ಲೋಕದರ್ಶನ ವರದಿ
ಶಿರಹಟ್ಟಿ 17: ರೇಷ್ಮೆ ಕೃಷಿ ರೈತರು ಸಾವಯವ ಕೃಷಿ ಪದ್ದತಿ ಅಳವಡಿಸಿಕೊಂಡು, ಕಡಿಮೆ ನೀರು, ಕಡಿಮೆ ಖರ್ಚಿನಲ್ಲಿ ಹೆಚ್ಚು ಇಳುವರಿ ಪಡೆದು, ಗುಣಮಟ್ಟದ ಬೆಳೆ ಬೆಳೆಯುವುದರ ಮೂಲಕ ಉತ್ತಮ ಆದಾಯ ಪಡೆದು, ಆರ್ಥಿಕವಾಗಿ ಸುಸ್ಥಿರ ಬದುಕು ಕಟ್ಟಿಕೊಳ್ಳಬೇಕು ಎಂದು ರಾಯಪೂರದ ರೇಷ್ಮೆ ತರಬೇತಿ ಸಂಸ್ಥೆಯ ಪ್ರಾಶುಂಪಾಲ ಮಲ್ಲಕಾರ್ಜುನ ಸ್ವಾಮಿ ಹೇಳಿದರು.
ಪಟ್ಟಣದ ನಿಂಗಪ್ಪ ತುಳಿ ಅವರ ತೋಟದಲ್ಲಿ ಶುಕ್ರವಾರ ರೇಷ್ಮೆ ಇಲಾಖೆ ವತಿಯಿಂದ ರೇಷ್ಮೆ ಬೆಳೆಗಾರರ ರೈತರಿಂದ ರೈತರಿಗೆ ಒಂದು ದಿನದ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಪ್ರಸ್ತುತ ವರ್ಷ ಅತೀವೃಷ್ಟಿಯಿಂದ ಬಹಳಷ್ಟು ರೈತರು ಕಂಗಾಲಾಗಿದ್ದಾರೆ. ಹೀಗಾಗಿ ರೈತರು ಆತ್ಮಸ್ಥೈರ್ಯ ಕಳೆದುಕೊಳ್ಳದೇ ತಂತ್ರಜ್ಞಾನ ಹಾಗೂ ಕಡಿಮೆ ಸಮಯದಲ್ಲಿ ಹೆಚ್ಚು ಇಳುವರಿ ಬರುವಂತಹ ಕೃಷಿ ಪದ್ಧತಿ ಅಳವಡಿಸಿ, ಹೆಚ್ಚು ಪ್ರಗತಿ ಸಾಧಿಸಬೇಕು, ಅಲ್ಲದೇ ತಾಲೂಕಿನಲ್ಲಿ ಸುಮಾರು 1507 ಎಕರೆ ಪ್ರದೇಶದಷ್ಟು ರೇಷ್ಮೆ ಬೆಳೆ ಬೆಳೆಯಲಾಗುತ್ತಿದ್ದು, ಇನ್ನೂ ಹೆಚ್ಚಿನ ರೈತರು ಸರ್ಕಾರದ ಸೌಲಭ್ಯಗಳನ್ನು ಪಡೆದುಕೊಂಡು, ಆಥರ್ಿಕ ಪ್ರಗತಿಯತ್ತ ಸಾಗಬೇಕು ಎಂದು ಹೇಳಿದರು.
ನಂತರ ಪ್ರಗತಿಪರ ರೈತ ನಿಂಗಪ್ಪ ಕರಿಗಾರ ಮಾತನಾಡಿ. ರೇಷ್ಮೆ ಬೆಳೆಯು ಲಾಭದಾಯ ಕೃಷಿಯಾದ್ದರಿಂದ ಬಹಳಷ್ಟು ರೈತರು ರೇಷ್ಮೆ ಬೆಳೆಯನ್ನು ಅವಲಂಬಿಸಿದ್ದಾರೆ. ಹೀಗಾಗಿ ಅಧಿಕಾರಿಗಳು ರೈತರಿಗೆ ಸರ್ಕಾರದ ಸರ್ವ ಸೌಲಭ್ಯಗಳನ್ನು ಕಲ್ಪಿಸಬೇಕು. ರೇಷ್ಮೆ ಮನೆ ಕಟ್ಟಲು ಹೆಚ್ಚಿನ ಸಬ್ಸಿಡಿ ನೀಡಬೇಕು, ರೇಷ್ಮೆ ಗೂಡಿಗೆ ಉತ್ತಮ ದರ ಸಿಗುವಂತೆ ಮಾಡಬೇಕು, ಗುಣಮಟ್ಟದ ಕೀಟನಾಶಕ ಪುಡಿಯನ್ನು ವಿತರಿಸಬೇಕು, ಗೂಡಿನ ಪ್ರೋತ್ಸಾಹಧನ ಹೆಚ್ಚಿಸಬೇಕು, ಹುಳಗಳ ಸಂರಕ್ಷಣೆ ದೃಷ್ಠಿಯಿಂದ ರೈತರಿಗೆ ಹಲವು ಸಲಹೆಗಳನ್ನು ನೀಡಬೇಕು, ರೈತರ ಸಮಸ್ಯೆಗಳಿಗೆ ಶೀಘ್ರದಲ್ಲಿ ಸ್ಪಂದಿಸುವುದರ ಮೂಲಕ ರೈತರ ಹಿತಕಾಯಬೇಕು ಎಂದು ಅಧಿಕಾರಿಗಳಿಗೆ ಸಲಹೆ ನೀಡಿದರು.
ರೇಷ್ಮೆ ಇಲಾಖೆ ಉಪ ನಿರ್ದೇಶಕ ಸಿ.ಎಚ್. ಮುದಗಲ್ಲ್, ಎಸ್.ಎಚ್. ಅರಹುಣಸಿ, ಎಫ್.ಜಿ. ವೀರನಗೌಡ, ಟಿ.ಎಸ್. ಜವಳಿ, ಬಸವರಾಜ ಸಾಸಲವಾಡ, ಎಸ್.ಎಚ್. ಚಂಗಳೆ, ವಿನಾಯಕ್ ಹಣಗಿ, ವೀರಣ್ಣ ಮಜ್ಜಗಿ, ಫಕ್ಕೀರೇಶ ಕರಿಗಾರ ಸೇರಿದಂತೆ ಸುತ್ತಮುತ್ತಲಿನ ರೈತರು ಉಪಸ್ಥಿತರಿದ್ದರು.