ನವದೆಹಲಿ, ಏಪ್ರಿಲ್ 18,ಕೊರೊನಾ ವೈರಸ್ ಪರೀಕ್ಷೆಗೆ ಒಳಪಟ್ಟ ನಂತರ ದೇಶಾದ್ಯಂತ ವಲಸಿಗರನ್ನು ಅವರ ಮನೆಗೆ ಮರಳಲು ಅನುಮತಿ ನೀಡುವಂತೆ ಹಾಗೂ ಇದಕ್ಕಾಗಿ ಎಲ್ಲಾ ರಾಜ್ಯಗಳು ಪ್ರಯಾಣಕ್ಕೆ ಅಗತ್ಯವಾದ ವ್ಯವಸ್ಥೆಗಳನ್ನು ಮಾಡುವಂತೆ ಸರ್ಕಾರಕ್ಕೆ ನಿರ್ದೇಶನ ನೀಡುವಂತೆ ಕೋರಿ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆ (ಪಿಐಎಲ್) ಅನ್ನು ಶನಿವಾರ ಸುಪ್ರೀಂ ಕೋರ್ಟ್‌ನಲ್ಲಿ ಸಲ್ಲಿಸಲಾಗಿದೆ.
ಮಾಜಿ ಪ್ರಾಧ್ಯಾಪಕ ಜೆ.ಎಸ್.ಚೋಕರ್ ಮತ್ತು ಇತರರು ಈ ಅರ್ಜಿಯನ್ನು ಸಲ್ಲಿಸಿದ್ದಾರೆ. ಕೋವಿಡ್-19 ಹರಡುವುದನ್ನು ಪರಿಶೀಲಿಸಲು ಕೇಂದ್ರ ಸರ್ಕಾರ ಘೋಷಿಸಿರುವ ರಾಷ್ಟ್ರೀಯ ಲಾಕ್‌ಡೌನ್‌ನಿಂದಾಗಿ ದೇಶಾದ್ಯಂತ ವಲಸೆ ಕಾರ್ಮಿಕರು ಸಾಕಷ್ಟು ತೊಂದರೆ ಮತ್ತು ಇತರ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ ಎಂದು ಅರ್ಜಿಯಲ್ಲಿ ತಿಳಿಸಲಾಗಿದೆ.ವಲಸೆ ಕಾರ್ಮಿಕರು ಎದುರಿಸುತ್ತಿರುವ ಸಮಸ್ಯೆಗಳನ್ನು ಸುಪ್ರೀಂ ಕೋರ್ಟ್ ತ್ವರಿತಗತಿಯಲ್ಲಿ ಪರಿಹರಿಸಬೇಕು ಮತ್ತು ಈ ವಿಷಯದಲ್ಲಿ ಕೇಂದ್ರ ಸರ್ಕಾರಕ್ಕೆ ಸೂಕ್ತ ಆದೇಶ ಮತ್ತು ನಿರ್ದೇಶನ ನೀಡಬೇಕು ಎಂದು ಒತ್ತಾಯಿಸಲಾಗಿದೆ.ಈ ಅರ್ಜಿಯನ್ನು ಒಂದು ವಾರದಲ್ಲಿ ನ್ಯಾಯಾಲಯದ ಮುಂದೆ ಪಟ್ಟಿ ಮಾಡುವ ಸಾಧ್ಯತೆಯಿದೆ, ಏಕೆಂದರೆ ಈ ಪ್ರಕರಣವು ಬಹಳ ಮುಖ್ಯವಾದುದು ಮತ್ತು ತುರ್ತು ವಿಚಾರಣೆಯು ನಿಜಕ್ಕೂ ಅಗತ್ಯವಾಗಿದೆ ಎಂದು ಸುಪ್ರೀಂ ಕೋರ್ಟ್ ರಿಜಿಸ್ಟಿಯ ಮೂಲಗಳು ತಿಳಿಸಿವೆ.