ಬೆಂಗಳೂರು, ಆ 4 ಕೃಷ್ಣಾ ಕೊಳ್ಳ ಪ್ರದೇಶ ಹಾಗೂ ಉತ್ತರ ಕರ್ನಾಟಕದ ಕೆಲವೆಡೆ ಪ್ರವಾಹ ಪರಿಸ್ಥಿತಿ ಉಂಟಾಗಿದ್ದು ಸರ್ಕಾರ ತಕ್ಷಣ ಸಮರೋಪಾದಿಯಲ್ಲಿ ಪರಿಹಾರ ಮತ್ತು ರಕ್ಷಣಾ ಕಾರ್ಯ ಕೈಗೊಳ್ಳಬೇಕು. ಈ ಸಂದರ್ಭದಲ್ಲಿ ಮುಖ್ಯಮಂತ್ರಿಯವರು ಉದ್ದೇಶಿಸಿರುವ ನವದೆಹಲಿ ಪ್ರವಾಸವನ್ನು ರದ್ದುಪಡಿಸಿ, ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಬೇಕು ಎಂದು ಮಾಜಿ ಸಚಿವ ಹಾಗೂ ಕಾಂಗ್ರೆಸ್ ಶಾಸಕ ಎಚ್.ಕೆ.ಪಾಟೀಲ್ ಮುಖ್ಯಮಂತ್ರಿಯವರಿಗೆ ಪತ್ರ ಬರೆದಿದ್ದಾರೆ.
ಪ್ರವಾಹ ಪರಿಸ್ಥಿತಿಯನ್ನು ಗಂಭೀರವಾಗಿ ಪರಿಗಣಿಸಿ ಕಳವಳಕಾರಿ ಪರಿಸ್ಥಿತಿಯ ಹಿನ್ನೆಲೆಯಲ್ಲಿ ತಾವು ನವದೆಹಲಿಗೆ ಕೈಗೊಳ್ಳುತ್ತಿರುವ ಪ್ರವಾಸವನ್ನು ರದ್ದುಗೊಳಿಸಿ ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ, ಈ ಸಂಕಷ್ಟದ ಸಂದರ್ಭದಲ್ಲಿ ಪ್ರಧಾನಮಂತ್ರಿಯವರನ್ನು ಈ ಪ್ರದೇಶಗಳಿಗೆ ಭೇಟಿ ನೀಡುವಂತೆ ಒತ್ತಾಯಿಸಬೇಕು ಎಂದು ಯಡಿಯೂರಪ್ಪ ಅವರಿಗೆ ಪತ್ರದಲ್ಲಿ ಪಾಟೀಲ್ ಒತ್ತಾಯಿಸಿದ್ದಾರೆ.
ಯಾವುದೇ ಕಾಲಹರಣ ಮಾಡದೇ ಅತ್ಯಂತ ಅಗತ್ಯವಾಗಿ ತುರ್ತು ಪರಿಹಾರಕ್ಕಾಗಿ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ನಿರ್ಣಯ ಕೈಗೊಳ್ಳಲು ಕರ್ನಾಟಕ ವಿಪತ್ತು ನಿರ್ವಹಣಾ ಪ್ರಾಧಿಕಾರದ ಸಭೆ ತಕ್ಷಣ ಕರೆಯಬೇಕು ಎಂದು ಅವರು ಪತ್ರದಲ್ಲಿ ಒತ್ತಾಯಿಸಿದ್ದಾರೆ.
ಕೃಷ್ಣಾ ಕೊಳ್ಳದ ಪ್ರದೇಶದಲ್ಲಿ ವಿಶೇಷವಾಗಿ ಮಹಾರಾಷ್ಟ್ರ ಭಾಗದಲ್ಲಿ ಹಾಗೂ ಮುಂಬೈ ಕರ್ನಾಟಕದ ಬೆಳಗಾವಿ ಮತ್ತು ಸುತ್ತಮುತ್ತಲ ಪ್ರದೇಶಗಳಲ್ಲಿ ಭಾರೀ ಪ್ರಮಾಣದ ಮಳೆಯಾಗುತ್ತಿರುವುದರಿಂದ ಕೃಷ್ಣಾ ನದಿಗೆ ಅಪಾರ ಪ್ರಮಾಣದ ನೀರು ಹರಿಬಿಡಲಾಗಿದೆ. ಹಿಪ್ಪರಗಿ, ಆಲಮಟ್ಟಿ, ನಾರಾಯಣಪುರ, ಗೂಗಲ್ ಜಲಾಶಯಗಳು ತುಂಬಿ ತುಳುಕುತ್ತಿದ್ದು, ಜುರಾಲಾ ಹಿನ್ನೀರಿನಿಂದಲೂ ಸಹ ಕರ್ನಾಟಕದ ಗಡಿಭಾಗದ ಬಹುಪಾಲು ಪ್ರದೇಶ ಗಂಭೀರವಾದ ಪ್ರವಾಹ ಪರಿಸ್ಥಿತಿ ಎದುರಿಸುತ್ತಿದೆ. ಇಂದು ಕೃಷ್ಣಾ ನದಿಗೆ 2.3 ಲಕ್ಷ ಕ್ಯೂಸೆಕ್ಸ್ ನೀರು ಬಿಡುಗಡೆ ಮಾಡಿದ್ದು, ಕಳೆದ ಒಂದು ವಾರದಿಂದ 1 ಲಕ್ಷಕ್ಕೂ ಹೆಚ್ಚು ಕ್ಯೂಸೆಕ್ಸ್ ನೀರು ವಿವಿಧ ಜಲಾಶಯಗಳಿಂದ ಬಿಡುಗಡೆಯಾಗಿರುವುದರಿಂದ ಕಳವಳಕಾರಿಯಾದ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಅವರು ತಿಳಿಸಿದ್ದಾರೆ.
