ಮೇ 1ರಿಂದ ಪಡಿತರ ಅಕ್ಕಿ ಜೊತೆ ತೊಗರಿ ಬೇಳೆ ನೀಡಲು ಆದೇಶ

ಬೆಂಗಳೂರು, ಏ‌.16,ಕೊರೊನಾ  ಲಾಕ್ ಡೌನ್ ಅವಧಿ ಮುಂದುವರೆದಿರುವುದರಿಂದ ರಾಜ್ಯ ಸರ್ಕಾರ ಏಪ್ರಿಲ್ ಮತ್ತು ಮೇ ತಿಂಗಳ  ಅಕ್ಕಿ ಜೊತೆಗೆ ತೊಗರಿ ಬೇಳೆ ವಿತರಿಸಲು ಆದೇಶ ಹೊರಡಿಸಲಾಗಿದೆ.ಕೇಂದ್ರ ಸರ್ಕಾರ  ಏಪ್ರಿಲ್, ಮೇ, ಜೂನ್ ತಿಂಗಳ ಅಕ್ಕಿ ಹಾಗೂ ತೊಗರಿ ಬೇಳೆಯನ್ನು ಬಿಡುಗಡೆ ಮಾಡಿದ್ದು,  ರಾಜ್ಯದ ಅನ್ನಭಾಗ್ಯ ಫಲಾನುಭವಿಗಳಿಗೆ ಮೇ 1ರಿಂದ ಪ್ರತಿ ತಿಂಗಳಿಗೆ 5 ಕೆಜಿ ಅಕ್ಕಿ  ಹಾಗೂ ಒಂದು ಕೆಜಿ ತೊಗರಿ ಬೇಳೆಯನ್ನು ಉಚಿತವಾಗಿ ನೀಡುವಂತೆ ಆದೇಶ ಹೊರಡಿಸಲಾಗಿದೆ. ಮೇ  ಮೊದಲನೇ ತಾರೀಕಿನಿಂದ ಫಲಾನುಭವಿಗಳಿಗೆ ಎರಡು ತಿಂಗಳ ಪಡಿತರವನ್ನು ಏಕಕಾಲಕ್ಕೆ  ವಿತರಿಸಲು ಸೂಚಿಸಲಾಗಿದ್ದು, ಅದಕ್ಕಾಗಿ ಏಪ್ರಿಲ್ 23 ರೊಳಗೆ ಎಲ್ಲ ಆಹಾರ ಪದಾರ್ಥಗಳು  ಗೋಡೌನ್ ಗಳಿಗೆ ತಲುಪಿಸಲು ಸಾರಿಗೆ ವ್ಯವಸ್ಥೆ,  ಕೂಲಿ ಕಾರ್ಮಿಕರಿಗೆ ಪಾಸ್  ವ್ಯವಸ್ಥೆಯನ್ನು ಮಾಡುವಂತೆ ಸೂಚಿಸಲಾಗಿದೆ. ಅಲ್ಲದೆ ಏಪ್ರಿಲ್ 25 ರೊಳಗೆ ಎಲ್ಲ  ನ್ಯಾಯಬೆಲೆ ಅಂಗಡಿಗಳಿಗೆ ತಲುಪಿಸಲು ಕ್ರಮ ಕೈಗೊಳ್ಳಲು ಸೂಚಿಸಲಾಗಿದೆ. ಪಡಿತರ  ಅಂಗಡಿಯವರು ಕೊರೊನಾ ಕುರಿತು ಕೇಂದ್ರ ಸರ್ಕಾರ ನೀಡಿರುವ ಮಾರ್ಗಸೂಚಿಯಂತೆ  ಫಲಾನುಭವಿಗಳಿಗೆ ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ನೋಡಿಕೊಳ್ಳಬೇಕು ಹಾಗೂ ತೂಕದಲ್ಲಿ  ಮೋಸ ಮಾಡಿದರೆ ನ್ಯಾಯಬೆಲೆ ಅಂಗಡಿಯವರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳುವುದಾಗಿ  ಆದೇಶದಲ್ಲಿ ತಿಳಿಸಲಾಗಿದೆ.