ಗಾಂಧಿ ಹಂತಕ ಗೋಡ್ಸೆ ದೇಶಭಕ್ತ ಪ್ರಗ್ಯಾ ಸಿಂಗ್ ಹೇಳಿಕೆ ವಿರೋಧಿಸಿ, ಲೋಕಸಭೆಯಲ್ಲಿ ವಿಪಕ್ಷಗಳ ಸಭಾತ್ಯಾಗ

LOKA SABHA

ನವದೆಹಲಿ, ನ 28- ರಾಷ್ಟ್ರಪಿತ  ಮಹಾತ್ಮ ಗಾಂಧಿಯವರ  ಹಂತಕ ನಾಥೂರಾಂ ಗೋಡ್ಸೆ ಕುರಿತು ಬಿಜೆಪಿ ಸಂಸದೆ  ಪ್ರಗ್ಯಾ  ಸಿಂಗ್ ಠಾಕೂರ್ ಹೇಳಿಕೆಗೆ ಆಕ್ರೋಶ ವ್ಯಕ್ತಪಡಿಸಿ,   ಬಿಜೆಪಿ ನೇತೃತ್ವದ ಸರ್ಕಾರ ಗಾಂಧಿ ಹೆಸರನ್ನು  ರಾಜಕೀಯ ಲಾಭಗಳಿಗೆ ಬಳಸುತ್ತಿದೆ ಎಂದು ಆರೋಪಿಸಿ ಲೋಕಸಭೆಯಲ್ಲಿ  ಗುರುವಾರ  ಪ್ರತಿಪಕ್ಷಗಳಾದ  ಕಾಂಗ್ರೆಸ್,ತೃಣಮೂಲ ಕಾಂಗ್ರೆಸ್ ಹಾಗೂ ಡಿಎಂಕೆ ಸದಸ್ಯರು ಸಭಾತ್ಯಾಗ ನಡೆಸಿದರು.

 ಲೋಕಸಭೆ  ಬೆಳಗ್ಗೆ ಸಮಾವೇಶಗೊಳ್ಳುತ್ತಿದ್ದಂತೆ. ಅಗಲಿದ ಗಣ್ಯರಿಗೆ   ಸಂತಾಪ ಸೂಚನೆ ಅಂಗೀಕರಿಸಿದ ನಂತರ,  ಕಾಂಗ್ರೆಸ್ ನಾಯಕ ಅಧೀರ್ ರಂಜನ್ ಚೌಧರಿ,   ಸಾಧ್ವಿ ಪ್ರಗ್ಯಾ ಸಿಂಗ್ ಠಾಕೂರ್  ರಾಷ್ಟ್ರಪಿತ  ಮಹಾತ್ಮ ಗಾಂಧಿಯವರನ್ನು ಹತ್ಯೆಗೈದಿದ್ದ  ನಾಥೂರಾಂ ಗೋಡ್ಸೆಯನ್ನು ದೇಶಭಕ್ತ ಎಂದು ಕೊಂಡಾಡಿರುವುದನ್ನು ಖಂಡಿಸಿದರು.   ಬಿಜೆಪಿ ಭಯೋತ್ಪಾದಕರ ಪಕ್ಷ ಎಂದು ಅವರು  ಆರೋಪಿಸಿದರು.

'ಬಿಜೆಪಿ  ಸಂಸದೆಯೊಬ್ಬರು ಗೋಡ್ಸೆಯನ್ನು  ದೇಶಭಕ್ತ ಎಂದು ಕರೆಯುತ್ತಿದ್ದಾರೆ..  ಮತ್ತೊಂದೆಡೆ ಮಹಾತ್ಮ ಗಾಂಧಿ ಹೆಸರು ಬಳಸಿ  ಬಿಜೆಪಿ ಸರ್ಕಾರ ರಾಜಕೀಯ ಲಾಭಪಡೆದುಕೊಳ್ಳುತ್ತಿದೆ  ಎಂದು ಹೇಳಿದರು.

 ಕಾಂಗ್ರೆಸ್  ನಡೆಸಿದ ಪ್ರತಿಭಟನೆಯಲ್ಲಿ   ಡಿಎಂಕೆ, ತೃಣಮೂಲ ಹಾಗೂ ಎಐಎಂಎಂ ಸದಸ್ಯರು ಪಾಲ್ಗೊಂಡು, ಈ ವಿಷಯ ಕುರಿತು  ಚರ್ಚೆಯಾಗಬೇಕು ಎಂದು ಒತ್ತಾಯಿಸಿದರು

 ಪ್ರಗ್ಯಾ ಸಿಂಗ್ ಠಾಕೂರ್  ಲೋಕಸಭೆಯಲ್ಲಿ  ನಿನ್ನೆ  ನೀಡಿದ್ದ ಹೇಳಿಕೆಯನ್ನು ಈಗಾಗಲೇ  ದಾಖಲೆಗಳಿಂದ  ತೆಗೆಸಿರುವುದಾಗಿ ಹೇಳಿ  ಆಕ್ರೋಶಗೊಂಡ ಸದಸ್ಯರ ಮನವೊಲಿಸಲು  ಸ್ಪೀಕರ್  ಓಂ ಬಿರ್ಲಾ ಇನ್ನಿಲ್ಲದ ಪ್ರಯತ್ನ ನಡೆಸಿದರು.

