ಬ್ರೆಜಿಲ್ ಬ್ರಿಕ್ಸ್ ಶೃಂಗಸಭೆಯಲ್ಲಿ ಭಾಗವಹಿಸಲಿರುವ ಪ್ರಧಾನಿ ಮೋದಿ: ಚೀನಾ ಅಧ್ಯಕ್ಷ ಉಪಸ್ಥಿತಿ ನಿರೀಕ್ಷೆ

ನವದೆಹಲಿ, ನವೆಂಬರ್ 8:     ಬ್ರೆಜಿಲ್ನಲ್ಲಿ ನಡೆಯಲಿರುವ ಬ್ರಿಕ್ಸ್ ಶೃಂಗಸಭೆಯತ್ತ ಇದೀಗ ಎಲ್ಲರ ಗಮನ ನೆಟ್ಟಿದ್ದು, ಪ್ರಧಾನಿ ನರೇಂದ್ರ ಮೋದಿ ಮತ್ತು ಚೀನಾದ ಅಧ್ಯಕ್ಷ ಕ್ಸಿ ಜಿನ್ಪಿಂಗ್ ಕೂಡ ಭಾಗವಹಿಸಲಿದ್ದಾರೆ. 11 ನೇ ಬ್ರಿಕ್ಸ್ ಶೃಂಗಸಭೆಯಲ್ಲಿ ಪಾಲ್ಗೊಳ್ಳಲು ಪ್ರಧಾನಿ ನವೆಂಬರ್ 13 ಮತ್ತು 14 ರಂದು ಬ್ರೆಸಿಲಿಯಾದಲ್ಲಿ ಇರಲಿದ್ದು, ಈ ವರ್ಷ 'ನವೀನ ಭವಿಷ್ಯಕ್ಕಾಗಿ ಆರ್ಥಿಕ ಬೆಳವಣಿಗೆ' ಎಂಬುದು ಶೃಂಗಸಭೆಯ ಧ್ಯೇಯವಾಕ್ಯವಾಗಿದೆ. ಈ ವರ್ಷದ ಬ್ರಿಕ್ಸ್ ಶೃಂಗಸಭೆಯಲ್ಲಿ ಮೋದಿ ಮತ್ತು ಚೀನಾದ ಅಧ್ಯಕ್ಷ ಕ್ಸಿ ನಡುವೆ ಔಪಚಾರಿಕ ಮತ್ತು ಅನೌಪಚಾರಿಕ ಸಭೆ ಅತ್ಯಂತ ಮಹತ್ವ ಪಡೆದುಕೊಂಡಿದೆ. ಏಕೆಂದರೆ ಚೀನಾ-ಪ್ರಾರಂಭಿಸಿದ ಪ್ರಾದೇಶಿಕ ಸಮಗ್ರ ಆರ್ಥಿಕ ಸಹಭಾಗಿತ್ವ (ಆರ್ಸಿಇಪಿ) ಒಪ್ಪಂದಕ್ಕೆ ಸೇರ್ಪಡೆಗೊಳ್ಳದಿರಲು ಪ್ರಧಾನಿ ಮೋದಿಯವರ ಇತ್ತೀಚಿನ ನಿರ್ಧಾರದ ನಂತರ ಉಭಯ ದೇಶಗಳ ನಡುವೆ ನಡೆಯುತ್ತಿರುವ ಮೊದಲ ಸಭೆ ಇದಾಗಿದೆ. ಮುಂಬರುವ ಬ್ರಿಕ್ಸ್ ಶೃಂಗಸಭೆಯು ಸದಸ್ಯ ರಾಷ್ಟ್ರಗಳ ಸಹಕಾರದ ಹೊಸ "ಸುವರ್ಣ ದಶಕ" ದ ಆರಂಭವನ್ನು ಸೂಚಿಸುತ್ತದೆ ಎಂದು ಚೀನಾದ ಅಧಿಕಾರಿಗಳು ಹೇಳಿದ್ದಾರೆ. ಸದಸ್ಯ ರಾಷ್ಟ್ರಗಳ ಪ್ರತಿನಿಧಿಗಳು, ಬಹುಪಕ್ಷೀಯತೆ ಮತ್ತು ಮುಕ್ತ ವಿಶ್ವ ಆರ್ಥಿಕತೆಯ ವಿಷಯದಲ್ಲಿ ಒಗ್ಗಟ್ಟಿನ ಧ್ವನಿಯೊಂದಿಗೆ ಮಾತನಾಡಲಿದ್ದಾರೆ ಎಂದು ಅವರು ಹೇಳಿದರು. ಗುರುವಾರ ನಡೆದ ಸಾಪ್ತಾಹಿಕ ಮಾಧ್ಯಮಗೋಷ್ಠಿಯಲ್ಲಿ ಆರ್ಸಿಇಪಿ ಕುರಿತ ಪ್ರಶ್ನೆಗೆ ಉತ್ತರಿಸಿದ ಎಂಇಎ ವಕ್ತಾರ ರವೀಶ್ ಕುಮಾರ್,  ನಮ್ಮ ಹಿತಾಸಕ್ತಿಗಳ ಸ್ಪಷ್ಟ ದೃಷ್ಟಿಕೋನದಿಂದ ನಾವು ಮಾತುಕತೆ ನಡೆಸಿದ್ದೇವೆ. ನಮ್ಮ ಪ್ರಮುಖ ಹಿತಾಸಕ್ತಿಗಳಿಗೆ ಅವಕಾಶ ಕಲ್ಪಿಸಲಾಗುವುದು ಎಂಬ ದೃಢವಾದ ಆಶ್ವಾಸನೆಯನ್ನು ನಾವು ಪಡೆದರೆ, ಆ ಹಂತದಲ್ಲಿ ಈ ವಿಷಯದ ಬಗ್ಗೆ ಯಾವುದೇ ಹೆಚ್ಚಿನ ನಿರ್ಧಾರ ತೆಗೆದುಕೊಳ್ಳುವ ಬಗ್ಗೆ ನಾವು ಯೋಚಿಸಬಹುದು  ಎಂದು ಸ್ಪಷ್ಟಪಡಿಸಿದ್ದರು. ಬ್ರಿಕ್ಸ್ ಶೃಂಗಸಭೆಯಲ್ಲಿ ಭಾಗವಹಿಸುವುದರ ಹೊರತಾಗಿ, ಪ್ರಧಾನಿ ನರೇಂದ್ರ ಮೋದಿ, ಅಧ್ಯಕ್ಷ ಜೈರ್ ಬೋಲ್ಸೊನಾರೊ ಅವರೊಂದಿಗೆ ದ್ವಿಪಕ್ಷೀಯ ಸಭೆ ನಡೆಸಲಿದ್ದಾರೆ. ಅಧ್ಯಕ್ಷ ಬೋಲ್ಸೊನಾರೊ ನೇತೃತ್ವದ ಹೊಸ ಆಡಳಿತವು ಜನವರಿ 1 ರಂದು ಅಧಿಕಾರ ವಹಿಸಿಕೊಂಡ ನಂತರ ಪ್ರಧಾನಿಯವರ ಮೊದಲ ಭೇಟಿ ಇದಾಗಿದೆ ಎಂದು ಆಥರ್ಿಕ ಸಂಬಂಧಗಳ ಕಾರ್ಯದರ್ಶಿ ಟಿ.ಎಸ್. ತ್ರಿಮೂರ್ತಿ ಗುರುವಾರ ಇಲ್ಲಿ ಸುದ್ದಿಗಾರರಿಗೆ ತಿಳಿಸಿದರು. ಜಿ 20 ಶೃಂಗಸಭೆಯ ಸಂದರ್ಭದಲ್ಲಿ ಮೋದಿ ಅವರು ಈ ವರ್ಷದ ಆರಂಭದಲ್ಲಿ ಅಧ್ಯಕ್ಷ ಬೊಲ್ಸನಾರೊ ಅವರನ್ನು ಒಸಾಕಾದಲ್ಲಿ ಭೇಟಿ ಮಾಡಿದ್ದರು. ಇದು ಬ್ರಿಕ್ಸ್ ಶೃಂಗಸಭೆಯಲ್ಲಿ ಆರನೇ ಬಾರಿಗೆ ಪ್ರಧಾನಿ ಮೋದಿ ಭಾಗವಹಿಸುತ್ತಿರುವುದು. 2014 ರಲ್ಲಿ ಬ್ರೆಜಿಲ್ನ ಫೋರ್ಟಲೆಜಾದಲ್ಲಿ ನಡೆದ ಶೃಂಗಸಭೆ ಮೋದಿಯವರು ಭಾಗವಹಿಸಿದ ಮೊದಲ ಶೃಂಗಸಭೆಯಾಗಿತ್ತು. ಪ್ರಧಾನಮಂತ್ರಿಯೊಂದಿಗೆ ಅಧಿಕೃತ ನಿಯೋಗ ಇರುತ್ತದೆ. ಈ ಭೇಟಿಯ ಸಮಯದಲ್ಲಿ ಭಾರತದಿಂದ ದೊಡ್ಡ ವ್ಯಾಪಾರ ನಿಯೋಗವೊಂದು ಹಾಜರಾಗುವ ನಿರೀಕ್ಷೆಯಿದೆ, ವಿಶೇಷವಾಗಿ ಎಲ್ಲಾ ಐದು ದೇಶಗಳ ವ್ಯಾಪಾರ ಸಮುದಾಯವನ್ನು ಪ್ರತಿನಿಧಿಸುವ ಬ್ರಿಕ್ಸ್ ಬಿಸಿನೆಸ್ ಫೋರಂ ಕೂಡ ಅಲ್ಲಿ ಹಾಜರಾಗಲಿದೆ.