ಕೃಷ್ಣಾ ಹಾಗೂ ಉಪನದಿಗಳು ಉಕ್ಕಿ ಹರಿಯುತ್ತಿರುವುದರಿಂದ ನದಿ ತೀರದ ಹಲವು ವಸತಿ ಪ್ರದೇಶಗಳಿಂದ ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಬೇಕಾಗುತ್ತದೆ. ಬೆಳವಾಗಿ ಜಿಲ್ಲೆಯ ಚಿಕ್ಕೋಡಿ ಉಪವಿಭಾಗದ 37 ಗ್ರಾಮಗಳು ಪ್ರವಾಹದಿಂದಾಗಿ ತೀವ್ರವಾಗಿ ಬಾಧಿತವಾಗಿದ್ದು, 39 ಗ್ರಾಮಗಳು ಭಾಗಶಃ ಬಾಧಿತವಾಗಿವೆ. ಚಿಕ್ಕೋಡಿ ತಾಲೂಕಿನ ಕಲ್ಲೋಳ, ಯಡೂರ,ಇಂಗಳಿ, ಚಂದೂರ, ಮಾಂಜರಿ, ಬಾರವಾಡ ಹಾಗೂ ಹನ್ನರಗಿ, ರಾಯಬಾಗ ತಾಲೂಕು ಹಳೇದಿಗ್ಗೇವಾಡಿ, ಗುಂಡವಾಡ, ಶಿರಗೂರ, ಖೇಮಲಾಪುರ, ಸಿದ್ದಾಪುರ, ಅಥಣಿ ತಾಲೂಕು-ಮೊಳವಾಡ, ಕುಸನಾಳ, ಕೃಷ್ಣಾ ಕಿತ್ತೂರ, ಬಣಜವಾಡ, ತೀರ್ಥ, ನದಿಇಂಗಳಗಾಂವ್, ದರೂರ, ಕವಟಕೊಪ್ಪ, ಶೇಗುಣಶಿ, ಹುಲಬಾಳಿ, ಅವರಖೋಡ, ನಾಗನೂರ, ಪಿ.ಕೆ, ಸತ್ತಿ, ಮಹಿಷವಾಡಗಿ, ಜನವಾಡ, ಸವದಿದರ್ಗಾ, ಶಿರಹಟ್ಟಿ, ಕಾತ್ರಾಳ, ಝಂಜರವಾಡ, ನಂದೇಶ್ವರ, ಸಪ್ತಸಾಗರ, ಮಂಗಾವತಿ, ಜುಗೂಳ, ಶಹಾಪೂರ, ಗ್ರಾಮಗಳಲ್ಲಿ ಗಂಭೀರವಾದ ಪರಿಸ್ಥಿತಿ ಇದ್ದು, ಪರಿಹಾರ ಕಾರ್ಯಕ್ಕೆ ಸಮರೋಪಾದಿಯಲ್ಲಿ ಸನ್ನದ್ಧವಾಗಿರುವ ಅವಶ್ಯಕತೆ ಇದೆ ಎಂದು ಅವರು ಒತ್ತಾಯಿಸಿದ್ದಾರೆ.
ಮುಧೋಳ ತಾಲೂಕಿನ ಘಟಪ್ರಭಾ ನದಿ ತೀರದ ಢವಳೇಶ್ವರ, ನಂದಗಾಂವ್ ಹಾಗೂ ಮಿಜರ್ಿ ಸೇತುವೆಗಳು ಮುಳುಗಿದ್ದು, ಸಂಚಾರ ಸ್ಥಗಿತಗೊಂಡಿವೆ. ಜಮಖಂಡಿ ತಾಲೂಕಿನ ಮುತ್ತೂರು ಕಂಕನವಾಡಿ ಗ್ರಾಮಗಳು ಪ್ರವಾಹಕ್ಕೆ ತುತ್ತಾಗುವ ಸಾಧ್ಯತೆಯಿದ್ದು, ಮುತ್ತೂರು-ತುಬಚಿ ಸಂಪರ್ಕ ರಸ್ತೆ ಮುಳುಗಿರುವುದರಿಂದ ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ಹಾಗೂ ಗ್ರಾಮಸ್ಥರ ಸಂಚಾರಕ್ಕೆ ವಿಶೇಷ ದೋಣಿಗಳನ್ನು ವ್ಯವಸ್ಥೆಗೊಳಿಸಬೇಕಿದೆ ಎಂದು ಅವರು ಆಗ್ರಹಿಸಿದ್ದಾರೆ.
