ಹಾಂಕಾಂಗ್, ನ 11 : ಹಾಂಕಾಂಗ್ ನಲ್ಲಿ ಅಂಗಡಿ ಮುಂಗಟ್ಟುಗಳನ್ನು ಬಲವಂತವಾಗಿ ಮುಚ್ಚಿಸಿ, ಮಾಲ್ ಗಳಿಗೆ ಹಾನಿಯುಂಟು ಮಾಡಿ, ಮೆಟ್ರೋ ಸೇವೆಗಳಿಗೆ ಅಡ್ಡಿಪಡಿಸಿದ ಕಾರಣ 80 ಕ್ಕೂ ಹೆಚ್ಚು ಪ್ರತಿಭಟನಾಕಾರರನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಗುಂಪು ಸೇರುವಿಕೆ, ಅಕ್ರಮ ಶಸ್ತ್ರಾಸ್ತ್ರ ಹೊಂದಿದೆ ಆರೋಪದಡಿ ಭಾನುವಾರ ರಾತ್ರಿ ವೇಳೆಗೆ 88 ಜನರನ್ನು ಬಂಧಿಸಲಾಗಿದೆ ಎಂದು ಅವರು ಹೇಳಿದ್ದಾರೆ. ಪ್ರತಿಭಟನಾಕಾರರು ವ್ಯವಸ್ಥಿತವಾಗಿ ಹಾನಿಗೊಳಿಸುವ ಕಾರ್ಯಕ್ಕೆ ಮುಂದಾಗಿದ್ದರು. ಅವರು ಅನೇಕ ಅಂಗಡಿ ಮುಂಗಟ್ಟುಗಳನ್ನು ಬಲವಂತವಾಗಿ ಮುಚ್ಚಿಸಿದ್ದರು, ಮಾಲ್ ಗಳಿಗೆ ಹಾನಿಯುಂಟು ಮಾಡಿದ್ದರು, ರೆಸ್ಟೊರೆಂಟ್ ವೊಂದಕ್ಕೆ ನುಗ್ಗಿ ಗಲಭೆ ನಡೆಸಿ ಮೆಟ್ರೋ ಸಂಚಾರಕ್ಕೆ ಅಡ್ಡಿಪಡಿಸಿದ್ದಾರೆ ಎಂದು ಪೊಲೀಸರು ಆರೋಪಿಸಿದ್ದಾರೆ. ಅಲ್ಲದೇ ಪ್ರತಿಭಟನಾಕಾರರು ಪೊಲೀಸರ ಮೇಲೂ ದಾಳಿ ನಡೆಸಿದ್ದಾರೆ ಎಂದು ಪೊಲೀಸರ ಹೇಳಿಕೆ ತಿಳಿಸಿದೆ.