ಜನಾದೇಶ ಒಪ್ಪಿಕೊಳ್ಳಿ: ಶಿಂದೆ

Opposition parties are working to mislead people regarding EVM

ಮುಂಬೈ 08: ಮಹಾರಾಷ್ಟ್ರದಲ್ಲಿ ವಿರೋಧ ಪಕ್ಷಗಳು ಇವಿಎಂ ವಿಚಾರದಲ್ಲಿ ಜನರ ದಾರಿತಪ್ಪಿಸುವ ಕೆಲಸ ಮಾಡುತ್ತಿವೆ ಎಂದು ಉಪ ಮುಖ್ಯಮಂತ್ರಿ ಏಕನಾಥ ಶಿಂದೆ ಆರೋಪಿಸಿದರು. ಅಲ್ಲದೆ, ವಿರೋಧ ಪಕ್ಷಗಳು ಜನರ ತೀರ್ಪನ್ನು ಒಪ್ಪಿಕೊಳ್ಳುತ್ತಿಲ್ಲ ಎಂದು ದೂರಿದರು.

‘ಮಹಾಯುತಿ ಮೈತ್ರಿಕೂಟ’ವು ತಾನು ಮಾಡಿದ ಕೆಲಸಗಳ ಕಾರಣದಿಂದಾಗಿ ವಿಧಾನಸಭಾ ಚುನಾವಣೆಯಲ್ಲಿ ಜಯ ಸಾಧಿಸಿದೆ. ಜನಾದೇಶವನ್ನು ‘ಮಹಾ ವಿಕಾಸ ಆಘಾಡಿ’ ಮೈತ್ರಿಕೂಟವು ಒಪ್ಪಿಕೊಳ್ಳಬೇಕು, ಅಭಿವೃದ್ಧಿ ಕಾರ್ಯಗಳಲ್ಲಿ ಸರ್ಕಾರವನ್ನು ಬೆಂಬಲಿಸಬೇಕು ಎಂದು ಶಿಂದೆ ಹೇಳಿದರು.

ಇವಿಎಂಗಳಲ್ಲಿ ಆಗಿರುವ ಅಕ್ರಮದ ಕಾರಣದಿಂದಾಗಿ ತಮಗೆ ಸೋಲಾಗಿದೆ ಎಂದು ವಿರೋಧ ಪಕ್ಷಗಳು ಆರೋಪಿಸಿವೆ. ಚುನಾವಣೆಗಳಲ್ಲಿ ಮತ್ತೆ ಮತಪತ್ರಗಳ ಬಳಕೆ ಆರಂಭಿಸಬೇಕು ಎಂದು ಅವು ಒತ್ತಾಯಿಸಿವೆ.

‘ನೀವು ಜಯ ಸಾಧಿಸಿದಾಗ ಇವಿಎಂ ಹಗರಣ ಆಗಿರುವುದಿಲ್ಲ. ಆದರೆ ನೀವು ಚುನಾವಣೆಯಲ್ಲಿ ಸೋತಾಗ ಮತಯಂತ್ರಗಳು ಕೆಟ್ಟದ್ದಾಗಿ ಕಾಣುತ್ತವೆ. ಇದು ಸರಿಯಾದ ನಡೆ ಅಲ್ಲ’ ಎಂದು ಶಿಂದೆ ಅವರು ವಿರೋಧ ಪಕ್ಷಗಳನ್ನು ಗುರಿಯಾಗಿಸಿಕೊಂಡು ಹರಿಹಾಯ್ದರು.

ವಿರೋಧ ಪಕ್ಷಗಳ ಸ್ಥಾನ ಯಾವುದು ಎಂಬುದನ್ನು ಜನರು ತೋರಿಸಿಕೊಟ್ಟಿದ್ದಾರೆ, ಮನೆಯಲ್ಲಿಯೇ ಕುಳಿತಿರುವವರಿಗೆ ತಾವು ಮತ ನೀಡುವುದಿಲ್ಲ ಎಂಬುದನ್ನು ಸಾಬೀತು ಮಾಡಿದ್ದಾರೆ ಎಂದು ಹೇಳಿದರು.