ರಾಯಚೂರು ಜಿಲ್ಲೆಯ ಲಿಂಗಸೂರು ತಾಲೂಕಿನ ಶೀಲಹಳ್ಳಿ ಸೇತುವೆ ಕಳೆದ 5 ದಿನಗಳಿಂದ ನೀರಿನಲ್ಲಿ ಮುಳುಗಿದ್ದು, ಕಲಕಲಗಡ್ಡೆ ಮತ್ತು ಕಡದರಗಡ್ಡೆ ಸೇರಿದಂತೆ ಹಲವು ನಡುಗಡ್ಡೆ ಗ್ರಾಮಗಳ ಜನತೆ ಸಂಪರ್ಕ ಕಳೆದುಕೊಂಡಿದ್ದಾರೆ. ಹೂವಿನಹೆಡಗಿ ಸೇತುವೆಯು ಜಲಾವೃತವಾಗಿದ್ದು, ದೇವದುರ್ಗ ಮತ್ತು ಕಲಬುರ್ಗ್ ನಡುವಿನ ಸಂಚಾರ ಸ್ಥಗಿತಗೊಂಡಿದೆ. ದೇವದುರ್ಗ ತಾಲೂಕಿನ ದೇವದುರ್ಗ ಬಳಿಯ ಗಡ್ಡೆಗೂಳಿ ಬಸವಣ್ಣ ದೇವಾಲಯ ಹಾಗೂ ಕೊಪ್ಪರ ಲಕ್ಷ್ಮೀ ನರಸಿಂಹ ದೇವಸ್ಥಾನ ಜಲಾವೃತಗೊಂಡಿದ್ದು, ಆಯಾ ಗ್ರಾಮಸ್ಥರು ತೀವ್ರವಾದ ಪ್ರವಾಹ ಪರಿಸ್ಥಿತಿಯನ್ನು ಎದುರಿಸುತ್ತಿದ್ದಾರೆ ಎಂದು ಅವರು ಪತ್ರದಲ್ಲಿ ತಿಳಿಸಿದ್ದಾರೆ.
ಇಷ್ಟೆಲ್ಲಾ ಗಂಭೀರ ಪರಿಸ್ಥಿತಿ ಇದ್ದರೂ ಸಮರೋಪಾದಿಯಲ್ಲಿ ತುರ್ತ ಪರಿಹಾರ ಕಾರ್ಯಗಳಿಗೆ ಸನ್ನದ್ಧವಾಗಿರಬೇಕಾದ ನಮ್ಮ ಆಡಳಿತ ಯಂತ್ರ ಪ್ರವಾಹ ಪರಿಸ್ಥಿತಿಯನ್ನು ಗಂಭೀರವಾಗಿ ಎದುರಿಸುತ್ತಿಲ್ಲ. ಎನ್ಡಿಆರ್ ಎಫ್ ತಂಡ ಮತ್ತು ದೋಣಿ ರಕ್ಷಣಾ ತಂಡಗಳನ್ನು ಸನ್ನದ್ಧವಾಗಿಡಬೇಕಾಗಿದೆ. ತುರ್ತ ಸಂದರ್ಭಗಳಲ್ಲಿ ರಕ್ಷಣೆಗೆ ಇಳಿಯಬೇಕಾದ ಕ್ರಮಗಳು ಅತ್ಯವಶ್ಯಕವಾಗಿವೆ. ಪ್ರವಾಹ ಸ್ಥಿತಿಯನ್ನು ಗಂಭೀರವಾಗಿ ಪರಿಗಣಿಸಿ ಕಳವಳಕಾರಿ ಪರಿಸ್ಥಿತಿಯ ಹಿನ್ನೆಲೆಯಲ್ಲಿ ತಾವು ನವದೆಹಲಿಗೆ ಕೈಗೊಳ್ಳುತ್ತಿರುವ ಪ್ರವಾಸವನ್ನು ರದ್ದುಗೊಳಿಸಿ ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ, ಈ ಸಂಕಷ್ಟದ ಸಂದರ್ಭದಲ್ಲಿ ಪ್ರಧಾನಮಂತ್ರಿಯವರನ್ನು ಈ ಪ್ರದೇಶಗಳಿಗೆ ಭೇಟಿ ನೀಡುವಂತೆ ಮಾಡಬೇಕು ಎಂದು ಎಚ್.ಕೆ.ಪಾಟೀಲ್ ಪತ್ರದಲ್ಲಿ ಒತ್ತಾಯಿಸಿದ್ದಾರೆ.