ನವದೆಹಲಿ, ಜ 10, ಪ್ರಧಾನಿ ಮೋದಿ ಅವರು ಕೇವಲ ಕ್ರೋನಿ ಕ್ಯಾಪಿಟಲಿಸ್ಟ್ ಗಳು ಹಾಗೂ ದೊಡ್ಡ ದೊಡ್ಡ ಉದ್ಯಮಿಗಳೊಂದಿಗೆ ಮಾತ್ರ ಬಜೆಟ್ ಕುರಿತು ಸಮಾಲೋಚನೆ ನಡೆಸುತ್ತಾರೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಆಕ್ಷೇಪ ವ್ಯಕ್ತಪಡಿಸಿದ್ದಾರೆ.ಬಜೆಟ್ ಸಂಬಂಧ ದೇಶದ ರೈತರು, ವಿದ್ಯಾರ್ಥಿಗಳು ಹಾಗೂ ಮಹಿಳಾ ವಲಯದ ಅಭಿಪ್ರಾಯ ಪಡೆದುಕೊಳ್ಳಲು ಅವರು ಸಂಪರ್ಕಿಸುವುದಿಲ್ಲ ಎಂದು ದೂರಿದ್ದಾರೆ. ನರೇಂದ್ರ ಮೋದಿ ಸರ್ಕಾರ ಕೇವಲ “ಸೂಟ್ ಬೂಟ್ ಸರ್ಕಾರ” ವಾಗಿದ್ದು, ರೈತರು, ವಿದ್ಯಾರ್ಥಿಗಳು ಮತ್ತು ದುಡಿಯುವ ವರ್ಗಗಳ ಬಗ್ಗೆ ಎಂದೂ ಆಸಕ್ತಿ ವಹಿಸುವುದಿಲ್ಲ ಎಂದು ಟೀಕಿಸಿದ್ದಾರೆ. ಕೇವಲ ದೊಡ್ಡ ಉದ್ಯಮಿಗಳ ಜೊತೆ ಮಾತ್ರ ಪ್ರಧಾನಿ ಸಭೆ ನಡೆಸುತ್ತಿದ್ದಾರೆ. ಮಧ್ಯಮ ವರ್ಗ, ರೈತರು ಎದುರಿಸುತ್ತಿರುವ ಸಮಸ್ಯೆಗಳನ್ನು ಆಲಿಸಲು ಅವರಿಗೆ ಸಮಯವಿಲ್ಲ ಎಂದು ದೂರಿದ್ದಾರೆ. ವಾರ್ಷಿಕ ಬಜೆಟ್ ಮುನ್ನ ವಾಡಿಕೆಯಂತೆ ಉದ್ಯಮಿಗಳು, ವ್ಯಾಪಾರಿಗಳು ಅರ್ಥಶಾಸ್ತ್ರಜ್ಞರು ಮತ್ತು ಇತರ ರಂಗಗಳ ಮುಖಂಡರೊಂದಿಗೆ ಪ್ರಧಾನಿ ಮೋದಿ ಗುರುವಾರ ದೆಹಲಿಯಲ್ಲಿ ಸಭೆ ನಡೆಸಿದರು. ನೀತಿ ಆಯೋಗದ ಅಧಿಕಾರಿಗಳು ಸೇರಿದಂತೆ ೪೦ ಗಣ್ಯರೊಂದಿಗೆ ಸುಮಾರು ಎರಡು ಗಂಟೆಗಳ ಕಾಲ ನಡೆದ ಸಭೆಯಲ್ಲಿ ಪ್ರಧಾನಿ ಬಜೆಟ್ ಹಾಗೂ ದೇಶದ ಆರ್ಥಿಕತೆ ಸುಧಾರಣೆಗೆ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಉದ್ಯಮಿಗಳಿಂದ ಸಲಹೆ ಪಡೆದುಕೊಂಡರು. ಆದರೆ ಇಂತಹ ಮಹತ್ವದ ಸಭೆಯಲ್ಲಿ ಹಣಕಾಸು ಸಚಿವ ನಿರ್ಮಲಾ ಸೀತಾರಾಮನ್ ಪಾಲ್ಗೊಂಡಿರಲಿಲ್ಲ.