ವಿರೋಧ ಪಕ್ಷದ ನಾಯಕ ಸ್ಥಾನ ಏನು ಬೇಡ, ಕಾರು-ಮನೆ ಬೇಕಿದ್ದವರು ಅಲಂಕರಿಸಲಿ-ಡಿ.ಕೆ.ಶಿವಕುಮಾರ್

 ಬೆಂಗಳೂರು ಆಗಸ್ಟ್ 25     ತಮಗೆ ಯಾವ ವಿರೋಧ ಪಕ್ಷದ ಸ್ಥಾನವೂ ಬೇಡ ಎಂದು ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಬೆಂಗಳೂರಿನಲ್ಲಿಂದು ಹೇಳಿದ್ದಾರೆ.     ಸಮ್ಮಿಶ್ರ ಸರ್ಕಾರ ಪತನಗೊಳ್ಳಲು ಸಿದ್ದರಾಮಯ್ಯ ಕಾರಣ ಅನ್ನೋ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಹೇಳಿಕೆ ವಿಷಯ ಕುರಿತು ಸುದ್ದಿಗಾರರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಕುಮಾರಸ್ವಾಮಿ ಹೇಳಿಕೆ ಬಗ್ಗೆ ನನಗೇನು ಗೊತ್ತಿಲ್ಲ. ಈ ವಿಷಯ ಕುರಿತು ದಿನಪತ್ರಿಕೆಯಲ್ಲಿ ಓದಿದ್ದೇನಷ್ಟೇ. ಕುಮಾರಸ್ವಾಮಿ ಆರೋಪದ ಬಗ್ಗೆ ತಮಗೆ ಗೊತ್ತಿಲ್ಲ. ಕುಮಾರಸ್ವಾಮಿ,ದೇವೇಗೌಡ, ಸಿದ್ದರಾಮಯ್ಯ ಹೇಳಿಕೆಗಳನ್ನು ನೀಡಿದ್ದಾರೆ ಅಂತ ತಿಳಿದಿದೆ. ಆದರೆ, ಇವರ ಮಾತಿಗೆಲ್ಲ ನಾನು ಉತ್ತರ ನೀಡಲು ಆಗುವುದಿಲ್ಲ. ಮತ್ತು ತಮಗೆ ಸಮಯವೂ ಇಲ್ಲ.  ದಯವಿಟ್ಟು ತಮ್ಮನ್ನು ಒಂಟಿಯಾಗಿರಲು ಬಿಟ್ಟುಬಿಡಿ ಎಂದು ಹೇಳಿದ್ದಾರೆ.     ತಾವು ಸಮ್ಮಿಶ್ರ ಸರ್ಕಾರದಲ್ಲಿ ಮುಖ್ಯಮಂತ್ರಿ ಅಧೀನದಲ್ಲಿ  14 ತಿಂಗಳು ಕೆಲಸ ಮಾಡಿದ್ದೇನೆ. ಏನೇ ಕೆಲಸ ಮಾಡಿದ್ದರೂ ತಮ್ಮ ಇಲಾಖೆಗೆ ಸಂಬಂಧಿಸಿದ ಕೆಲಸಗಳಿಗೆ ಬದ್ದನಾಗಿದ್ದೇನೆ ಅಷ್ಟೆ. ನನಗೆ ಯಾವ ವಿರೋಧ ಪಕ್ಷದ ನಾಯಕನ ಸ್ಥಾನವೂ ಬೇಡ. ಈ ಸ್ಥಾನ ಯಾರಿಗೆ ಅವಸರವಿದೆಯೋ ಅವರು ಅದನ್ನು ಅಲಂಕರಿಸಲಿ. ಕಾರು ಬೇಕಾದವರು, ಮನೆ ಬೇಕಿದ್ದವರು ಆ ಸ್ಥಾನಕ್ಕೆ ಹೋಗಲಿ. ನನಗೆ ಶಾಶ್ವತ ಮನೆ ಇದೆ. ನನಗೆ ಯಾವ ಅಧಿಕಾರವೂ ಅವಶ್ಯಕತೆ ಇಲ್ಲ ಎಂದು ಅವರು ಸಿದ್ದರಾಮಯ್ಯ ಅವರಿಗೆ ಪರೋಕ್ಷ ಟಾಂಗ್ ನೀಡಿದ್ದಾರೆ.     ಪಕ್ಷದ ನಾಯಕತ್ವ ಯಾವುದೇ ತೀರ್ಮಾನ ತೆಗೆದುಕೊಳ್ಳಲಿ. ಅದಕ್ಕೆ ನಾನು ಬದ್ಧ. ಎಐಸಿಸಿ ಪ್ರಧಾನ ಕಾರ್ಯದರ್ಶಿ  ನಾಳೆ ನಗರಕ್ಕೆ ಬರುತ್ತಿರುವುದಾಗಿ ತಿಳಿಸಿದ್ದಾರೆ. ಎಲ್ಲರ ಜೊತೆ ಮಾತನಾಡಿ ತೀರ್ಮಾನ ತೆಗೆದುಕೊಳ್ಳಲಿದ್ದಾರೆ. ಎಲ್ಲರ ಜೊತೆ ಮಾತಾಡಿ ತೀರ್ಮಾನ ತೆಗೆದುಕೊಳ್ತಾರೆ. ಪಕ್ಷಕ್ಕೆ ಒಳ್ಳೆಯದಾಗೋ ತೀರ್ಮಾನವನ್ನೇ ಅವರು ತೆಗೆದುಕೊಳ್ತಾರೆ ಎಂದು ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.