ಲಖನೌ, ಫೆ 5 , ಉತ್ತರ ಪ್ರದೇಶದ ಲಕ್ನೊನಲ್ಲಿ ಇಂದಿನಿಂದ ಐದು ದಿನಗಳ 11ನೇ ಡಿಫೆನ್ಸ್ ಎಕ್ಸಪೋ ೨೦೨೦ ಪ್ರಾರಂಭವಾಗಲಿದೆ. ರಕ್ಷಣಾ ತಂತ್ರಜ್ಞಾನ ಕ್ಷೇತ್ರದಲ್ಲಿ ಹೊಸ ದಿಕ್ಕಿನತ್ತ ಕೊಂಡೊಯ್ಯುವ ಮಹತ್ವದ ಸಮಾವೇಶದಲ್ಲಿ ದೇಶ, ವಿದೇಶಗಳ ತಜ್ಞರು ಭಾಗಿಯಾಗಲಿದ್ದಾರೆ.ಈ ಪ್ರದರ್ಶನಕ್ಕೆ ಪ್ರಧಾನಿ ನರೇಂದ್ರ ಮೋದಿ ಚಾಲನೆ ನೀಡಲಿದ್ದು, ರಕ್ಷಣಾ ಸಚಿವ ರಾಜನಾಥ್ ಸಿಂಗ್ ಉಪಸ್ಥಿತರಿರಲಿದ್ದಾರೆ. ರಕ್ಷಣಾ ಕ್ಷೇತ್ರದ ತಂತ್ರಜ್ಞಾನವನ್ನು ಒಂದೇ ಸೂರಿನಡಿ ತರುವುದು ಮತ್ತು ಸರ್ಕಾರಿ, ಖಾಸಗಿ ತಯಾರಕರು ಹಾಗೂ ಸ್ಟಾರ್ಟ್‌ಅಪ್ ಉದ್ಯಮಗಳಿಗೆ ಅಸಂಖ್ಯಾತ ಅವಕಾಶಗಳನ್ನು ನೀಡುವುದು ಈ ಎಕ್ಸ್‌ಪೋದ ಉದ್ದೇಶವಾಗಿದೆ.
ಐದು ದಿನಗಳ ಕಾಲ ನಡೆಯಲಿರುವ ಈ ಪ್ರದರ್ಶನವು ವಾಯುಪಡೆ, ರಕ್ಷಣಾ ಮತ್ತು ಭದ್ರತಾ ವಲಯದ ನೂತನ ಆವಿಷ್ಕಾರಗಳನ್ನು ಪ್ರದರ್ಶಿಸಲಿವೆ. ಅಮೆರಿಕ, ಆಸ್ಟ್ರೇಲಿಯಾ, ರಷ್ಯಾ ಹಾಗೂ ದಕ್ಷಿಣ ಕೊರಿಯಾ ಸೇರಿದಂತೆ ೪೦ ರಾಷ್ಟ್ರಗಳು ಈ ಪ್ರದರ್ಶನದಲ್ಲಿ ಪಾಲ್ಗೊಳ್ಳಲಿವೆ. ಕಳೆದ ಬಾರಿ ಒಟ್ಟು 160 ರಕ್ಷಣಾ ಕಂಪೆನಿಗಳು ಸಮಾವೇಶದಲ್ಲಿ ಪಾಲ್ಗೊಂಡಿದ್ದು, ಈ ಬಾರಿ ಈ ಸಂಖ್ಯೆ 172 ಕ್ಕೆ ಏರಿಕೆಯಾಗಿದೆ. ಈ ಸಂದರ್ಭದಲ್ಲಿ ಹಲವಾರು ಒಡಂಬಡಿಕೆಗಳಿಗೂ ಸಹ ಸಹಿ ಹಾಕುವ ಸಾಧ್ಯತೆಯಿದೆ.