ಶಾಸಕರ ವೇತನ ಭತ್ಯೆ ಸಿಕ್ಕಾಪಟ್ಟೆ ಹೆಚ್ಚಳ ಪ್ರಶ್ನಿಸಿ ಶೀಘ್ರ ಪಿಐಎಲ್‌: ಗಡಾದ

PIL soon to challenge the hike in MLAs' salary allowance: Gada

ಶಾಸಕರ ವೇತನ ಭತ್ಯೆ ಸಿಕ್ಕಾಪಟ್ಟೆ ಹೆಚ್ಚಳ ಪ್ರಶ್ನಿಸಿ ಶೀಘ್ರ ಪಿಐಎಲ್‌: ಗಡಾದ 

ಬೆಳಗಾವಿ 18: ಅಧಿವೇಶನ ಸಮಯದಲ್ಲಿ ಶಾಸಕರಿಗೆ ಸರ್ಕಾರದಿಂದ ದಿನಭತ್ಯೆ ನೀಡಲಾಗುತ್ತಿದೆ. ನಿಯಮಾವಳಿಗಳಲ್ಲಿ ಅವಕಾಶ ಇಲ್ಲದೆ ಇದ್ದರೂ ಸಾರ್ವಜನಿಕರ ತೆರಿಗೆ ಹಣದಲ್ಲಿ ಊಟ ಉಪಹಾರ, ಚಹಾ ಕಾಫಿ ಅಲ್ಲದೆ ಕಿರುನಿದ್ರೆ ಚೇರ್ ನೀಡುವ ಸರ್ಕಾರದ ಕ್ರಮವನ್ನು ಮತ್ತು ಮನಬಂದಂತೆ ವೇತನ ಭತ್ಯೆಗಳನ್ನು ಹೆಚ್ಚಿಸಿಕೊಳ್ಳುತ್ತಿರುವ ಶಾಕರುಗಳ ನಡೆಯನ್ನು ಪ್ರಶ್ನಿಸಿ ಶೀಘ್ರ ರಾಜ್ಯ ಉಚ್ಚ ನ್ಯಾಯಾಲಯದಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಲಾಗುವುದು ಎಂದು ರಾಜ್ಯಪಾಲರಿಗೆ, ಎರಡು ಸದನಗಳ ಅಧ್ಯಕ್ಷರಿಗೆ ಮತ್ತು ಸರ್ಕಾರದ ಮುಖ್ಯ ಕಾರ್ಯದರ್ಶಿಗಳಿಗೆ ಪತ್ರ ಬರೆಯಲಾಗಿದೆ ಎಂದು ಆರ್‌ಟಿಆಯ್ ಕಾರ್ಯಕರ್ತ ಭೀಮಪ್ಪ ಗಡಾದ ತಿಳಿಸಿದರು.  

ಈ ಕುರಿತು ನಗರದ ಕನ್ನಡ ಸಾಹಿತ್ಯ ಭವನದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ  ಗಡಾದ ಅವರು ಅಧಿವೇಶನದಲ್ಲಿ ಊಟೋಪಚಾರದ ವ್ಯವಸ್ಥೆ ಮಾಡಲಾಗುತ್ತಿದೆ ಇದಕ್ಕೆ ಸಭಾಧ್ಯಕ್ಷರು ಉತ್ತರ ಕೊಡಬೇಕು.ಶಾಸಕರು ಪ್ರತಿ ತಿಂಗಳು ವೇತನ ಮತ್ತು ವಿವಿಧ ಭತ್ಯೆಗಳು ಸೇರಿದಂತೆ 1,45,000 ರೂ. ಕ್ಷೇತ್ರ ಪ್ರಯಾಣ ಭತ್ಯೆ60,000 ಸೇರಿ ತಿಂಗಳಿಗೆ ಒಟ್ಟು 2,05,000 ಪಡೆದುಕೊಳ್ಳುತ್ತಿದ್ದು, ಈ ವೇತನ ಭತ್ಯೆಗಳನ್ನು ಯಾವ ಆಧಾರದ ಮೇಲೆ ಹೆಚ್ಚು ಮಾಡಿಕೊಂಡಿದ್ದಾರೆ ಎಂದು ಪ್ರಶ್ನಿಸಿದ ಗಡಾದ ಅವರು ಸಾರ್ವಜನಿಕರ ತೆರಿಗೆ ಹಣದಲ್ಲಿ ಇವರು ವೇತನ ಭತ್ಯೆ ತೆಗೆದುಕೊಳ್ಳುತ್ತಿದ್ದಾರೆ ಇದಕ್ಕೆ ಕಡಿವಾಣ ಹಾಕದಿದ್ದರೆ ಕಾನೂನು ಹೋರಾಟ ಮಾಡುತ್ತೇನೆ ಎಂದು ಎಚ್ಚರಿಸಿದರು. 

ಸರ್ಕಾರಿ ಶಾಲೆಯಲ್ಲಿ ಮಕ್ಕಳ ಹಾಜರಾತಿ ಸಂಖ್ಯೆ ಹೆಚ್ಚಿಸಲು ಬಿಸಿಯೂಟ ನೀಡಲಾಗುತ್ತದೆ. ಆದರೆ ಅಧಿವೇಶನದಲ್ಲಿ ಈ ರೀತಿ ಊಟ ಕುರ್ಚಿ ಕೊಟ್ಟರೆ ಅದು ವಿಧಾನಸೌಧ ಆಗಲ್ಲ ಕನ್ನಡ ಶಾಲೆಯಾಗುತ್ತೆ ಇಂದು ಊಟ ಕೊಟ್ಟರೆ ಮಾತ್ರ ಬರುವ ಶಾಸಕರು ನಾಳೆ ಅರ್ಧ ತೊಲ ಬಂಗಾರ ಕೊಟ್ಟಾಗ ಮಾತ್ರ ಸದನಕ್ಕೆ ಬರುತ್ತಾರೆ. ಸದನಕ್ಕೆ ಗೈರಾಗುವ ಶಾಸಕರಿಗೆ 10 ಸಾವಿರ ದಂಡ ವಿಧಿಸುವ ತೀರ್ಮಾನ ಮಾಡಬೇಕು. ಇದರ ವಿರುದ್ಧ ಎರಡು ದಿನಗಳಲ್ಲಿ ಪಿಐಎಲ್ ಹಾಕುವೆ ಎಂದು ಗಡಾದ್ ಹೇಳಿದರು.  

ಪತ್ರಿಕಾಗೋಷ್ಠಿಯಲ್ಲಿ  ಭೀಮಪ್ಪಾ ಗಡಾದ ಅವರೊಂದಿಗೆ ಸಾಮಾಜಿಕ ಹೋರಾಟಗಾರರಾದ ಸಂಗಯ್ಯ ಹಿರೇಮಠ ಮತ್ತು ಸಿದ್ದಪ್ಪ ಬಳಿಗಾರ ಉಪಸ್ಥಿತರಿದ್ದರು.