ಮಾ 17 ರಂದು ಪ್ರಧಾನಿ ಮೋದಿ ಬಾಂಗ್ಲಾ ಪ್ರವಾಸ

ನವದೆಹಲಿ, ಜ 29 :      ಪೌರತ್ವ ತಿದ್ದುಪಡಿ ಕಾಯ್ದೆ ಜಾರಿಯಾದ ಬಳಿಕ ಇದೇ ಮೊದಲ ಬಾರಿಗೆ ಪ್ರಧಾನಿ ನರೇಂದ್ರ ಮೋದಿ  ಬರುವ  ಮಾರ್ಚ್ 17ರಂದು ಬಾಂಗ್ಲಾದೇಶ  ಪ್ರವಾಸ  ಕೈಗೊಳ್ಳಲಿದ್ದಾರೆ.

ಬಂಗಬಂಧು ಶೇಖ್ ಮುಜೀಬುರ್ರಹ್ಮಾನ್  ಜನ್ಮಶತಮಾನೋತ್ಸವಕ್ಕೆ ಚಾಲನೆ ನೀಡುವ ಸಮಾರಂಭದಲ್ಲಿ ಭಾಗಿಯಾಗಲಿದ್ದಾರೆ ಎಂದು ಉನ್ನತ  ಮೂಲಗಳು ಹೇಳಿವೆ.  

ಉಭಯ ದೇಶಗಳ ನಡುವಿನ ಆತ್ಮೀಯ ದ್ವಿಪಕ್ಷೀಯ ಸಂಬಂಧವನ್ನು ಬಿಂಬಿಸುವುದು ಇದರ ಉದ್ದೇಶವಾಗಿದೆ ಕಾರ್ಯಕ್ರಮದ ಹಿಂದಿನ ದಿನವೇ ಢಾಕಾ ತಲುಪಲಿರುವ ಮೋದಿ, ಬಾಂಗ್ಲಾದೇಶದ ಸಂಸ್ಥಾಪಕ ಮುಜೀಬುರ್ರಹ್ಮಾನ್ ಅವರ ಜನ್ಮ ಶತಮಾನೋತ್ಸವದಲ್ಲಿ ಮುಖ್ಯ ಭಾಷಣಕಾರರಾಗಿ ಮಾತನಾಡಲಿದ್ದಾರೆ.

ಭಾರತ ಪೌರತ್ವ ತಿದ್ದುಪಡಿ ಕಾಯ್ದೆಯನ್ನು ಜಾರಿಗೊಳಿಸಿದ ಬಳಿಕ ಉಭಯ ದೇಶಗಳ ನಡುವಿನ ಸಂಬಂಧದಲ್ಲಿ ಸಂಘರ್ಷ ಉಂಟಾಗಿದ್ದು, ಈ ಹಿನ್ನೆಲೆಯಲ್ಲಿ ಪ್ರಧಾನಿ ಮೋದಿ ಭೇಟಿ ಕುತೂಹಲ ತೀವ್ರ ಕೆರಳಿಸಿದೆ. ಭಾರತದ ಸಂಸತ್ತು ಪೌರತ್ವ ತಿದ್ದುಪಡಿ ಕಾಯ್ದೆ  ಅನುಮೋದನೆ ಪಡೆದ ನಂತರ  ಬಾಂಗ್ಲಾದೇಶದ ಮೂವರು ಸಚಿವರು ಭಾರತ ಪ್ರವಾಸ  ರದ್ದುಪಡಿಸಿದ್ದಾರೆ.

ಆದರೆ ಸಿಎಎ ಭಾರತದ ಆಂತರಿಕ ವಿಚಾರ ಎಂದು ಬಾಂಗ್ಲಾ ಪ್ರಧಾನಿ ಶೇಖ್ ಹಸೀನಾ ಗಲ್ಫ್ನ್ಯೂಸ್ಗೆ ನೀಡಿದ ಸಂದರ್ಶನದಲ್ಲಿ ಸ್ಪಷ್ಟಪಡಿಸಿದ್ದರು.