ಭಾರತದಲ್ಲಿ 2,300 ದಾಟಿದ ಕೊವಿದ್‌-19 ಸೋಂಕಿತ ಪ್ರಕರಣಗಳು: 156 ಮಂದಿ ಗುಣಮುಖ

ನವದೆಹಲಿ, ಏಪ್ರಿಲ್ 3 (ಯುಎನ್‌ಐ) ಭಾರತದಲ್ಲಿ ಗುರುವಾರ ಸಂಜೆಯಿಂದ 228 ಹೊಸ ಪ್ರಕರಣಗಳು ವರದಿಯಾಗುವುದರೊಂದಿಗೆ ಕೊವಿದ್-19 ಸೋಂಕು ಪ್ರಕರಣಗಳ ಸಂಖ್ಯೆ ಶುಕ್ರವಾರ ಬೆಳಿಗ್ಗೆ ವೇಳೆಗೆ 2,300 ದಾಟಿದೆ.   ಆರೋಗ್ಯ ಸಚಿವಾಲಯದ ಪ್ರಕಾರ, ಗುರುವಾರ ಸಂಜೆ ವೇಳೆಗೆ ಒಟ್ಟು 2,069 ಪ್ರಕರಣಗಳು ದೃಢಪಟ್ಟಿದ್ದವು. ಸಾವಿನ ಸಂಖ್ಯೆ ಈವರೆಗೆ ಒಟ್ಟು 56 ಕ್ಕೆ ಏರಿದೆ.  ದೇಶದಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ 2,088 ರಷ್ಟಿದೆ ಎಂದು ಸಚಿವಾಲಯ ತಿಳಿಸಿದೆ.ಈ ಮಧ್ಯೆ, ಇದುವರೆಗೆ 156 ಜನರನ್ನು ಗುಣಪಡಿಸಲಾಗಿದ್ದು, ಇವರಲ್ಲಿ ಒಬ್ಬ ವ್ಯಕ್ತಿ ವಲಸೆ ಬಂದವರಾಗಿದ್ದಾರೆ ಎಂದು ಸರ್ಕಾರದ ಅಂಕಿ-ಅಂಶಗಳು ತಿಳಿಸಿವೆ.
ತಬ್ಲೀಘಿ ಜಮಾತ್‌ ಪ್ರಕರಣಕ್ಕೆ ಸಂಬಂಧಿಸಿದ ಒಟ್ಟು 9,000 ವ್ಯಕ್ತಿಗಳು ಮತ್ತು ಅವರು ಸಂಪರ್ಕ ಹೊಂದಿದ್ದವರನ್ನು ಗುರುತಿಸಿ ಸಂಪರ್ಕತಡೆ ಕೇಂದ್ರಗಳಿಗೆ ಕಳುಹಿಸಲಾಗಿದೆ. ದೇಶಾದ್ಯಂತ ಕೊವಿದ್‍-19 ಸೋಂಕಿನ ಪ್ರಮುಖ ಮೂಲವಾಗಿ ಈ ಗುಂಪು ಹೊರಹೊಮ್ಮಿರುವ ಕಾರಣ ಅವರ ಸಂಪರ್ಕಗಳನ್ನು ಪತ್ತೆ ಮಾಡುವ ಪ್ರಯತ್ನಗಳನ್ನು ನಡೆಸಲಾಗಿದೆ ಎಂದು ಗೃಹ ಸಚಿವಾಲಯದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.‘ಒಟ್ಟು 9,000 ತಬ್ಲೀಘಿ ಜಮಾತ್ ಕಾರ್ಯಕರ್ತರು ಮತ್ತು ಅವರು ಹೊಂದಿದ ಸಂಪರ್ಕಗಳನ್ನು ದೇಶಾದ್ಯಂತ ಗುರುತಿಸಲಾಗಿದೆ. ಇವರೆಲ್ಲರನ್ನೂ ಸಂಪರ್ಕತಡೆಗೆ ಕಳುಹಿಸಲಾಗಿದೆ. ಈ ಪೈಕಿ 1,306 ಮಂದಿ ವಿದೇಶಿ ಪ್ರಜೆಗಳಾಗಿದ್ದಾರೆ ಎಂದು ವಿದೇಶಾಂಗ ವ್ಯವಹಾರಗಳ ಜಂಟಿ ಕಾರ್ಯದರ್ಶಿ ಪುನ್ಯಾ ಸಲೀಲಾ ಶ್ರೀವಾಸ್ತವ ಹೇಳಿದ್ದಾರೆ.ಕಳೆದ ತಿಂಗಳು ನಿಜಾಮುದ್ದೀನ್ ಮಾರ್ಕಾಜ್‍ನಲ್ಲಿ ತಬ್ಲಿಘಿ ಜಮಾತ್ ಆಯೋಜಿಸಿದ್ದ ಧಾರ್ಮಿಕ ಸಭೆಯಲ್ಲಿ ಇವರೆಲ್ಲ ಪಾಲ್ಗೊಂಡಿದ್ದರು.  ಇದು ದೇಶಾದ್ಯಂತ ಕೊರೊನಾವೈರಸ್ ಪ್ರಕರಣಗಳಲ್ಲಿ ದಿಢೀರ್ ಹೆಚ್ಚಳಕ್ಕೆ ಕಾರಣವಾಯಿತು.ರಾಷ್ಟ್ರ ರಾಜಧಾನಿಯಲ್ಲಿನ ಮಾರ್ಕಾಜ್ ನಿಜಾಮುದ್ದೀನ್  ಕೊವಿದ್-19 ಪ್ರಕರಣಗಳ ಕೇಂದ್ರಬಿಂದುವಾಗಿ ಮಾರ್ಪಟ್ಟಿದೆ ಎಂದು ಸಚಿವಾಲಯ ತಿಳಿಸಿದೆ. ಕಳೆದ ತಿಂಗಳು ಇಲ್ಲಿ ನಡೆದ ಧಾರ್ಮಿಕ ಕೂಟದಲ್ಲಿ ಭಾಗವಹಿಸಿದ್ದ ಅನೇಕ ಜನರು ಮಾರಣಾಂತಿಕ ವೈರಸ್‌ಗೆ ತುತ್ತಾಗಿರುವುದು ಕಂಡುಬಂದಿದೆ.
ರಾಜ್ಯವಾರು, ಮೊದಲ ಸ್ಥಾನದಲ್ಲಿರುವ ಮಹಾರಾಷ್ಟ್ರದಲ್ಲಿ 335 ಪ್ರಕರಣಗಳು ದೃಢಪಟ್ಟು, 13 ಸಾವುಗಳು ಸಂಭವಿಸಿವೆ.  ನಂತರದ ಸ್ಥಾನದಲ್ಲಿರುವ ತಮಿಳುನಾಡಿನಲ್ಲಿ 309 ಪ್ರಕರಣಗಳು, ಕೇರಳದಲ್ಲಿ 286 ಪ್ರಕರಣಗಳು ದೃಢಪಟ್ಟಿದ್ದು, ಇಬ್ಬರು ಸಾವನ್ನಪ್ಪಿದ್ದಾರೆ.
ದೆಹಲಿಯಲ್ಲಿ ಸದ್ಯ ಕೊವಿದ್-19 ಸೊಂಕಿನ ಪ್ರಕರಣಗಳ ಸಂಖ್ಯೆ 219ಕ್ಕೆ ಏರಿದೆ. ರಾಷ್ಟ್ರ ರಾಜಧಾನಿಯಲ್ಲಿ ಇದುವರೆ ನಾಲ್ವರು ಸಾವನ್ನಪ್ಪಿದ್ದಾರೆ. ಇನ್ನು, ಕರ್ನಾಟಕದಲ್ಲಿ 124, ಉತ್ತರಪ್ರದೇಶದಲ್ಲಿ 113 ಹಾಗೂ ರಾಜಸ್ಥಾನದಲ್ಲಿ 113 ಪ್ರಕರಣಗಳು ದೃಢಪಟ್ಟಿವೆ.