 ನೀವೆಲ್ಲಾ   ಈ ಸದನದ  ಹಿರಿಯ ಸದಸ್ಯರು..  ಸದಸ್ಯೆ ಪ್ರಜ್ಯಾ ಸಿಂಗ್  ನೀಡಿದ್ದ ಹೇಳಿಕೆಯನ್ನು ಈಗಾಗಲೇ ದಾಖಲೆಯಿಂದ  ತೆಗೆಯುವಂತೆ  ಆದೇಶಿಸಿದ್ದೇನೆ. ಆಕೆಯ ಹೇಳಿಕೆ  ಸದನದ ದಾಖಲೆಗಳಲ್ಲಿ ಸೇರುವುದಿಲ್ಲ ಹಾಗಾಗಿ  ವಿಷಯದ ಕುರಿತು  ಚರ್ಚೆಯ ಅಗತ್ಯವಿಲ್ಲ ಎಂದು ಸ್ಪೀಕರ್   ಪ್ರತಿಪಕ್ಷಗಳ  ಸದಸ್ಯರ ಸಮಾಧಾನ ಪಡಿಸಲು ಯತ್ನಿಸಿದರು.

 ನಿನ್ನೆ ವಿಶೇಷ ರಕ್ಷಣಾ ಪಡೆ( ಎಸ್ ಪಿಜಿ)  ತಿದ್ದುಪಡಿ ಮಸೂದೆಯ ಮೇಲೆ  ಸದನದಲ್ಲಿ ಚರ್ಚೆ ನಡಯುತ್ತಿದ್ದಾಗ,   ಬಿಜೆಪಿ ಸದಸ್ಯೆ ಪ್ರಗ್ಯಾ ಸಿಂಗ್ ಠಾಕೂರ್,  ಗಾಂಧಿ ಹಂತಕ ನಾಥೂರಾಂ ಗೋಡ್ಸೆ ಒಬ್ಬ ದೇಶ ಭಕ್ತ ಎಂದು ನೀಡಿದ್ದ ಹೇಳಿಯನ್ನು   ಸ್ಪೀಕರ್ ಓಂ ಬಿರ್ಲಾ  ದಾಖಲೆಯಿಂದ  ತೆಗೆಯುವಂತೆ ಆದೇಶಿಸಿದ್ದರು. ನಂತರ ಪ್ರತಿಪಕ್ಷಗಳು ಪ್ರಜ್ಯಾ ಸಿಂಗ್  ಹೇಳಿಕೆಗೆ ಆಕ್ರೋಶ ವ್ಯಕ್ತಪಡಿಸಿ ಸಭಾ ತ್ಯಾಗ ನಡೆಸಿದ್ದವು

 ಮಧ್ಯಪ್ರವೇಶಿಸಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್,  ಬಿಜೆಪಿ ಇಂತಹ ಹೇಳಿಕೆಯನ್ನು ತೀವ್ರವಾಗಿ ಖಂಡಿಸುವ ಜತೆ ಅಂತಹ ಆಲೋಚನೆ ಹೊಂದುವುದನ್ನು ತೀವ್ರವಾಗಿ ವಿರೋಧಿಸಲಿದೆ ಎಂದರು.

 ನಮ್ಮ ಪಕ್ಷ  ಇಂತಹ ಹೇಳಿಕೆಗಳನ್ನು  ಖಂಡಿಸುವುದಲ್ಲದೆ, ಅಂತಹ ಅಲೋಚನೆ ಹಾಗೂ ಮನೋಭಾವವನ್ನು ವಿರೋಧಿಸಲಿದೆ .  ಇಂತಹ ಯಾವುದೇ ಹೇಳಿಕೆ ಅಥವಾ ಸಿದ್ದಾಂತವನ್ನು  ಬಿಜೆಪಿ ಬೆಂಬಲಿಸುವುದಿಲ್ಲ,  ನಾಥೂರಾಂಗೋಡ್ಸೆ ದೇಶ ಭಕ್ತ ಎಂದು ಕರೆಯುವುದು ಇಲ್ಲಿಗೆ ನಿಲ್ಲಬೇಕು ಎಂದು ಹೇಳಿದರು.

  ಮಹಾತ್ಮ ಗಾಂಧಿಯವರ   ತತ್ವ ಸಿದ್ಧಾಂತಗಳು  ಈ ಹಿಂದೆಯೂ ಪ್ರಸ್ತುತ, ಇಂದೂ ಕೂಡಾ  ಹೆಚ್ಚು ಪ್ರಸ್ತುತ ಎಂದು  ರಾಜನಾಥ್ ಸಿಂಗ್ ಹೇಳಿದರು

 ಸರ್ಕಾರದ ಉತ್ತರದಿಂದ ಸಮಾಧಾನಗೊಳ್ಳದ  ಪ್ರತಿಪಕ್ಷಗಳು   ಸಭಾ ತ್ಯಾಗ ನಡೆಸಿದವು