ಬಳ್ಳಾರಿ 07: ರಾಜ್ಯ ಸರ್ಕಾರವು ಸರ್ಕಾರಿ ಶಾಲೆ ಮುಚ್ಚುವ ’ಹಬ್ ಆಂಡ್ ಸ್ಪೋಕ್’ ಜಾರಿಗೊಳಿಸಿದಾಗಿನಿಂದಲೂ ರಾಜ್ಯದ ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಈ ಶಾಲೆ ಮುಚ್ಚುವ ಹುನ್ನಾರವನ್ನು ತೀರ್ವವಾಗಿಯೇ ಪ್ರತಿರೋಧಿಸುತ್ತಿದ್ದಾರೆ. ಮೊದಲ ಹಂತದಲ್ಲಿ 6000ಕ್ಕೂ ಅಧಿಕ ಸರ್ಕಾರಿ ಶಾಲೆ ಮುಚ್ಚಲು ಹೊರಟಿರುವ ಸರ್ಕಾರದ ಬಡ-ವಿದ್ಯಾರ್ಥಿ- ಜನ ವಿರೋಧಿ ನಿಲುವಿಗೆ ಎ.ಐ.ಡಿ.ಎಸ್.ಓ ಹಾಗೂ ರಾಜ್ಯದ ಜನತೆಯ ಪ್ರತಿರೋಧಕ್ಕೆ ಕಿವಿಗೊಡದೆ ಮಾದರಿ ಶಾಲೆಗಳ ಹೆಸರಿನಲ್ಲಿ ರಾಜ್ಯದ ಸಾವಿರಾರು ಶಾಲೆಗಳನ್ನು ಮುಚ್ಚಲು ಹೊರಟಿರುವ ಈ ಬಜೆಟ್ಟನ್ನು ರಾಜ್ಯದ ವಿದ್ಯಾರ್ಥಿಗಳು ತಿರಸ್ಕರಿಸುತ್ತಾರೆ.
500 ಪಬ್ಲಿಕ್ ಶಾಲೆಗಳ ನಿರ್ಮಾಣ ಸ್ವಾಗತಾರ್ಹವಾಗಿದ್ದರೂ, ಈಗಾಗಲೇ ಇರುವ ಶಾಲೆಗಳನ್ನು ಮುಚ್ಚಲು ಇದು ಸಮಜಾಯಿಶಿ ಅಲ್ಲ! ಬೆನ್ನಿಗೆ ಚೂರಿ ಇರಿಯುವ ಸರ್ಕಾರದ ನಡೆಯನ್ನು ರಾಜ್ಯದ ವಿದ್ಯಾರ್ಥಿಗಳು ಒಪ್ಪುವುದಿಲ್ಲ. ರಾಜ್ಯಾದ್ಯಂತ 59,000 ಕ್ಕೂ ಹೆಚ್ಚು ಶಿಕ್ಷಕರ ಹುದ್ದೆ ಖಾಲಿ ಇದ್ದು, ಕೇವಲ 5267 ಹುದ್ದೆಗಳ ಭರ್ತಿಯು ಅವಶ್ಯಕತೆಗೆ ಸಮರ್ಕವಾಗಿಲ್ಲ. ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿಯೂ ಇರುವ ಉಪನ್ಯಾಸಕರ ಕೊರತೆಯನ್ನು ಈ ಬಜೆಟ್ ನೀಗಿಸಿಲ್ಲ. ಕರ್ನಾಟಕದ ಲಕ್ಷಾಂತರ ಅರ್ಹ ವಿದ್ಯಾರ್ಥಿಗಳಿಗೆ ಕಳೆದ ಎರಡು ವರ್ಷಗಳಿಂದ ಶಿಷ್ಯವೇತನ ಬಂದಿಲ್ಲ ಎಂಬ ವಿದ್ಯಾರ್ಥಿಗಳ ದೂರು ಸರ್ಕಾರದ ಕಿವಿ ತಲುಪಿದ್ದೂ, ಬಜೆಟ್ ನಲ್ಲಿ ವಿದ್ಯಾರ್ಥಿಗಳ ಶಿಷ್ಯವೇತನಕ್ಕೆ ಸಮರ್ಕ ಹಣ ನೀಡದೇ ಇರುವುದನ್ನು ಎ.ಐ.ಡಿ.ಎಸ್.ಓ ವಿದ್ಯಾರ್ಥಿ ಸಂಘಟನೆ ಖಂಡಿಸುತ್ತದೆ. ರಾಜ್ಯಾದ್ಯಂತ ಬೆಳೆದ ಜನ ಹೋರಾಟದ ಫಲಶ್ರುತಿಯಾಗಿ ಕಡು ಶಿಕ್ಷಣ ವಿರೋಧಿ ಎನ್‌ಈಪಿ-2020ನ್ನು ಹಿಂಪಡೆದಿರುವ ರಾಜ್ಯ ಸರ್ಕಾರವು, ಶಾಲಾ ಹಂತದಲ್ಲೇ ಕೌಶಲ್ಯ ಶಿಕ್ಷಣವನ್ನು ಉತ್ತೇಜಿಸುವ ಎನ್‌ಈಪಿ ಮಾದರಿಯಲ್ಲೇ ’ಸ್ಕಿಲ್ ಅಟ್ ಸ್ಕೂಲ್’ ಯೋಜನೆಯನ್ನು ಘೋಷಿಸಿದೆ.
ಯುಜಿಸಿ ಮಾರ್ಗಸೂಚಿ-2025ನ್ನು ಬಹಿರಂಗವಾಗಿ ವಿರೋಧಿಸುವ ರಾಜ್ಯ ಸರ್ಕಾರವು ಅದರಲ್ಲಿರುವಂತೆಯೇ, ರಾಜ್ಯದ ಸರ್ಕಾರಿ ಇಂಜಿನಿಯರಿಂಗ್ ಕಾಲೇಜಿನಲ್ಲಿ ’ಪ್ರೊಫೆಸರ್ ಆಫ್ ಪ್ರಾಕ್ಟಿಸ್’ ಅನ್ನು ಜಾರಿಗೊಳಿಸಿದೆ. ಕಾಂಗ್ರೆಸ್ ಮತ್ತು ಬಿಜೆಪಿ ಎರಡೂ ಒಂದೇ ಎಂಬುದನ್ನು ಇದು ಸ್ಪಷ್ಟ ಪಡಿಸುತ್ತದಷ್ಟೆ!ಪ್ರಕಟಣೆ ಇವರಿಂದ, ಕಂಬಳಿ ಮಂಜುನಾಥ ಜಿಲ್ಲಾ ಕಾರ್ಯದರ್ಶಿಗಳುಎಐಡಿಎಸ್‌ಓ ಬಳ್ಳಾರಿ