸಂಘಟನೆಗಳ ನಿರ್ಧಾರವನ್ನು ಪ್ರಧಾನಿ ನರೇಂದ್ರ ಮೋದಿ ಗುರುವಾರ ಸ್ವಾಗತಿಸಿದ್ದಾರೆ.
‘ಐದು ದಶಕಗಳಷ್ಟು ಹಳೆಯ ಬೋಡೋ ವಿಷಯ ಪೂಜ್ಯ ಬಾಪು (ಮಹಾತ್ಮ ಗಾಂಧಿ) ಪುಣ್ಯತಿಥಿಯಂದು ಪರಿಹಾರ ಕಂಡುಕೊಂಡಿದೆ.’ ಎಂದು ಪ್ರಧಾನಿ ಟ್ವೀಟ್ ಮಾಡಿದ್ದಾರೆ.
ಬೋಡೊ ಸಂಘಟನೆಗಳು ಮತ್ತು ಸರ್ಕಾರದ ನಡುವಿನ ಒಪ್ಪಂದ ಅಸ್ಸಾಂನ ಏಕತೆ ಮತ್ತು ಸಮಗ್ರತೆಯನ್ನು ಬಲಪಡಿಸುತ್ತದೆ. ಹಿಂಸಾಚಾರ ತೊರೆದು ಪ್ರಜಾಪ್ರಭುತ್ವ ಮತ್ತು ಸಂವಿಧಾನದ ಮೇಲೆ ನಂಬಿಕೆಯನ್ನು ಇರಿಸಿದ ಬೋಡೋ ಸ್ನೇಹಿತರ ನಿರ್ಧಾರ ಸ್ವಾಗತಿಸುತ್ತೇನೆ.’ ಎಂದು ಮೋದಿ ಹೇಳಿದ್ದಾರೆ.
ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಸಮ್ಮುಖದಲ್ಲಿ ದೆಹಲಿಯಲ್ಲಿ ಇತ್ತೀಚೆಗೆ ಸಹಿ ಹಾಕಲಾದ ಬೋಡೋ ಶಾಂತಿ ಒಪ್ಪಂದ ಅನುಸಾರವಾಗಿ ಹೆಚ್ಚಿನ ಸಂಖ್ಯೆಯ ಬೋಡೋ ಉಗ್ರರು ಗುರುವಾರ ಗುವಾಹಟಿಯಲ್ಲಿ ಅಸ್ಸಾಂ ಮುಖ್ಯಮಂತ್ರಿ ಸರ್ಬಾನಂದ ಸೋನೊವಾಲ್ ಮತ್ತು ಅಸ್ಸಾಂ ಹಣಕಾಸು ಸಚಿವ ಹಿಮಂತ ಬಿಸ್ವಾ ಶರ್ಮಾ ಸಮ್ಮುಖದಲ್ಲಿ ಸಂಖ್ಯೆಯ ಬೋಡೋ ಉಗ್ರರು ಶರಣಾಗಿ, ಶಸ್ತ್ರಾಸ್ತ್ರಗಳನ್ನು ಒಪ್ಪಿಸಿದ್ದಾರೆ.
ಎನ್‍ಡಿಎಫ್‍ಬಿ ಬಣಗಳು ಜ 27 ರ ಸೋಮವಾರ ಸರ್ಕಾರದೊಂದಿಗೆ ಶಾಂತಿ ಒಪ್ಪಂದಕ್ಕೆ ಸಹಿ ಹಾಕಿದ್ದವು. ಅಸ್ಸಾಂನ ಬೋಡೋ ಪ್ರದೇಶಗಳ ಅಭಿವೃದ್ಧಿಗೆ ಮುಂದಿನ ಮೂರು ವರ್ಷಗಳಲ್ಲಿ 1,500 ಕೋಟಿ ರೂ.ಗಳ ನೆರವು-ಪ್ಯಾಕೇಜ್ ನೀಡಲು ಕೇಂದ್ರ ಒಪ್ಪಿದೆ.
ಬುಡಕಟ್ಟು ಪ್ರದೇಶಗಳ ತ್ವರಿತ ಅಭಿವೃದ್ಧಿ, ಎನ್‍ಡಿಎಫ್‍ಬಿ ಮತ್ತು ಅದರ ಬಣಗಳ ಸದಸ್ಯರ ಪುನರ್ವಸತಿಗಾಗಿ ಒಪ್ಪಂದದಲ್ಲಿ ಅವಕಾಶಗಳಿವೆ.